ADVERTISEMENT

ಶಿಕ್ಷಕರ ದಿನಾಚರಣೆ: ತುಂಬಿ ತುಳುಕಿದ ಹರ್ಷೋತ್ಸಾಹ

ಚಿತ್ರದುರ್ಗ ಜಿಲ್ಲಾ ಮಟ್ಟದ ಉತ್ತಮ, ವಿಶೇಷ ಶಿಕ್ಷಕ ಪ್ರಶಸ್ತಿ ವಿತರಣಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 7:50 IST
Last Updated 6 ಸೆಪ್ಟೆಂಬರ್ 2021, 7:50 IST
ಚಿತ್ರದುರ್ಗದಲ್ಲಿ ಭಾನುವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾಮಟ್ಟದ ಉತ್ತಮ, ವಿಶೇಷ ಶಿಕ್ಷಕರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಡಿಡಿಪಿಐ ಕೆ. ರವಿಶಂಕರ್ ರೆಡ್ಡಿ ಇದ್ದರು
ಚಿತ್ರದುರ್ಗದಲ್ಲಿ ಭಾನುವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾಮಟ್ಟದ ಉತ್ತಮ, ವಿಶೇಷ ಶಿಕ್ಷಕರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಡಿಡಿಪಿಐ ಕೆ. ರವಿಶಂಕರ್ ರೆಡ್ಡಿ ಇದ್ದರು   

ಚಿತ್ರದುರ್ಗ: ನೂರಾರು ಶಿಕ್ಷಕರಲ್ಲಿ ಉತ್ಸಾಹ ತುಂಬಿ ತುಳುಕುತ್ತಿತ್ತು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಜಿಲ್ಲಾಮಟ್ಟದ ಉತ್ತಮ, ವಿಶೇಷ ಶಿಕ್ಷಕ ಪ್ರಶಸ್ತಿ ಪಡೆಯಲು ಆಯ್ಕೆಯಾದವರು ಕಾತುರದಿಂದ ಕಾಯುತ್ತಿದ್ದರು. ಪ್ರಶಸ್ತಿ ಪಡೆದ ಬಳಿಕ ಮಂದಹಾಸ ಬೀರಿದರು.

ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಡಾ.ಸರ್ಪಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಹಾಗೂ ಜಿಲ್ಲಾಮಟ್ಟದ ಉತ್ತಮ, ವಿಶೇಷ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಂಡ ದೃಶ್ಯವಿದು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ‘ದೇಶಕ್ಕೆ ಉತ್ತಮ ಪ್ರಜೆಯನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನೀವು ಗುರು ಮಾತ್ರವಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗೂ ಮೊದಲ ಸ್ನೇಹಿತರಾಗಿದ್ದೀರಿ. ಆದ್ದರಿಂದ ಜಿಲ್ಲೆಯ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತೀರಿ ಎಂಬ ವಿಶ್ವಾಸವಿದೆ’ ಎಂದರು.

ADVERTISEMENT

‘ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗಬಾರದು ಎಂಬ ಕಾರಣಕ್ಕಾಗಿ ಆನ್‌ಲೈನ್‌ ತರಗತಿಗಳ ಜತೆಗೆ ಮನೆಬಾಗಿಲಿಗೆ ತೆರಳಿ ಆಫ್‌ಲೈನ್ ತರಗತಿ ಕೂಡ ಮಾಡಿದ ಪರಿಣಾಮ ಎಸ್ಸೆಸ್ಸೆಲ್ಸಿಯಲ್ಲಿ ಅನೇಕ ಮಕ್ಕಳು ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು. ಎಲ್ಲ ಶಿಕ್ಷಕರ ಕಾರ್ಯವೈಖರಿ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ‘ಹಿಂದುಳಿದ ಜಿಲ್ಲೆಯಾದರೂ ಮಕ್ಕಳ ಶೈಕ್ಷಣಿಕ ಬೆಳವಣಿಗೆ ವಿಚಾರದಲ್ಲಿ ಶಿಕ್ಷಣ ಇಲಾಖೆಯ ಪ್ರತಿಯೊಬ್ಬರು ತಂಡವಾಗಿ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಆಶ್ಚರ್ಯ ಉಂಟುಮಾಡಿದೆ. ನಿಮ್ಮ ಶ್ರಮಕ್ಕೆ ಈ ಬಾರಿಯೂ ಉತ್ತಮ ಫಲ ಸಿಕ್ಕಿದೆ’ ಎಂದು
ಶ್ಲಾಘಿಸಿದರು.

‘ಶಿಕ್ಷಕರಿಲ್ಲದೇ ಯಾವುದೇ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗಾಗಿ ಶಿಕ್ಷಕರು ಪಠ್ಯ ವಿಷಯದ ಜೊತೆಗೆ ಪಠ್ಯೇತರ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲೆಯ ಮಕ್ಕಳನ್ನು ದೇಶಕ್ಕೆ ಕೀರ್ತಿ ತರುವ ನಿಟ್ಟಿನಲ್ಲಿ ತಯಾರು ಮಾಡಬೇಕು’ ಎಂದು ಸಲಹೆ ನೀಡಿದರು.

ಸಿಟಿಇ ಪ್ರಾಂಶುಪಾಲ ಎಚ್. ಮಂಜುನಾಥ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಮಂಜುನಾಥ್, ಡಯಟ್ ಪ್ರಾಂಶುಪಾಲ ಎಸ್‍ಕೆಬಿ ಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಈಶ್ವರಪ್ಪ, ಶಿಕ್ಷಕರ ಸಂಘಗಳ ಪದಾಧಿಕಾರಿಗಳಾದ ಮಹಾಂತೇಶ್, ನಾಗರಾಜ್, ತಿಮ್ಮಾರೆಡ್ಡಿ, ಹನುಮಂತಪ್ಪ, ಜಯಣ್ಣ, ಶಿವಣ್ಣ, ಮಹಮ್ಮದ್ ಗೌಸ್
ಇದ್ದರು.

ಜನಪ್ರತಿನಿಧಿಗಳು ಗೈರು

ಜಿಲ್ಲಾಮಟ್ಟದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಯಾವೊಬ್ಬ ಜನಪ್ರತಿನಿಧಿಯೂ ಹಾಜರಾಗದೇ, ಗೈರಾಗಿದ್ದರು. ಇದು ಹಲವು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಯಿತು. ಶಿಕ್ಷಕರ ಸಮಸ್ಯೆ ಆಲಿಸಿ ಬಗೆಹರಿಸಬೇಕಾದವರೇ ಬಂದಿಲ್ಲ ಎಂದು ನೆರೆದಿದ್ದ ಶಿಕ್ಷಕರಲ್ಲಿ ಕೆಲವರು ಮಾತನಾಡಿಕೊಳ್ಳುತ್ತಿದ್ದರು.

ಹೆಣ್ಣುಮಕ್ಕಳ ಮೇಲೆ ನಿಗಾವಹಿಸಿ

‘ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಮುಂಚೆಯೇ ಬೇರೆಯವರ ಜತೆ ಹೋಗುವಂಥ ಹೆಣ್ಣುಮಕ್ಕಳ ಉದಾಹರಣೆ ಸಾಕಷ್ಟು ಸಿಗುತ್ತಿವೆ. ಮುಂದಿನ ಅವರ ಭವಿಷ್ಯ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆಯಲ್ಲ. ಇದನ್ನು ಶಿಕ್ಷಕರು ಮನಸ್ಸು ಮಾಡಿದರೆ ತಡೆಯಬಹುದು’ ಎಂದು ಜಿ.ರಾಧಿಕಾ ಸಲಹೆ ನೀಡಿದರು.

‘ಮಕ್ಕಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೆ ಅದಕ್ಕೆ ತೃಪ್ತಿಪಡಬೇಡಿ. ಕಲೆ, ಕ್ರೀಡೆ ಸೇರಿ ದೈಹಿಕ ಚಟುವಟಿಕೆ ಒಳಗೊಂಡು ಪಠ್ಯೇತರ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಿದಾಗ ಮಾತ್ರ ತಾನಾಗಿಯೇ ಸುಂದರ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗುತ್ತದೆ. ಈ ಕುರಿತು ಗಮನಹರಿಸಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.