ಚಳ್ಳಕೆರೆ: ‘ಸಮಾಜದಲ್ಲಿ ದುಶ್ಚಟಗಳ ವ್ಯಸನಿಗಳಾಗದೆ ದೈಹಿಕ ಚಟುವಟಿಕೆಯಲ್ಲಿ ಸದಾ ತೊಡಗಿಸಿಕೊಂಡು ವೈದ್ಯರ ಸಲಹೆ ಪಡೆದು ನಾವೆಲ್ಲರೂ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಲ್ಯಾಪರೋಸ್ಕೋಪಿ, ಹೆರಿಗೆ ಮತ್ತು ಬಂಜೆತನ ನಿವಾರಣಾ ಕೇಂದ್ರ, ಸಿಜಿಎಸ್ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೃದಯ ಆರೋಗ್ಯ ಸಂರಕ್ಷಣೆ ಹಾಗೂ ಮಧುಮೇಹ ಸಲಹೆ ಮತ್ತು ಸ್ಪಂದನ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸೇವಿಸುವ ಆಹಾರ ಮತ್ತು ಆಧುನಿಕ ಜೀವನ ಶೈಲಿ ಜನರ ಆರೋಗ್ಯ ತೊಂದರೆಗೆ ಹೆಚ್ಚು ಕಾರಣವಾಗುತ್ತಿದೆ. ಹೀಗಾಗಿ ಆರೋಗ್ಯ ಸಂರಕ್ಷಣೆಗೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಬೆಂಗಳೂರು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ಮಾತನಾಡಿ, ರಾಜ್ಯದಲ್ಲಿ ಪ್ರತಿದಿನ 100ಕ್ಕೆ ಶೇ 40ರಿಂದ 50ರಷ್ಟು ಜನ ಹೃದಯಾಘಾತಕ್ಕೆ ಒಳಗಾಗುತ್ತಿದ್ದು, ಶೇ 20ರಷ್ಟು ಯುವಕರೇ ಆಗಿರುತ್ತಾರೆ. ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗದಂತೆ ಎಚ್ಚರಿಕೆ ವಹಿಸಬೇಕು. ಉತ್ತಮ ಆಹಾರ ಸೇವನೆ, ಜೀವನಶೈಲಿ ಜತೆಗೆ ಪ್ರತಿದಿನ ಧ್ಯಾನ, ಯೋಗಾಭ್ಯಾಸ, ವ್ಯಾಯಾಮ ಅಲ್ಲದೇ ದಿನಕ್ಕೆ ಕನಿಷ್ಠ 1 ಗಂಟೆ ನಡೆಯುವುದನ್ನು ರೂಢಿಸಿಕೊಳ್ಳುವ ಮೂಲಕ ಹೃದಯ ಸಂರಕ್ಷಣೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ತುಮಕೂರು ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಸಲಹಾ ತಜ್ಞ ಡಾ.ಆರ್.ಮುದ್ದುರಂಗಪ್ಪ ಮಾತನಾಡಿ, ‘ಹೃದಯ, ಮಧುಮೇಹ ಮತ್ತು ವಿಷಜಂತು ಕಡಿತಕ್ಕೆ ನಾಟಿ ಚಿಕಿತ್ಸೆ ಒಳಿತಲ್ಲ. ನಿರಂತರ ಇನ್ಸುಲಿನ್ ಮತ್ತು ಮಾತ್ರೆ ಸೇವನೆ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ಪ್ರತಿ 2–3 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಹೇಳಿದರು.
ಸಾಹಿತಿ ಪ್ರೊ.ಸಿ.ಶಿವಲಿಂಗಪ್ಪ, ಜಾನಪದ ವಿದ್ವಾಂಸ ಮೀರಾಸಾಬಿಹಳ್ಳಿ ಶಿವಣ್ಣ, ಸಾಹಿತಿ ತಿಪ್ಪಣ್ಣ ಮರಿಕುಂಟೆ, ಬೆಂಗಳೂರು ಪ್ರೊ.ಜಿ.ಶರಣಪ್ಪ, ತುಮಕೂರು ಮಕ್ಕಳ ತಜ್ಞ ಡಾ.ಎಚ್.ಹನುಮಂತರಾಯ, ಡಾ.ಕಾಂತರಾಜ ಮಾತನಾಡಿದರು.
ಕೆಪಿಪಿಸಿ ರಾಜ್ಯ ಮುಖಂಡ ನೇರಲಗುಂಟೆ ರಾಮಪ್ಪ, ನಗರಸಭೆ ಅಧ್ಯಕ್ಷೆ ಶಿಲ್ಪಾ, ಮಾಜಿ ಅಧ್ಯಕ್ಷೆ ಆರ್.ಮಂಜುಳಾ, ಉಪಾಧ್ಯಕ್ಷೆ ಕವಿತಾ, ಸುಮಾ, ಸದಸ್ಯೆ ಸುಜಾತಾ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ, ಉದ್ಯಮಿ ರೇವಣ್ಣ, ಪ್ರಸೂತಿ ತಜ್ಞೆ ಡಾ.ಆರ್.ಪೂಜಾ, ಡಾ.ಸಿ.ಜಯಂತ್, ಡಾ.ಆದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.