ADVERTISEMENT

ಪತ್ರಿಕಾ ಮಾಧ್ಯಮದಲ್ಲಿ ಜೀವಂತಿಕೆ ಇದೆ: ಬಿಜೆಪಿ ರಾಜ್ಯ ವಕ್ತಾರ ಜಗ್ಗೇಶ್

ಬಿಜೆಪಿಯ ‘ಮಾಧ್ಯಮ ಮಂಥನ’ ಕಾರ್ಯಕ್ರಮದಲ್ಲಿ ರಾಜ್ಯ ವಕ್ತಾರ ಜಗ್ಗೇಶ್

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 15:37 IST
Last Updated 28 ಮಾರ್ಚ್ 2021, 15:37 IST
ಚಿತ್ರದುರ್ಗದಲ್ಲಿ ಬಿಜೆಪಿಯಿಂದ ಭಾನುವಾರ ನಡೆದ ‘ಮಾಧ್ಯಮ ಮಂಥನ’ ಕಾರ್ಯಕ್ರಮವನ್ನು ಪಕ್ಷದ ರಾಜ್ಯ ವಕ್ತಾರರಾದ ತೇಜಸ್ವಿನಿ ಗೌಡ, ಜಗ್ಗೇಶ್‌, ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಉದ್ಘಾಟಿಸಿದರು.
ಚಿತ್ರದುರ್ಗದಲ್ಲಿ ಬಿಜೆಪಿಯಿಂದ ಭಾನುವಾರ ನಡೆದ ‘ಮಾಧ್ಯಮ ಮಂಥನ’ ಕಾರ್ಯಕ್ರಮವನ್ನು ಪಕ್ಷದ ರಾಜ್ಯ ವಕ್ತಾರರಾದ ತೇಜಸ್ವಿನಿ ಗೌಡ, ಜಗ್ಗೇಶ್‌, ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಉದ್ಘಾಟಿಸಿದರು.   

ಚಿತ್ರದುರ್ಗ: ‘ಸಾಮಾಜಿಕ ಜಾಲತಾಣಗಳು ತಲೆಬುಡವಿಲ್ಲದ ಮಾಧ್ಯಮವಾಗುತ್ತಿದೆ. ಆದರೆ, ಪತ್ರಿಕಾ ಮಾಧ್ಯಮದಲ್ಲಿ ನೈಜತೆ ಮತ್ತು ಜೀವಂತಿಕೆ ಇದೆ’ ಎಂದು ನಟ, ಬಿಜೆಪಿ ರಾಜ್ಯ ವಕ್ತಾರ ಜಗ್ಗೇಶ್ ಹೇಳಿದರು.

ಇಲ್ಲಿನ ಅಮೋಘ ಇಂಟರ್‌ನ್ಯಾಷನಲ್‌ ಹೋಟೆಲ್‌ನಲ್ಲಿ ಬಿಜೆಪಿಯಿಂದ ಭಾನುವಾರ ಚಿತ್ರದುರ್ಗ, ದಾವಣಗೆರೆ, ತುಮಕೂರು ವಿಭಾಗಗಳ ಪಕ್ಷದ ಮಾಧ್ಯಮ ಕಾರ್ಯಕರ್ತರಿಗಾಗಿ ಆಯೋಜಿಸಿದ್ದ ‘ಮಾಧ್ಯಮ ಮಂಥನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜದಲ್ಲಿ ಖ್ಯಾತಿ ಗಳಿಸಿದವರ ಹೆಸರಿಗೆ ಕ್ಷಣಾರ್ಧದಲ್ಲೇ ಮಸಿ ಬಳಿಯುವ ಪ್ರಯತ್ನ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿದೆ. ಅದನ್ನು ಬಿಟ್ಟು ಉತ್ತಮ ಕಾರ್ಯಗಳಿಗಾಗಿ ಯಾವುದೋ ಒಂದು ಕುಗ್ರಾಮದಲ್ಲಿ ಕೂತು ವಿಶ್ವವನ್ನು ತಲುಪುವ ಸಾಧನವಾಗಿ ಬಳಸಿಕೊಳ್ಳಬೇಕಿದೆ. ಜ್ಞಾನಾರ್ಜನೆಗಾಗಿ ದಿನಕ್ಕೆ ಕನಿಷ್ಠ ಎರಡು ಪತ್ರಿಕೆಗಳನ್ನಾದರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.

ADVERTISEMENT

‘ಈಗಿನಂತೆ ಹಿಂದೆಲ್ಲಾ ದೃಶ್ಯ ಮಾಧ್ಯಮಗಳು ಇರಲಿಲ್ಲ. ಪತ್ರಿಕೆಯೊಂದರಲ್ಲಿ ನನ್ನ ಕುರಿತು ಬಂದ ಚಿಕ್ಕ ಅಂಕಣದಿಂದಾಗಿ ಸಾಕಷ್ಟು ಸಿನಿಮಾಗಳಲ್ಲಿ ಅವಕಾಶ ದೊರೆಯಿತು. ಮಾಧ್ಯಮದ ಶಕ್ತಿಯೇ ಅಂಥದ್ದು. ಮಾಧ್ಯಮದಿಂದಲೇ ಬೆಳೆದ ನಾನು ಅದನ್ನು ಎಂದಿಗೂ ಮರೆಯಲಾರೆ’ ಎಂದರು.

‘ಪ್ರತಿಯೊಬ್ಬರೂ ತಂದೆ–ತಾಯಿಗೆ ಭುಜ ಕೊಟ್ಟು ನಿಂತಾಗ ನಿಮ್ಮ ಕುಟುಂಬಕ್ಕೆ ನೀವೇ ನಾಯಕರಾಗಲಿದ್ದೀರಿ. ಜತೆಗೆ ಸಮಾಜಕ್ಕಾಗಿ ಕೊಡುಗೆ ನೀಡುವ ಮನೋಭಾವ ಅಳವಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ರಾಜ್ಯ ವಕ್ತಾರರಾದ ತೇಜಸ್ವಿನಿ ಗೌಡ, ‘ಮಾಧ್ಯಮ ಕ್ಷೇತ್ರದಲ್ಲಿ ಪ್ರತಿ ಕ್ಷಣ ತಾಜಾ ಸುದ್ದಿ ಕೊಡಬೇಕಿದೆ. ಇದು ಪತ್ರಕರ್ತರಿಗೆ ಸವಾಲಿನ ಕೆಲಸವಾಗಿದೆ. ಇದನ್ನು ಕೊಡದಿದ್ದರೆ ಪತ್ರಕರ್ತರಿಗೂ ಉಳಿಗಾಲವಿಲ್ಲ, ಮಾಧ್ಯಮಗಳಿಗೂ ಇಲ್ಲ’ ಎಂದು ತಿಳಿಸಿದರು.

‘ಯಾವುದೇ ಸರ್ಕಾರ ಆಡಳಿತ ನಡೆಸಲಿ. ಅದು ಮದಿಸಿದ ಆನೆ ಇದ್ದಂತೆ. ಅದಕ್ಕೆ ಅಂಕುಶ ಹಾಕಿ ಸರಿಯಾದ ದಾರಿಯಲ್ಲಿ ಮುನ್ನಡೆಸುವ ಹೊಣೆಗಾರಿಕೆ ಮಾಧ್ಯಮ ಕ್ಷೇತ್ರದ್ದಾಗಿದೆ. ಕಟ್ಟಕಡೆಯ ವ್ಯಕ್ತಿಯ ಸಾಧನೆಯನ್ನು ಜನರಿಗೆ ತಲುಪಿಸುವ ಸಾಧನವೂ ಹೌದು’ ಎಂದರು.

ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರಳಿ, ವಿಭಾಗೀಯ ಪ್ರಭಾರ ಜಿ.ಎಂ. ಸುರೇಶ್‌, ಮುಖಂಡರಾದ ಅವಿನಾಶ್, ಪ್ರಶಾಂತ್‌ ಕಿಂಡಜ್ಜಿ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.