ಚಿತ್ರದುರ್ಗದ ಕಾರ್ಯಕ್ರಮದಲ್ಲಿ ಪ್ರಿಯಾಂಕ, ಸಿದ್ದರಾಮಯ್ಯ
ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಹೇಳಿದ ಸುಳ್ಳುಗಳು ಜನರಿಗೆ ಅರ್ಥವಾಗಿವೆ. ಹೀಗಾಗಿ, ಕರ್ನಾಟಕದಲ್ಲಿ ಮೋದಿ ಅಲೆ ಇಲ್ಲ. ಇರುವುದು ‘ಗ್ಯಾರಂಟಿ’ ಅಲೆ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿನ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಕಾಂಗ್ರೆಸ್ ಮಂಗಳವಾರ ಹಮ್ಮಿಕೊಂಡಿದ್ದ ‘ನ್ಯಾಯ ಸಂಕಲ್ಪ ರ‍್ಯಾಲಿ’ಯಲ್ಲಿ ಅವರು ಮಾತನಾಡಿದರು.
‘ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿ ಮತ್ತು ಜೆಡಿಎಸ್ ಒಗ್ಗೂಡಿ ಸ್ಪರ್ಧೆ ಮಾಡುತ್ತಿವೆ. ಎಚ್.ಡಿ.ದೇವೇಗೌಡ ಹಾಗೂ ನರೇಂದ್ರ ಮೋದಿ ಪೈಪೋಟಿಗೆ ಬಿದ್ದವರಂತೆ ಸುಳ್ಳು ಹೇಳುತ್ತಿದ್ದಾರೆ’ ಎಂದು ಕುಟುಕಿದರು.
‘ಮೋದಿ ಪ್ರಧಾನಿಯಾದರೆ ಈ ದೇಶ ಬಿಟ್ಟು ಹೋಗುತ್ತೇನೆ. ಮುಂದಿನ ಜನ್ಮದಲ್ಲಿ ಹುಟ್ಟಿದರೆ ಮುಸಲ್ಮಾನನಾಗಿ ಹುಟ್ಟುತ್ತೇನೆ’ ಎಂದು 2019ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡ ಹೇಳಿದ್ದರು. ಪ್ರಸಕ್ತ ಚುನಾವಣೆಯಲ್ಲಿ ಮೋದಿ ಜೊತೆಗೂಡಿ ಕನ್ನಡಿಗರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದರು.
----
ಚುನಾವಣೆ ಬಳಿಕ ‘ಗ್ಯಾರಂಟಿ’ ಸ್ಥಗಿತಗೊಳಿಸುವುದಾಗಿ ಅಪಪ್ರಚಾರ ಮಾಡಲಾಗುತ್ತಿದೆ. ನಾವು ಬಿಜೆಪಿ ಅಲ್ಲ. ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತೇವೆ. 2028ರವರೆಗೆ ಗ್ಯಾರಂಟಿ ಮುಂದುವರಿಯಲಿವೆ. ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.