ADVERTISEMENT

ಜಾಜೂರು: ಗ್ರಾಮ ಪಂಚಾಯಿತಿ ಕಚೇರಿಗೇ ಇಲ್ಲ ಸ್ವಂತ ಕಟ್ಟಡ ಭಾಗ್ಯ!

ಶೌಚಾಲಯವಿಲ್ಲದೇ ಸದಸ್ಯೆಯರ ಪರದಾಟ

ತಿಮ್ಮಯ್ಯ .ಜೆ ಪರಶುರಾಂಪುರ
Published 9 ಸೆಪ್ಟೆಂಬರ್ 2024, 5:56 IST
Last Updated 9 ಸೆಪ್ಟೆಂಬರ್ 2024, 5:56 IST
<div class="paragraphs"><p>ಜಾಜೂರು ಗ್ರಾಮ ಪಂಚಾಯಿತಿ&nbsp; ಕಚೇರಿಯು ವಾಲ್ಮೀಕಿ ಭವನದಲ್ಲಿ ನಡೆಯುತ್ತಿರುವುದು&nbsp;</p></div>

ಜಾಜೂರು ಗ್ರಾಮ ಪಂಚಾಯಿತಿ  ಕಚೇರಿಯು ವಾಲ್ಮೀಕಿ ಭವನದಲ್ಲಿ ನಡೆಯುತ್ತಿರುವುದು 

   

ಪರಶುರಾಂಪುರ: ಸಮೀಪದ ಜಾಜೂರು ಗ್ರಾಮ ಪಂಚಾಯಿತಿಗೆ ಸ್ವಂತ ಕಟ್ಟಡವಿಲ್ಲದ್ದರಿಂದ 6 ವರ್ಷಗಳಿಂದ ವಾಲ್ಮೀಕಿ ಭವನದಲ್ಲಿ ಕಚೇರಿ ನಡೆಯುತ್ತಿದೆ. ಮೂಲ ಸೌಲಭ್ಯಗಳಿಲ್ಲದೇ ಸಿಬ್ಬಂದಿ ಪರದಾಡುವಂತಾಗಿದೆ.

2018-19ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ₹ 18 ಲಕ್ಷ  ವೆಚ್ಚದಲ್ಲಿ ಹೊಸ ಕಟ್ಟಡ ಕಟ್ಟಲು ಇದ್ದ ಹಳೆಯ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಅದರ ಜಾಗದಲ್ಲಿ ಹೊಸ ಕಟ್ಟಡ ಕಟ್ಟಲು ಪ್ರಾರಂಭಿಸಿ ಈಗ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಅತ್ತ ಕಟ್ಟಡವೂ ಪೂರ್ಣಗೊಳ್ಳದೆ ಇತ್ತ ಮೂಲ ಸೌಲಭ್ಯವಿಲ್ಲದೆ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿ ಪರದಾಡುತ್ತಿದ್ದಾರೆ.

ADVERTISEMENT

2018ರಿಂದ 2023ರವರೆಗೆ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ಗ್ರಾಮ ಪಂಚಾಯಿತಿ ಕಚೇರಿ ಈಗ ವಾಲ್ಮೀಕಿ ಸಮುದಾಯ ಭವನಕ್ಕೆ ಸ್ಥಳಾಂತರಗೊಂಡಿದೆ. ಒಟ್ಟು 18 ಸದಸ್ಯರಿರುವ ಇಲ್ಲಿ 9 ಜನ ಮಹಿಳಾ ಸದಸ್ಯೆಯರಿದ್ದಾರೆ. ಜೊತೆಗೆ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಯರಿದ್ದಾರೆ. ಶೌಚಾಲಯ ಸೌಲಭ್ಯವಿಲ್ಲದ ಕಾರಣ ಮಹಿಳಾ ಸಿಬ್ಬಂದಿಯು ಪಕ್ಕದಲ್ಲೇ ಇರುವ ಸದಸ್ಯೆಯರ ಮನೆಗೋ ಅಥವಾ ಬಯಲು ಶೌಚಕ್ಕೋ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾರ್ವಜನಿಕರಿಗೆ ಶೌಚಾಲಯ ಕಟ್ಟಿಕೊಳ್ಳುವಂತೆ ಜಾಗೃತಿ ಮೂಡಿಸುವ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಸಿಬ್ಬಂದಿ ತಮಗೇ ಶೌಚಾಲಯ ಇಲ್ಲದಿರುವುದು ಗ್ರಾಮಸ್ಥರು ನಗುವಂತೆ ಮಾಡಿದೆ.

ಗ್ರಾಮ ಪಂಚಾಯಿತಿ ಕಟ್ಟಡದ ಕಾಮಗಾರಿ ಅರ್ಧಕ್ಕೆ ನಿಂತುಹೋಗಿದ್ದು, ಆ ಜಾಗದಲ್ಲಿ ಸೀಮೆ ಜಾಲಿ ಗಿಡ ಬೆಳೆದಿವೆ. ಜೊತೆಗೆ ಊರಿನ ಕಸ  ಹಾಕುವ ಜಾಗವಾಗಿ ಮಾರ್ಪಟ್ಟಿದೆ. ಬರೀ ಸಮುದಾಯ ಭವನಗಳಲ್ಲಿ ಪಂಚಾಯಿತಿ ಕಚೇರಿ ನಡೆಸುತ್ತಿದ್ದು ಸಂಬಂಧಿಸಿದ ಸಮುದಾಯಗಳು ಬಳಕೆ ಮಾಡಬೇಕಿದ್ದ ಭವನಗಳು ಪಂಚಾಯಿತಿಯ ಕಚೇರಿ ಬಳಕೆಯಾಗಿತ್ತಿರುವುದಕ್ಕೆ ಸಮುದಾಯದ ಜನರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಜಾಜೂರು ಈ ಹಿಂದೆ ಮಂತ್ರಿಯಾಗಿದ್ದ ದಿವಂಗತ ಮಂಜುನಾಥ ಅವರ ಹುಟ್ಟೂರು. ಭರಮಸಾಗರದ ಶಾಸಕರಾಗಿದ್ದ ಚೌಡಯ್ಯ ಅವರ ಊರೂ ಇದೇ ಆಗಿದೆ. ಈ ಊರಿನಲ್ಲಿ ಗ್ರಾಮ ಪಂಚಾಯಿತಿಗೆ ಸ್ವಂತ ಕಟ್ಟಡ ಇಲ್ಲ. ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯವೂ ಇಲ್ಲ.  

‘ಗ್ರಾ.ಪಂ. ಕಚೇರಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಈಗ ಮತ್ತೊಮ್ಮೆ ಕ್ರಿಯಾ ಯೋಜನೆ ರೂಪಿಸಿ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ’ ಎಂದು ಪಿಡಿಒ ಓಬಣ್ಣ ತಿಳಿಸಿದರು.

‘2018ರಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭವಾಗಿತ್ತು. ನಮಗೆ ಕೇವಲ ₹ 5 ಲಕ್ಷ ಅನುದಾನ ಬಂದಿದೆ. ಇನ್ನುಳಿದ ಅನುದಾನ ಬಿಡುಗಡೆಯಾಗಿಲ್ಲ. ಈಗಿನ ದರಕ್ಕೆ ತಕ್ಕಂತೆ ಮಾಡಬೇಕಾದರೆ ಹೆಚ್ಚು ಅನುದಾನದ ಅಗತ್ಯವಿದೆ’ ಎಂದು ಗುತ್ತಿಗೆದಾರ ಸಿ.ನಾಗರಾಜು ಹೇಳಿದರು.

ಅರ್ಧಕ್ಕೆ ನಿಂತ ಗ್ರಾ.ಪಂ ಕಚೇರಿ ಕಟ್ಟಡ ಕಾಮಗಾರಿ ಅನುದಾನದ ಕೊರತೆಯಿಂದಾಗಿ ಪೂರ್ಣಗೊಳ್ಳದ ಕೆಲಸ ಮಾಜಿ ಸಚಿವ, ಶಾಸಕರ ಹುಟ್ಟೂರಿಗೆ ಬಂದ ದುಃಸ್ಥಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.