ADVERTISEMENT

ಕೋವಿಡ್-19: ನ್ಯಾಯಾಲಯ ಪ್ರವೇಶಕ್ಕೆ ಥರ್ಮೋಸ್ಕ್ರೀನಿಂಗ್‌

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 13:28 IST
Last Updated 18 ಮಾರ್ಚ್ 2020, 13:28 IST
ಚಿತ್ರದುರ್ಗದ ನ್ಯಾಯಾಲಯ ಪ್ರವೇಶಿಸುವ ವಕೀಲರು ಮತ್ತು ಕಕ್ಷಿದಾರರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ ಬುಧವಾರ ಥರ್ಮೋಸ್ಕ್ರೀನಿಂಗ್‌ಗೆ ಮೂಲಕ ಪರೀಕ್ಷಿಸಿದರು.
ಚಿತ್ರದುರ್ಗದ ನ್ಯಾಯಾಲಯ ಪ್ರವೇಶಿಸುವ ವಕೀಲರು ಮತ್ತು ಕಕ್ಷಿದಾರರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ ಬುಧವಾರ ಥರ್ಮೋಸ್ಕ್ರೀನಿಂಗ್‌ಗೆ ಮೂಲಕ ಪರೀಕ್ಷಿಸಿದರು.   

ಚಿತ್ರದುರ್ಗ: ಕಲಾಪಗಳಿಗೆ ಹಾಜರಾಗುವ ಕಕ್ಷಿದಾರರು, ವಕೀಲರು ಹಾಗೂ ಸಿಬ್ಬಂದಿಯನ್ನು ಥರ್ಮೋಸ್ಕ್ರೀನಿಂಗ್‌ ಮೂಲಕ ಪರೀಕ್ಷಿಸುವ ವ್ಯವಸ್ಥೆಯನ್ನು ಜಿಲ್ಲಾ ನ್ಯಾಯಾಲಯದಲ್ಲಿ ಬುಧವಾರದಿಂದ ಜಾರಿಗೊಳಿಸಲಾಗಿದೆ. ಕೆಮ್ಮು, ಶೀತ ಹಾಗೂ ಜ್ವರದಿಂದ ಬಳಲುತ್ತಿದ್ದ ಹಲವರನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಲಾಗಿದೆ.

ಹೈಕೋರ್ಟ್ ಸೂಚನೆಯ ಮೇರೆಗೆ ಜಿಲ್ಲಾ ನ್ಯಾಯಾಲಯದಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಸ್ಯಾನಿಟೈಸರ್‌ ಮೂಲಕ ಕೈ ಶುಚಿಗೊಳಿಸಿಕೊಂಡು ನ್ಯಾಯಾಲಯಕ್ಕೆ ಬರುವಂತೆ ಸೂಚಿಸುವ ಸಾಧ್ಯತೆಯೂ ಇದೆ.

ನ್ಯಾಯಾಲಯದಲ್ಲಿ ಪ್ರವೇಶ ಹಾಗೂ ನಿರ್ಗಮನಕ್ಕೆ ಎರಡು ಪ್ರತ್ಯೇಕ ದ್ವಾರಗಳನ್ನು ಮೀಸಲಿಡಲಾಗಿದೆ. ನ್ಯಾಯಾಲಯದ ಮುಂಭಾಗದಿಂದ ಪ್ರವೇಶಿಸುವ ವ್ಯಕ್ತಿ ಹಿಂಭಾಗಿಲ ಮೂಲಕ ಹೊರಗೆ ಬರಬೇಕು. ಹೀಗೆ, ಪ್ರವೇಶಿಸುವ ಸ್ಥಳದಲ್ಲಿ ಥರ್ಮೋಸ್ಕ್ರೀನಿಂಗ್‌ ಮಾಡಲಾಗುತ್ತದೆ. ವೈದ್ಯಕೀಯ ಸಿಬ್ಬಂದಿಯ ಕೈಯಲ್ಲಿರುವ ಉಪಕರಣ ವ್ಯಕ್ತಿಯನ್ನು ಪರಿಶೀಲಿಸುತ್ತದೆ.

ADVERTISEMENT

ಪ್ರವೇಶ ದ್ವಾರದಲ್ಲಿ ಕೊಠಡಿಯೊಂದನ್ನು ತೆರೆಯಲಾಗಿದ್ದು, ಇಬ್ಬರು ವೈದ್ಯರು, ಇಬ್ಬರು ಶುಶ್ರೂಷಕಿಯರು ಹಾಗೂ ಇಬ್ಬರು ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಇವರು ಪಾಳಿವಾರು ಕೆಲಸ ಮಾಡುತ್ತಾರೆ. ಬೆಳಿಗ್ಗೆ 9ರಿಂದ ಕಲಾಪ ಮುಗಿಯುವವರೆಗೂ ಸೇವೆ ಒದಗಿಸುತ್ತಾರೆ. ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣಗಳು ಕಂಡುಬಂದರೆ ಜಿಲ್ಲಾ ಆಸ್ಪತ್ರೆ ಅಥವಾ ಬಸವೇಶ್ವರ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತದೆ.

‘ಸೋಂಕು ಕಾಣಿಸಿಕೊಂಡ ಕಕ್ಷಿದಾರರು ನ್ಯಾಯಾಲಯಕ್ಕೆ ಹಾಜರಾಗುವ ಅಗತ್ಯವಿಲ್ಲ. ಇಂತಹವರಿಗೆ ನ್ಯಾಯಾಲಯ ವಿನಾಯಿತಿ ನೀಡಿದೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ನ್ಯಾಯಾಲಯಕ್ಕೆ ಹಾಜರಾದರೆ ಸಾಕು. ಸೋಂಕು ಹರಡದಂತೆ ತಡೆಯಲು ಎಲ್ಲರೂ ಸಹಕಾರ ನೀಡಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ವೈ.ವಟವಟಿ ಮನವಿ ಮಾಡಿದ್ದಾರೆ.

ಕಕ್ಷಿದಾರರಿಗೆ ವಿನಾಯಿತಿ

ದೂರದ ಊರುಗಳಿಂದ ಬರುವ ಹಾಗೂ ಅನಾರೋಗ್ಯದಿಂದ ಬಳಲುವ ಕಕ್ಷಿದಾರರನ್ನು ನ್ಯಾಯಾಲಯಕ್ಕೆ ಕರೆಸಬಾರದು ಎಂದು ವಕೀಲರ ಸಂಘದ ವಕೀಲರಿಗೆ ಸೂಚನೆ ನೀಡಿದೆ.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ವೈ.ವಟವಟಿ ಹಾಗೂ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ನಡುವೆ ನಡೆದ ಸಭೆಯ ಬಳಿಕ ಈ ಸೂಚನೆ ಹೊರಬಿದ್ದಿದೆ. ವಕೀಲರ ಸಂಘದ ಸೂಚನಾ ಫಲಕದಲ್ಲಿ ಇದನ್ನು ಪ್ರಕಟಿಸಲಾಗಿದೆ.

‘ತುರ್ತು ಪ್ರಕರಣಗಳ ವಿಚಾರಣೆಗೆ ಮಾತ್ರ ನ್ಯಾಯಾಲಯಕ್ಕೆ ಕಕ್ಷಿದಾರರನ್ನು ಕರೆಸಲು ಅವಕಾಶವಿದೆ. ಸಾಕ್ಷ್ಯ ವಿಚಾರಣೆಯ ಹಂತದಲ್ಲಿ ಮತ್ತೊಂದು ದಿನಾಂಕ ತೆಗೆದುಕೊಳ್ಳಲು ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ಗುಂಪು ಸೇರದಂತೆ ವಕೀಲರಿಗೆ ಸಲಹೆ ನೀಡಲಾಗಿದೆ’ ಎಂದು ಸಂಘದ ಅಧ್ಯಕ್ಷ ವಿಜಯಕುಮಾರ್‌ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.