ADVERTISEMENT

ಹೊಸದುರ್ಗ: 30 ವರ್ಷಗಳ ನಂತರ ಕುಟುಂಬ ಸೇರಿದ ತಿಪ್ಪೇಶ್‌

ಚಳ್ಳಕೆರೆ ತಾಲ್ಲೂಕು ಗಜ್ಜಗಾನಹಳ್ಳಿ ಗ್ರಾಮದಿಂದ ನಾಪತ್ತೆಯಾಗಿದ್ದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 2:01 IST
Last Updated 5 ಮಾರ್ಚ್ 2021, 2:01 IST
ಹೊಸದುರ್ಗ ತಾಲ್ಲೂಕಿನ ಹೊನ್ನೇಕೆರೆಯಲ್ಲಿದ್ದ ಮಾನಸಿಕ ಅಸ್ವಸ್ಥ ತಿಪ್ಪೇಶ್‌ ಅವರನ್ನು ತಹಶೀಲ್ದಾರ್ ತಿಪ್ಪೇಸ್ವಾಮಿ ಅವರ ಮಧ್ಯಸ್ಥಿಕೆಯಲ್ಲಿ ಗುರುವಾರ ಆತನ ಕುಟುಂಬದವರಿಗೆ ಒಪ್ಪಿಸಲಾಯಿತು.
ಹೊಸದುರ್ಗ ತಾಲ್ಲೂಕಿನ ಹೊನ್ನೇಕೆರೆಯಲ್ಲಿದ್ದ ಮಾನಸಿಕ ಅಸ್ವಸ್ಥ ತಿಪ್ಪೇಶ್‌ ಅವರನ್ನು ತಹಶೀಲ್ದಾರ್ ತಿಪ್ಪೇಸ್ವಾಮಿ ಅವರ ಮಧ್ಯಸ್ಥಿಕೆಯಲ್ಲಿ ಗುರುವಾರ ಆತನ ಕುಟುಂಬದವರಿಗೆ ಒಪ್ಪಿಸಲಾಯಿತು.   

ಹೊಸದುರ್ಗ: 30 ವರ್ಷಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಚಳ್ಳಕೆರೆ ತಾಲ್ಲೂಕಿನ ಗಜ್ಜಗಾನಹಳ್ಳಿ ಗ್ರಾಮದ ತಿಪ್ಪೇಶ್‌ (55) ಗುರುವಾರ ತಮ್ಮ ಕುಟುಂಬದವರ ಮಡಿಲು ಸೇರಿದರು.

ಊರೂರು ತಿರುಗುತ್ತ ಬಂದಿದ್ದ, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ತಿಪ್ಪೇಶ್‌ ಅವರಿಗೆ ತಾಲ್ಲೂಕಿನ ಕಸಬಾ ಹೋಬಳಿ ಹೊನ್ನೇಕೆರೆ ಗ್ರಾಮದ ಕುಲುಮೆ ವೃತ್ತಿ ಮಾಡುವ ರಾಜಣ್ಣ ಆಶ್ರಯ ನೀಡಿದ್ದರು. ಸುಮಾರು 3 ದಶಕಗಳಿಂದ ಆತನಿಗೆ ಉಪಚಾರ ಮಾಡಿದ್ದರು. ನಾಪತ್ತೆಯಾದ ಬಳಿಕ ಕುಟುಂಬದವರು ಹುಡುಕುವ ಪ್ರಯತ್ನ ಕೆಲ ವರ್ಷ ನಡೆಸಿದರೂ ಯಶಸ್ಸು ಮಾತ್ರ ಕಂಡಿರಲಿಲ್ಲ. ಈಚೆಗೆ ಇವರ ಸಂಬಂಧಿಕರೊಬ್ಬರು ಹೊನ್ನೆಕೆರೆಗೆ ಬಂದಾಗ ಗುರುತಿಸಿ ತಿಪ್ಪೇಶ್‌ ಕುಟುಂಬದವರಿಗೆ ಮಾಹಿತಿ ನೀಡಿದರು.

ವಿಷಯ ತಿಳಿದ ಕುಟುಂಬದವರು ಹೊನ್ನೇಕೆರೆ ಗ್ರಾಮಕ್ಕೆ ಬಂದು ತಿಪ್ಪೇಶ ಅವರನ್ನು ನೋಡಿ ಭಾವುಕರಾದರು. ತಿಪ್ಪೇಶ ಸಹ ಸಹೋದರರಾದ ರಾಮಾಂಜನೇಯ, ರಾಜಣ್ಣ, ಸಹೋದರಿ ರತ್ನಮ್ಮ ಅವರನ್ನು ಗುರುತು ಹಿಡಿದು ಕಣ್ಣಿರು ಸುರಿಸಿದರು. ಕುಟುಂಬದವರು ತಿಪ್ಪೇಶ್‌ ಅವರನ್ನು ಕಳುಹಿಸುವಂತೆ ಕೇಳಿದಾಗ, ‘ಅವರು ನಿಮ್ಮ ಸಹೋದರ ಎನ್ನುವುದಕ್ಕೆ ಪೂರಕ ದಾಖಲೆಗಳನ್ನು ನೀಡಬೇಕು. ಇಲ್ಲದಿದ್ದರೆ ಕಳುಹಿಸುವುದಿಲ್ಲ’ ಎಂದು ಹೊನ್ನೆಕೆರೆ ರಾಜಣ್ಣ ಪಟ್ಟುಹಿಡಿದರು.

ADVERTISEMENT

ಆಗ ತಹಶೀಲ್ದಾರ್‌ ವೈ. ತಿಪ್ಪೇಸ್ವಾಮಿ ಸಮ್ಮುಖದಲ್ಲಿ ಹೊನ್ನೇಕೆರೆ ಹಾಗೂ ಗಜ್ಜಗಾನಹಳ್ಳಿ ಗ್ರಾಮಸ್ಥರ ನಡುವೆ ಸಭೆ ನಡೆಯಿತು. ದಾಖಲೆಗಳನ್ನು ಪರಿಶೀಲಿಸಲಾಯಿತು. ನಂತರ ತಿಪ್ಪೇಶ ಅವರ ಮುಂದಿನ ಜೀವನದ ಆಗುಹೋಗುಗಳಿಗೆ ನೀವೇ ಜವಾಬ್ದಾರರು ಎಂಬ ಮುಚ್ಚಳಿಕೆ ಪತ್ರವನ್ನು ಅವರ ಸಹೋದರರಿಂದ ಬರೆಯಿಸಿಕೊಳ್ಳಲಾಯಿತು. ಎಲ್ಲರ ಸಹಿ ಪಡೆದು ಕುಟುಂಬದವರೊಂದಿಗೆ ಗಜ್ಜಗಾನಹಳ್ಳಿಗೆ ಕಳುಹಿಸಿ ಕೊಡಲಾಯಿತು.

2 ದಶಕದಿಂದ ಆಶ್ರಯ ನೀಡಿದ್ದ ರಾಜಣ್ಣ
‘ಸುಮಾರು 2 ದಶಕದ ಹಿಂದೆ ತಿಪ್ಪೇಶ್‌ ನಮ್ಮ ಗ್ರಾಮದ ಬಸ್‌ ನಿಲ್ದಾಣದ ಬಳಿ ಅಲೆದಾಡುತ್ತಿದ್ದರು. ಅವರ ಕಾಲಿಗೆ ತೀವ್ರ ಪೆಟ್ಟಾಗಿ ನಡೆದಾಡಲೂ ಆಗುತ್ತಿರಲಿಲ್ಲ. ಆಗ ಮಾನವೀಯತೆ ದೃಷ್ಟಿಯಿಂದ ಉಪಚರಿಸಿ ನಾನೇ ಆಶ್ರಯ ನೀಡಿದ್ದೆ. ಹಲವು ಬಾರಿ ಅವರ ಸ್ವಂತ ವಿಳಾಸ ಕೇಳಿದಾಗ ಏನೇನೋ ಹೇಳುತ್ತಿದ್ದರು. ಕೇಳಿದ್ದಕ್ಕೆ ಚುರುಕಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ. ಮಂದ ಬುದ್ಧಿಯವರಂತೆ ವರ್ತಿಸುತ್ತಿದ್ದರು. ಹಳೆಯ ನೆನಪು ಯಾವುದೂ ಇರಲಿಲ್ಲ. ಮನೆಯಿಂದ ಸ್ವಲ್ಪ ದೂರ ಹೋದರೆ ಮರಳಿ ಬರಲು ದಾರಿ ತಿಳಿಯದೇ ಇನ್ನೆಲ್ಲೋ ಹೋಗುತ್ತಿದ್ದರು. ಇಷ್ಟು ದಿನ ಜೋಪಾನವಾಗಿ ನೋಡಿಕೊಂಡಿದ್ದೇವೆ. ಈಗ ಮನೆಯವರನ್ನು ಗುರುತಿಸಿದ್ದಾರೆ. ಮುಂದೆ ನಮಗೆ ಯಾವುದೇ ತೊಂದರೆಯಾಗಬಾರದು ಎಂದು ಗ್ರಾಮಸ್ಥರು ಮತ್ತು ತಹಶೀಲ್ದಾರ್ ಮಧ್ಯಸ್ಥಿಕೆಯಲ್ಲಿ ಅವರನ್ನು ಕುಟುಂಬದವರಿಗೆ ಒಪ್ಪಿಸಿದ್ದೇನೆ’ ಎಂದು ಹೊನ್ನೆಕೆರೆ ರಾಜಣ್ಣ ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.