ADVERTISEMENT

ಚಿತ್ರದುರ್ಗದ ವಿಧಾನಸಭಾ ಕ್ಷೇತ್ರಗಳಿಗೆ ಸಾವಿರ ಮನೆ: ವಸತಿ ಸಚಿವ ವಿ.ಸೋಮಣ್ಣ ಘೋಷಣೆ

ಅಕ್ರಮ ಪತ್ತೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 13:47 IST
Last Updated 26 ಜೂನ್ 2020, 13:47 IST
ವಸತಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಚಿತ್ರದುರ್ಗದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಂಸದ ಎ.ನಾರಾಯಣಸ್ವಾಮಿ ಮಾತನಾಡಿದರು. ಶಾಸಕರಾದ ಗೂಳಿಹಟ್ಟಿ ಶೇಖರ್‌, ಟಿ.ರಘುಮೂರ್ತಿ, ಜಿ.ಎಚ್‌.ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಜಿಲ್ಲಾಧಿಕಾರಿ ಆರ್‌.ವಿನೋತ್ ಪ್ರಿಯಾ ಇದ್ದಾರೆ.
ವಸತಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಚಿತ್ರದುರ್ಗದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಂಸದ ಎ.ನಾರಾಯಣಸ್ವಾಮಿ ಮಾತನಾಡಿದರು. ಶಾಸಕರಾದ ಗೂಳಿಹಟ್ಟಿ ಶೇಖರ್‌, ಟಿ.ರಘುಮೂರ್ತಿ, ಜಿ.ಎಚ್‌.ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಜಿಲ್ಲಾಧಿಕಾರಿ ಆರ್‌.ವಿನೋತ್ ಪ್ರಿಯಾ ಇದ್ದಾರೆ.   

ಚಿತ್ರದುರ್ಗ: ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸಾವಿರ ಮನೆಗಳನ್ನು ಮಂಜೂರು ಮಾಡುವುದಾಗಿ ವಸತಿ ಸಚಿವ ವಿ.ಸೋಮಣ್ಣ ಘೋಷಣೆ ಮಾಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಮಾತನಾಡಿದರು.

‘ಗೊಲ್ಲರು, ಸುಡಗಾಡು ಸಿದ್ಧರು ಸೇರಿ ಹಲವು ಅಲೆಮಾರಿ ಸಮುದಾಯದ ಜನರು ಜಿಲ್ಲೆಯಲ್ಲಿದ್ದಾರೆ. ಅಲೆಮಾರಿ ಸಮುದಾಯದ ಸಂಕಷ್ಟದ ಬಗ್ಗೆ ಅರಿವಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಅಲೆಮಾರಿ ಸಮುದಾಯಕ್ಕೆ 500 ಹಾಗೂ ಪ್ರಧಾನಮಂತ್ರಿ ವಸತಿ ಯೋಜನೆಯಡಿ 500 ಮನೆ ಮಂಜೂರು ಮಾಡಲಾಗುವುದು. ಫಲಾನುಭವಿ ಆಯ್ಕೆ, ಸೌಲಭ್ಯ ವಿತರಣೆ ವಿಧಾನಸಭಾ ಕ್ಷೇತ್ರವಾರು ನಡೆಯಬೇಕೆ ಹೊರತು ತಾಲ್ಲೂಕುವಾರು ಅಲ್ಲ’ ಎಂದು ಹೇಳಿದರು.

ADVERTISEMENT

ಅಧಿಕಾರಿಗಳ ವಿರುದ್ಧ ಕಿಡಿ

‘ಬಡವರಿಗೆ ಸರ್ಕಾರಿ ಸೌಲಭ್ಯ ತಲುಪಿಸುವಾಗ ಜಾತಿ ಹುಡುಕಿ ರಾಜಕೀಯ ಮಾಡಬೇಡಿ. ಅವರ ಸ್ಥಿತಿಯನ್ನಷ್ಟೇ ಗಮನಿಸಿ. ಬಡವರಿಗೆ ಕಲ್ಪಿಸುವ ಸೌಲಭ್ಯದಲ್ಲಿಯೂ ವಂಚನೆ ಮಾಡಬೇಡಿ’ ಎಂದು ಅಧಿಕಾರಿಗಳ ವಿರುದ್ಧ ಸಚಿವರು ಕಿಡಿಕಾರಿದರು.

‘ಅಧಿಕಾರಿಗಳು ಬಡವರ ಹೆಸರಿನಲ್ಲಿ ತಿನ್ನುವುದನ್ನು ಬಿಡುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ರಾಜಕಾರಣಿಗಳನ್ನು ನಿರ್ವಹಿಸುವ ಕಲೆಯನ್ನು ಕಲಿತಿದ್ದಾರೆ. ಜನಪ್ರತಿನಿಧಿಗಳ ಅವಧಿ ಐದು ವರ್ಷಕ್ಕೆ ಮುಗಿಯುತ್ತದೆ. ನೀವು (ಅಧಿಕಾರಿಗಳು) ಜೀವನವಿಡೀ ಸೇವೆಯಲ್ಲಿ ಇರುತ್ತೀರಿ. ನಿಮಗೆ ಕನಿಷ್ಠ ಜವಾಬ್ದಾರಿ ಇಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿದರು.

ನೈಜ ಫಲಾನುಭವಿ ಸೂಚಿಸಿ

‘ಚಿತ್ರದುರ್ಗ ಜಿಲ್ಲೆಗೆ 23,041 ಮನೆ ಮಂಜೂರಾಗಿವೆ. ನೈಜ ಫಲಾನುಭವಿಗಳ ಬಗ್ಗೆ ಅನುಮಾನವಿದೆ. ಎಲ್ಲಿ ಅಕ್ರಮ ನಡೆದಿದೆ ಎಂಬುದನ್ನು ಪತ್ತೆ ಮಾಡಬೇಕಿದೆ. ಎಲ್ಲರೂ ನೈಜ ಫಲಾನುಭವಿಗಳೇ ಎಂಬುದನ್ನು ಪ್ರಮಾಣೀಕರಿಸುವ ಅಗತ್ಯವಿದೆ. ಫಲಾನುಭವಿಗಳ ಪಟ್ಟಿ ಸರಿ ಇದೇ ಎಂಬುದು ಖಚಿತವಾದರೆ 15 ದಿನಗಳಲ್ಲಿ ಅನುದಾನ ಮಂಜೂರು ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಹಿಂದಿನ ಸರ್ಕಾರದ ಅವಧಿಯಲ್ಲಿ 19 ಲಕ್ಷ ಮನೆ ನಿರ್ಮಿಸುವ ಪ್ರಯತ್ನ ನಡೆದಿತ್ತು. ಇಷ್ಟು ಪ್ರಮಾಣದ ವಸತಿ ಸೌಕರ್ಯ ಒಂದೇ ವರ್ಷದಲ್ಲಿ ಒದಗಿಸಲು ಸಾಧ್ಯವೆ ಎಂಬ ಪ್ರಶ್ನೆ ಕಾಡಿತ್ತು. ಇದರಲ್ಲಿ 5.4 ಲಕ್ಷ ಮನೆಗಳಿಗೆ ಕಾರ್ಯಾದೇಶ ಸಿಕ್ಕಿತ್ತು. ಫಲಾನುಭವಿ ಪಟ್ಟಿಯನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎಲ್ಲವೂ ಸರಿಯಾಗಿದ್ದರೆ ₹ 270 ಕೋಟಿ ಹಣವನ್ನು ಮರುದಿನವೇ ಬಿಡುಗಡೆ ಮಾಡುತ್ತೇನೆ’ ಎಂದು ಹೇಳಿದರು.

ನಿವೇಶನದ ಜತೆ ಮನೆ

ಹೊಳಲ್ಕೆರೆ ಪಟ್ಟಣ ಸಮೀಪದ 20 ಎಕರೆ ಭೂಮಿಯನ್ನು ಒಂದೂವರೆ ತಿಂಗಳಲ್ಲಿ ಅಭಿವೃದ್ಧಿಪಡಿಸುತ್ತೇವೆ. ನಿವೇಶನದ ಜತೆಗೆ ವಸತಿ ಸೌಕರ್ಯವನ್ನೂ ಕಲ್ಪಿಸಲಾಗುವುದು ಎಂದು ಸೋಮಣ್ಣ ಅವರು ಆಶ್ವಾಸನೆ ನೀಡಿದರು.

‘ಚಿತ್ರದುರ್ಗದಲ್ಲಿ ವಸತಿ ಸೌಕರ್ಯ ಕಲ್ಪಿಸುವ ಜರೂರು ಇದೆ. ಆದರೆ, ಆರು ಸಾವಿರ ಮನೆಗಳನ್ನು ಏಕಕಾಲಕ್ಕೆ ನಿರ್ಮಿಸುವುದು ಅಸಾಧ್ಯ. ಮೊಳಕಾಲ್ಮುರು ಕ್ಷೇತ್ರದ ವಸತಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸುವ ಅಗತ್ಯವಿದೆ. ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮೊಳಕಾಲ್ಮುರಿನಲ್ಲಿ ಸಭೆ ಹಮ್ಮಿಕೊಳ್ಳಿ’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಮತ್ತೊಂದು ಎಫ್‌ಐಆರ್‌ಗೆ ಸೂಚನೆ

ವಸತಿ ಯೋಜನೆಯಡಿ ಅವ್ಯವಹಾರ ನಡೆಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಹಿರಿಯೂರು ತಾಲ್ಲೂಕಿನ ಕಣಜನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಸೇರಿ ಇತರರ ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲಿಸಲು ವಸತಿ ಸಚಿವ ವಿ.ಸೋಮಣ್ಣ ಸೂಚನೆ ನೀಡಿದರು.

‘ಆರೋಪಿ ಜಾಮೀನು ಪಡೆದಿದ್ದರೆ ಮತ್ತೊಂದು ಎಫ್‌ಐಆರ್‌ ದಾಖಲಿಸಿ. ವಸತಿ ಇಲಾಖೆಯಿಂದಲೂ ದೂರು ದಾಖಲಿಸಲು ಸೂಚಿಸುತ್ತೇನೆ. ಬಡವರಿಗೆ ವಂಚನೆ ಮಾಡಿದ ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದವರನ್ನು ಪತ್ತೆ ಮಾಡಿ’ ಎಂದು ಹಿರಿಯೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಅವರಿಗೆ ಸೂಚಿಸಿದರು.

ಶಾಸಕಿ ಕೆ.ಪೂರ್ಣಿಮಾ, ‘ಹಣ ಲಪಟಾಯಿಸಿದ ಆರೋಪಿ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಭ್ರಷ್ಟರಿಗೆ ಶಿಕ್ಷೆಯಾದರೆ ಉಳಿದವರು ಎಚ್ಚೆತ್ತುಕೊಳ್ಳುತ್ತಾರೆ’ ಎಂದು ಸಚಿವರ ಗಮನ ಸೆಳೆದರು.

ಸಂಸದ ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ, ರಾಜೀವ್‌ ಗಾಂಧಿ ವಸತಿ ನಿಗಮದ ಮಹದೇವಪ್ರಸಾದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.