ADVERTISEMENT

ಚಿತ್ರದುರ್ಗ: ಬತ್ತಿದ ಕೆರೆಯ ಒಡಲು ಸೇರಿದ ಗಂಗೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 23:50 IST
Last Updated 4 ಜೂನ್ 2023, 23:50 IST
ಚಿತ್ರದುರ್ಗದ ಹೊರವಲಯದಲ್ಲಿರುವ ತಿಮ್ಮಣ್ಣ ನಾಯಕ ಕೆರೆಯ ಅಂಗಳ ತುಂಬಿರುವ ನೀರು/ಚಿತ್ರ: ವಿ.ಚಂದ್ರಪ್ಪ
ಚಿತ್ರದುರ್ಗದ ಹೊರವಲಯದಲ್ಲಿರುವ ತಿಮ್ಮಣ್ಣ ನಾಯಕ ಕೆರೆಯ ಅಂಗಳ ತುಂಬಿರುವ ನೀರು/ಚಿತ್ರ: ವಿ.ಚಂದ್ರಪ್ಪ   

ಜಿ.ಬಿ.ನಾಗರಾಜ್‌

ಚಿತ್ರದುರ್ಗ: ಪಾಳೇಗಾರರ ಕಾಲದಿಂದಲೂ ಕುಡಿಯುವ ನೀರಿನ ಮೂಲವಾಗಿದ್ದ ಮತ್ತಿ ತಿಮ್ಮಣ್ಣನಾಯಕ ಕೆರೆ ಗತವೈಭವಕ್ಕೆ ಮರಳುವ ಲಕ್ಷಣಗಳು ಗೋಚರಿಸುತ್ತಿವೆ. ಬತ್ತಿಹೋಗಿದ್ದ ಕೆರೆಗೆ ನೀರು ಹರಿದುಬಂದಿದ್ದು, ಜೋಗಿಮಟ್ಟಿ ಅರಣ್ಯದ ತಪ್ಪಲಿನ ವನ್ಯಜೀವಿಗಳಿಗೆ ಆಸರೆಯಾಗಿದೆ.

ಕೆರೆಯ ಪರಿಸರವನ್ನು ಅಂದಗಾಣಿಸಲು ಮುಂದಾಗಿರುವ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ಉದ್ಯಾನ ಅಭಿವೃದ್ಧಿಪಡಿಸುತ್ತಿದೆ. ಒಂದೆಡೆ ಕಲ್ಲುಗಳನ್ನು ರಾಶಿ ಹಾಕಿರುವಂತೆ ಕಾಣುವ ಬೆಟ್ಟ, ಮತ್ತೊಂದೆಡೆ ಜೋಗಿಮಟ್ಟಿಯ ವನ್ಯಸಿರಿ ಜನರನ್ನು ಸೂಜಿಗಲ್ಲಿನಂತೆ ಸೆಳೆಯಲಿವೆ.

ADVERTISEMENT

ಜೋಗಿಮಟ್ಟಿ ವನ್ಯಧಾಮದ ತಪ್ಪಲಿನಲ್ಲಿರುವ ಮತ್ತಿ ತಿಮ್ಮಣ್ಣನಾಯಕ ಕೆರೆ ಪಾಳೆಗಾರರ ಕಾಲದಿಂದಲೂ ಚಿತ್ರದುರ್ಗದ ಕುಡಿಯುವ ನೀರಿನ ಮೂಲವಾಗಿತ್ತು. 1984ರವರೆಗೂ ಇದೇ ಕೆರೆಯ ನೀರನ್ನು ನಗರಕ್ಕೆ ಪೂರೈಕೆ ಮಾಡಲಾಗುತ್ತಿತ್ತು. ಕಾಲಾನಂತರ ಕೆರೆಗೆ ಹರಿದುಬರುತ್ತಿದ್ದ ಹಳ್ಳಗಳು ಬತ್ತಿಹೋಗಿದ್ದವು. ಕೆಲ ದಶಕಗಳಿಂದ ಕೆರೆ ಬರಿದಾಗಿತ್ತು.

ನೀರು ಸಂಗ್ರಹವಾಗದೇ 62 ಎಕರೆ ವಿಸ್ತೀರ್ಣದ ಕೆರೆ ಪಾಳುಬಿದ್ದಿರುವಂತೆ ಕಾಣುತ್ತಿತ್ತು. ಅರ್ಧದಷ್ಟು ಕೆರೆಯಲ್ಲಿ ಜಾಲಿ ಬೆಳೆದುಕೊಂಡಿತ್ತು. ಕೆರೆಯ ಒಡಲು ತುಂಬಿದ ಹೂಳು, ಜಾಲಿ ಗಿಡಗಳ ಪರಿಣಾಮವಾಗಿ ನೀರು ಸಂಗ್ರಹವಾಗುತ್ತಿರಲಿಲ್ಲ. ಕುಡಿಯುವ ನೀರಿಗೆ ನಗರ ಸ್ಥಳೀಯ ಸಂಸ್ಥೆ ಬೇರೆ ಜಲಮೂಲವನ್ನು ಹುಡುಕಿಕೊಂಡಿದ್ದರಿಂದ ಕೆರೆ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. 

ಮಾನವ ಬಂಧುತ್ವ ವೇದಿಕೆಯ ಯುವಕರು 2018ರ ಡಿಸೆಂಬರ್‌ನಲ್ಲಿ ಕೆರೆ ಪುನರುಜ್ಜೀವನಕ್ಕೆ ಮುಂದಾಗಿದ್ದರು. 30 ಎಕರೆ ಕೆರೆ ಅಂಗಳದಲ್ಲಿ ಬೆಳೆದಿದ್ದ ಜಾಲಿಯನ್ನು ತೆರವುಗೊಳಿಸುವ ಕಾರ್ಯ ಕೈಗೆತ್ತಿಕೊಂಡರು. ಕಾದಂಬರಿಕಾರ ಬಿ.ಎಲ್‌.ವೇಣು ಅವರು ಇದಕ್ಕೆ ಚಾಲನೆ ನೀಡಿದ್ದರು. ಮಠಾಧೀಶರು, ಸಿನಿಮಾ ನಟರು ಭೇಟಿ ನೀಡಿ ಕೆರೆ ಪುನರುಜ್ಜೀವನ ಕಾರ್ಯಕ್ಕೆ ಯುವಕರ ಬೆನ್ನು ತಟ್ಟಿದ್ದರು.

ಕೆರೆ ಅಂಗಳವನ್ನು ಶುಚಿಗೊಳಿಸಿದ್ದ ಬಂಧುತ್ವ ವೇದಿಕೆಯ ಯುವಕರು ಕೆರೆಗೆ ಹರಿದುಬರುತ್ತಿದ್ದ ನೀರಿನ ಮೂಲ ಹುಡುಕಿ ಕಾಡು ಅರಸಿದ್ದರು. ಬೆಟ್ಟದ ಮೇಲಿನಿಂದ ನೀರು ಹರಿದುಬರುವ  ಹಳ್ಳಗಳನ್ನು ಶುಚಿಗೊಳಿಸಿದ್ದರು. ಯುವಕರ ಈ ಸಂಘಟಿತ ಶ್ರಮಕ್ಕೆ ನಾಲ್ಕು ವರ್ಷಗಳ ಬಳಿಕ ಪ್ರತಿಫಲ ದೊರೆತಿದೆ. ಮಳೆ ಸುರಿದಾಗ ನೀರು ಹರಿದುಬಂದಿದ್ದು, ಕೆರೆ ಅಂಗಳದಲ್ಲಿ ಗಂಗೆ ಕಾಣಿಸಿಕೊಂಡಿದೆ.

ಜೋಗಿಮಟ್ಟಿ, ಆಡುಮಲ್ಲೇಶ್ವರ ಪರಿಸರದಲ್ಲಿರುವ ನವಿಲು, ಕರಡಿ, ಚಿರತೆ ಸೇರಿ ವನ್ಯಜೀವಿಗಳಿಗೆ ಕೆರೆ ನೀರು ಆಸರೆಯಾಗಿದೆ. ಕೆರೆಯ ಸಮೀಪದ ಬೆಟ್ಟದಲ್ಲಿ ನವಿಲುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಚಳಿಗಾಲದಲ್ಲಿ ವಿದೇಶಿ ಪಕ್ಷಿಗಳು ಕೆರೆಯ ಅಂಗಳದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಮೂಡಿದೆ.

ಚಿತ್ರದುರ್ಗದ ಹೊರವಲಯದಲ್ಲಿರುವ ತಿಮ್ಮಣ್ಣ ನಾಯಕ ಕೆರೆಯ ಪಕ್ಕದ ಕಲ್ಲು ಬಂಡೆಯ ಮೇಲೆ ಗಮನ ಸೆಳೆಯುವ ನವಿಲು. ಚಿತ್ರ: ವಿ.ಚಂದ್ರಪ್ಪ
ಎಚ್‌.ಅಂಜಿನಪ್ಪ

ಬೆಟ್ಟದ ಬಾಲನಬಾವಿಯಿಂದ ಕೆರೆಗೆ ಹರಿದುಬರುತ್ತಿದ್ದ ಹಳ್ಳ ಕಟ್ಟಿಕೊಂಡಿತ್ತು. ಹೀಗೆ ಮಾರ್ಗ ಬದಲಿಸಿದ ಹಳ್ಳಗಳನ್ನು ಪತ್ತೆ ಮಾಡಿ ಶುಚಿಗೊಳಿಸಿದ್ದೆವು. ಕೆರೆಗೆ ನೀರು ಬಂದಿದ್ದು ಸಂತಸವುಂಟು ಮಾಡಿದೆ.

- ಎಚ್‌.ಅಂಜಿನಪ್ಪ ಅಧ್ಯಕ್ಷ ಮಾನವ ಬಂಧುತ್ವ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.