ADVERTISEMENT

ಚಿತ್ರದುರ್ಗ: ಧಾರಾಕಾರ ಮಳೆ, ಕೋಡಿ ಬಿದ್ದ ಕೆರೆಗಳು

ಚಿತ್ರದುರ್ಗ ತಾಲ್ಲೂಕಿನಲ್ಲಿ 14 ಸೆಂ.ಮೀ ದಾಖಲೆಯ ಮಳೆ, ಹೊಲ, ಮನೆ, ಅಂಗಡಿಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 14:16 IST
Last Updated 10 ಅಕ್ಟೋಬರ್ 2020, 14:16 IST
ಮಳೆಯಿಂದ ಚಿತ್ರದುರ್ಗದ ಐತಿಹಾಸಿಕ ಕೋಟೆಯ ಮೇಲುದುರ್ಗದ ಮೆಟ್ಟಿಲುಗಳಿಂದ ನೀರು ಹರಿಯುತ್ತಿರುವುದು
ಮಳೆಯಿಂದ ಚಿತ್ರದುರ್ಗದ ಐತಿಹಾಸಿಕ ಕೋಟೆಯ ಮೇಲುದುರ್ಗದ ಮೆಟ್ಟಿಲುಗಳಿಂದ ನೀರು ಹರಿಯುತ್ತಿರುವುದು   

ಚಿತ್ರದುರ್ಗ: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಡಿ ಆಗಿಂದಾಗ್ಗೆ ಸುರಿದ ಗುಡುಗು, ಮಿಂಚು, ಗಾಳಿ ಸಹಿತ ಭಾರಿ ಮಳೆಗೆ ವಿವಿಧ ಕೆರೆ, ಕಟ್ಟೆ, ಚೆಕ್ ‌ಡ್ಯಾಂಗಳು ಭರ್ತಿಯಾಗಿ ಕೋಡಿ ಹರಿಯುತ್ತಿವೆ. ಹೊಲ, ಮನೆಗಳಿಗೂ ನೀರು ನುಗ್ಗಿದೆ.

ರಾತ್ರಿ 8ರ ಸುಮಾರಿಗೆ ಆರಂಭವಾದ ಮಳೆ ಸ್ವಲ್ಪ ಹೊತ್ತಿಗೆ ರಭಸ ಪಡೆದುಕೊಂಡಿತು. ಮುಂಜಾನೆಯವರೆಗೂ ಆಗಿಂದಾಗ್ಗೆ ಉತ್ತಮ ಮಳೆಯಾಯಿತು. ಇದರಿಂದ ರಾಜಕಾಲುವೆಗಳು, ಬೋರ್ಗರೆದು ಹರಿದವು. 2009ರಲ್ಲಿ ಒಂದೇ ದಿನ ಚಿತ್ರದುರ್ಗ ತಾಲ್ಲೂಕಿನಲ್ಲಿ 18. ಸೆಂ.ಮೀ ಮಳೆಯಾಗಿ ದಾಖಲೆ ಸೃಷ್ಟಿಸಿತ್ತು. ಈಗ 14 ಸೆಂ.ಮೀ. ಮಳೆ ಸುರಿದಿದೆ.

ಪ್ರಸಕ್ತ ಸಾಲಿನಲ್ಲಿ ಹಸ್ತ ಮಳೆ ಆರಂಭದಿಂದ ಉತ್ತಮವಾಗಿ ಸುರಿಯದಿದ್ದರೂ ಕೊನೆಯಲ್ಲಿ ಆರ್ಭಟಿಸಿದ ಪರಿಣಾಮ ವಿವಿಧೆಡೆ ಉತ್ತಮವಾಗಿ ಸುರಿದಿದೆ. ಇದರಿಂದಾಗಿ ಮಠದ ಕುರುಬರಹಟ್ಟಿ ಸಮೀಪದ ಕೆರೆ ತುಂಬಿದೆ. ಹಟ್ಟಿಯೊಳಗೂ ನೀರು ನುಗ್ಗಿದೆ.

ADVERTISEMENT

ಮೂರು ತಿಂಗಳಲ್ಲೇ ಮಲ್ಲಾಪುರ ಕೆರೆ ಮೂರನೇ ಬಾರಿ ಕೋಡಿ ಬಿದ್ದು, ಜಲಧಾರೆಯಂತೆ ಧುಮ್ಮಿಕ್ಕಿ ಹರಿಯುತ್ತಿದೆ. ಈ ದೃಶ್ಯ ನೋಡಿ ಈ ಭಾಗದ ಜನ ಸಂಭ್ರಮಿಸುತ್ತಿದ್ದಾರೆ. ಕೋಡಿ ಬಿದ್ದ ಈ ಕೆರೆಯಿಂದ ಕೆಲ ರೈತರ ಹೊಲ, ಮನೆಗಳಿಗೂ ನೀರು ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿ 13ರ ರಸ್ತೆ ಮಾರ್ಗದಲ್ಲಿ ನೀರು ನಿಂತಿದೆ.

ಕೆರೆ ಸಮೀಪದ ಸರ್ಕಾರಿ ಶಾಲೆ ಸೇರಿ 25ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಮಲ್ಲಾಪುರ ಸಮೀಪದ ಕೆಳಸೇತುವೆ ಮಾರ್ಗದಲ್ಲಿ ಶನಿವಾರ ಮುಂಜಾನೆ ವಾಹನ ಸವಾರರು, ಪಾದಚಾರಿಗಳು ರಸ್ತೆ ಮಾರ್ಗದಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಯಿತು. ರಾತ್ರಿ ಮತ್ತು ಬೆಳಿಗ್ಗೆ ನಿಧಾನಗತಿಯಲ್ಲಿ ವಾಹನಗಳು ಸಾಗಿದವು.

ಪಿಳ್ಳೆಕೇರನಹಳ್ಳಿ ಗ್ರಾಮದ ರಸ್ತೆ ಮಾರ್ಗದುದ್ದಕ್ಕೂ ಕೆಳಸೇತುವೆಯಲ್ಲಿ ಮೊಣಕಾಲು ಮಟ್ಟದಷ್ಟು ನೀರು ನಿಂತಿದೆ. ಉತ್ತಮ ಮಳೆಯಿಂದ ಮಲ್ಲಾಪುರ ಕೆರೆಯಿಂದ ನದಿ ನೀರಿನಂತೆ ಧಾರಾಕಾರವಾಗಿ ಹರಿಯುತ್ತಿರುವ ನೀರು ಗೋನೂರು ಕೆರೆ ತಲುಪುತ್ತಿದೆ. ಆ ಕೆರೆಗೂ ಮತ್ತಷ್ಟು ನೀರು ಹರಿಯುವ ಸಾಧ್ಯತೆ ಇದೆ. ಈಚೆಗಷ್ಟೇ ಈ ಕೆರೆಯೂ ಮಳೆಯಿಂದ ಕೋಡಿ ಬಿದ್ದಿತ್ತು.

ಐತಿಹಾಸಿಕ ಸಿಹಿನೀರು ಹೊಂಡ, ಸಂತೆಹೊಂಡ, ಎಲ್ಐಸಿ ಪಕ್ಕದ ಕೆಂಚಮಲ್ಲಪ್ಪನ ಬಾವಿ, ಚನ್ನಕೇಶವಸ್ವಾಮಿ ದೇಗುಲದ ಪಕ್ಕದ ಕಲ್ಯಾಣಿಗೂ ಭಾರಿ ನೀರು ಹರಿದು ಬಂದಿದೆ. ಕೋಟೆಯೊಳಗಿನ ಗೋಪಾಲಸ್ವಾಮಿ ಹೊಂಡದಲ್ಲೂ ನೀರಿನ ಪ್ರಮಾಣ ಹೆಚ್ಚಳವಾಗಿ ಕೋಡಿ ಬಿದ್ದಿದ್ದು ಒನಕೆ ಓಬವ್ವನ ಕಿಂಡಿ, ತಣ್ಣೀರು ದೋಣಿ ಮಾರ್ಗವಾಗಿ ಹರಿಯುತ್ತಿದೆ. ಮೆಟ್ಟಿಲುಗಳಿಂದ ಜರಿಯಂತೆ ಹರಿಯುತ್ತಿರುವ ನೀರು ಬಂಡೆಗಳ ಸಂದುಗಳನ್ನು ಸೀಳಿಕೊಂಡು ನಗರ ಪ್ರವೇಶಿಸುತ್ತಿದೆ. ಈ ದೃಶ್ಯ ಕಣ್ತುಂಬಿಕೊಳ್ಳಲು ಕೆಲವರು ಮುಂಜಾನೆ ಕೋಟೆಗೆ ಭೇಟಿ ನೀಡಿದ್ದರು.

ಕೆರೆಯಿಂದ ನೀರು ಹೊರಗೆ ಹರಿಯುತ್ತಿರುವ ದೃಶ್ಯವನ್ನು ನಾಗರಿಕರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇವು ಹೆಚ್ಚಾಗಿ ಶೇರ್‌ ಆಗುತ್ತಿವೆ. ನಗರ, ಪಟ್ಟಣ ಪ್ರದೇಶಗಳಲ್ಲೂ ಚರಂಡಿಗಳು ತುಂಬಿ ರಸ್ತೆಗಳ ಮೇಲೆ ನೀರು ಹರಿಯಿತು.

ರೈತರ ಹೊಲಗಳಿಗೂ ನೀರು ನುಗ್ಗಿದ್ದು, ಬಿತ್ತನೆ ಮಾಡಿದ್ದ ಬೆಳೆಗಳು ಕೊಚ್ಚಿಹೋಗಿದೆ. ಈರುಳ್ಳಿ, ಮೆಕ್ಕೆಜೋಳ ಬೆಳೆಗಳಿಗೆ ಹಾನಿಯಾಗಿದೆ. ಅವೈಜ್ಞಾನಿಕ ಸರ್ವಿಸ್ ರಸ್ತೆ, ಚೆಕ್‌ಡ್ಯಾಂ ನಿರ್ಮಾಣವೇ ಇದಕ್ಕೆ ಕಾರಣ ಎಂದು ರೈತರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.