ಚಿತ್ರದುರ್ಗ: ತಮ್ಮ ಆಡಳಿತದ ಅವಧಿಯ ಅಂತಿಮ ಹಂತದಲ್ಲಿ ನಗರಸಭೆ ಸದಸ್ಯರು ಕೈಗೊಂಡಿರುವ ಅಧ್ಯಯನ ಪ್ರವಾಸಕ್ಕೆ ಹಣಕಾಸಿನ ಕೊರತೆಯಾಗಿದ್ದು, ಅಗತ್ಯ ಅನುದಾನದ ಅನುಮೋದನೆಗಾಗಿ ಅ.23ರಂದು ನಗರಸಭೆ ವಿಶೇಷ ಸಾಮಾನ್ಯ ಸಭೆ ಕರೆದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳ ತಂಡ ಘನ ತ್ಯಾಜ್ಯ ನಿರ್ವಹಣಾ ಅಧ್ಯಯನ ಪ್ರವಾಸ ಕೈಗೊಂಡಿದೆ. ಸ್ವಚ್ಛ ಭಾರತ ಮಿಷನ್ 2.0 ಯೋಜನೆ, ಸಾಮರ್ಥ್ಯಾಭಿವೃದ್ಧಿ ಉಪ ಘಟಕದಡಿ ಅಹಮದಾಬಾದ್ ಹಾಗೂ ಚಂಡೀಗಡ ನಗರಗಳಲ್ಲಿ ಅಳವಡಿಸಿಕೊಂಡಿರುವ ಘನತ್ಯಾಜ್ಯ ನಿರ್ವಹಣೆಯನ್ನು ಅಧ್ಯಯನ ಮಾಡಿ ಅದನ್ನು ಕೋಟೆನಾಡಿನಲ್ಲೂ ಅನುಷ್ಠಾನಗೊಳಿಸುವುದು ಪ್ರವಾಸದ ಉದ್ದೇಶವಾಗಿದೆ.
ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯರು ಹಾಗೂ ಅಧಿಕಾರಿಗಳು ಸೇರಿ ಒಟ್ಟು ₹ 54 ಲಕ್ಷ ಬಜೆಟ್‌ಗೆ ಅನುಮೋದನೆ ಕೋರಿದ್ದರು. ಆದರೆ, ಕೆಲವು ಸದಸ್ಯರು ಆಡಳಿತಾವಧಿಯ ಅಂತಿಮ ಹಂತದಲ್ಲಿ ಪ್ರವಾಸಕ್ಕೆ ತೆರಳುವುದು ಬೇಡ ಎಂದು ನಿರಾಕರಿಸಿದ ಕಾರಣ ಪ್ರವಾಸಕ್ಕೆ ತೆರಳುವವರ ಸಂಖ್ಯೆ 32ಕ್ಕೆ ಕುಸಿದಿದೆ. ಹೀಗಾಗಿ ಬಜೆಟ್ ಮೊತ್ತ ಕೂಡ ₹ 54 ಲಕ್ಷದಿಂದ ₹ 27,51,840ಕ್ಕೆ ಇಳಿದಿದೆ.
ಪ್ರವಾಸ ಕೈಗೊಳ್ಳಲು ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ದರಪಟ್ಟಿ ಸಲ್ಲಿಸಿದ್ದು, ಪ್ರತಿ ಸದಸ್ಯರ ಪ್ರವಾಸಕ್ಕೆ ₹ 85,995 ದರ ನಿಗದಿ ಮಾಡಿದೆ. ಅದರಂತೆ ಒಟ್ಟು 32 ಮಂದಿಗೆ ಜಿಎಸ್‌ಟಿ ಸೇರಿ ₹ 27,51,840 ದರ ನೀಡಿದೆ.
ನಗರಾಭಿವೃದ್ಧಿ ಇಲಾಖೆ ಹಣಕ್ಕೂ ಕಾಯದ ಸದಸ್ಯರು ಬದಲಿ ಹಣ ಬಳಸಿ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ಜಿಲ್ಲಾ ಖನಿಜ ನಿಧಿ (ಡಿಎಂಎಫ್)ಯಿಂದ ಈಗಾಗಲೇ ₹ 6,77,196 ಹಣ ಬಿಡುಗಡೆ ಮಾಡಿಸಿಕೊಳ್ಳಲು ಸದಸ್ಯರು, ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ₹ 20,74,644 ಹಣ ಕೊರತೆಯಾಗಿದೆ.
ಕೊರತೆಯಾಗಿರುವ ಹಣವನ್ನು ನಗರಸಭೆಯ ಸಾಮಾನ್ಯ ನಿಧಿಯಿಂದ ಪಡೆಯಲು ಅನುಮೋದನೆ ಅವಶ್ಯಕವಾಗಿದೆ. ಅದಕ್ಕಾಗಿ ನಗರಸಭೆ ಅಧ್ಯಕ್ಷೆ ಅನಿತಾ ಅವರು ನಗರಸಭೆ ವಿಶೇಷ ಸಾಮಾನ್ಯ ಸಭೆ ಕರೆದಿದ್ದಾರೆ. ಅಧಿಕಾರದ ಅವಧಿ ಅ.31ರಂದು ಕೊನೆಗೊಳ್ಳಲಿದ್ದು ಅದರ ಒಳಗಾಗಿ ವಿಶೇಷ ಸಾಮಾನ್ಯ ಸಭೆ ನಡೆಸಿ ಕೊರತೆಯಾದ ಹಣಕ್ಕೆ ಅನುಮೋದನೆ ಪಡೆಯುವುದು ಸಾಮಾನ್ಯ ಸಭೆಯ ಒಟ್ಟಾರೆ ಉದ್ದೇಶವಾಗಿದೆ. ಅ.24ರಿಂದಲೇ ಪ್ರವಾಸ ಕೈಗೊಳ್ಳಲು ನಿರ್ಧರಿಸಿರುವ ಅಧ್ಯಕ್ಷರು ತರಾತುರಿಯಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
‘ವಿಶೇಷ ಸಾಮಾನ್ಯ ಸಭೆ ಆಹ್ವಾನ ಪತ್ರಿಕೆಯಲ್ಲಿರುವ ಬೇರೆ ಬೇರೆ ವಿಷಯಗಳನ್ನು ಕೇವಲ ನೆಪಕ್ಕಾಗಿ ಸೇರ್ಪಡೆ ಮಾಡಲಾಗಿದೆ. ಪ್ರವಾಸದ ಕೊರತೆ ಹಣಕ್ಕೆ ಅನುಮೋದನೆ ಪಡೆಯುವುದೇ ಸಭೆಯ ಏಕಮಾತ್ರ ಉದ್ದೇಶವಾಗಿದೆ’ ಎಂದು ಆರೋಪಿಸಿರುವ ಕೆಲ ಸದಸ್ಯರು ಸಭೆಯನ್ನು ಬಹಿಷ್ಕರಿಸಲು ನಿರ್ಧರಿದ್ದಾರೆ.
‘ಚಿತ್ರದುರ್ಗ ನಗರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ, ಒಳಚರರಂಡಿ ವ್ಯವಸ್ಥೆ ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಪ್ರವಾಸಕ್ಕೆ ತೆರಳಿದರೆ ಜನರು ನಮಗೆ ಶಾಪ ಹಾಕುತ್ತಾರೆ. ಹೀಗಾಗಿ ನಾನು ಬಹಿರಂಗವಾಗಿ ಪ್ರವಾಸ ಬೇಡ ಎಂದು ತಿಳಿಸಿ ವಿಶೇಷ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ್ದೇನೆ. ಇದು ಕೊರತೆಯಾಗಿರುವ ಹಣದ ಎತ್ತುವಳಿಗಾಗಿ ನಡೆಯುತ್ತಿರುವ ವಿಶೇಷ ಸಭೆಯಾಗಿದೆ’ ಎಂದು ಸದಸ್ಯರೊಬ್ಬರು ತಿಳಿಸಿದರು.
‘ಕೇವಲ ಒಂದು ವಾರದ ಅವಧಿ ಮಾತ್ರ ಬಾಕಿ ಉಳಿದಿದೆ. ವಿಶೇಷ ಸಾಮಾನ್ಯ ಸಭೆ ನಡೆಸಿ ಪ್ರವಾಸಕ್ಕೆ ತೆರಳುತ್ತಿರುವುದು ಅನುಮಾನಾಸ್ಪದ. ಇದರಿಂದ ನಗರಕ್ಕೆ ಯಾವ ಉಪಯೋಗವೂ ಆಗುವುದಿಲ್ಲ. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಪ್ರವಾಸ ತಡೆಯಬೇಕು’ ಎಂದು ನಗರದ ಪ್ರತಾತ್ ಜೋಗಿ ಹೇಳಿದರು.
‘ನಗರಸಭೆಯಲ್ಲಿ ಇ–ಸ್ವತ್ತು ಕೆಲಸ ನಡೆಯುತ್ತಿಲ್ಲ. ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲ. ಆದರೆ ನಗರಸಭೆ ಸದಸ್ಯರು, ಅಧಿಕಾರಿಗಳು ಜನರ ದುಡ್ಡು ಬಳಸಿ ಪ್ರವಾಸಕ್ಕೆ ತೆರಳುತ್ತಿರುವುದು ಏಕೆ’ ಎಂದು ಎಸ್.ತಿಪ್ಪೇಸ್ವಾಮಿ ಪ್ರಶ್ನಿಸಿದರು.
ಪ್ರವಾಸಕ್ಕೆ ಕೊರತೆಯಾಗಿರುವ ಅನುದಾನವನ್ನು ನಗರಸಭೆ ಸಾಮಾನ್ಯ ನಿಧಿಯಿಂದ ಪಡೆದುಕೊಳ್ಳಲು ಅವಕಾಶವಿದೆ. ಪ್ರವಾಸಕ್ಕೆ ಸದಸ್ಯರು ಮಾತ್ರವಲ್ಲದೇ ನೌಕರರೂ ತೆರಳುತ್ತಿದ್ದಾರೆಎಸ್.ಲಕ್ಷ್ಮಿ ಪೌರಾಯುಕ್ತೆ
ನಗರಸಭೆ ಎದುರು ಪ್ರತಿಭಟನೆ ನಾಳೆ
‘ನಗರಸಭೆ ಸದಸ್ಯರು ಯಾವುದೇ ಕಾರಣಕ್ಕೂ ಜನರ ತೆರಿಗೆ ಹಣವನ್ನು ಪ್ರವಾಸಕ್ಕೆ ಬಳಸಬಾರದು. ಬಹುತೇಕ ಸದಸ್ಯರು ಶ್ರೀಮಂತರಾಗಿದ್ದು ತಮ್ಮ ಸ್ವಂತ ಹಣದಲ್ಲಿ ಅಧ್ಯಯನ ಪ್ರವಾಸ ಮಾಡಿಕೊಂಡು ಬರಲಿ. ಜನರ ತೆರಿಗೆ ಹಣ ಬಳಸದಂತೆ ಒತ್ತಾಯಿಸಿ ಅ.23ರಂದು ನಗರಸಭೆ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಕರುನಾಡ ವಿಜಯಸೇನೆ ಸಂಘಟನೆ ಅಧ್ಯಕ್ಷ ಕೆ.ಟಿ. ಶಿವಕುಮಾರ್ ಹೇಳಿದರು. ‘ನಗರಸಭೆ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸುತ್ತೇವೆ. ನಗರಸಭೆ ಸದಸ್ಯರ ಮೋಜು–ಮಸ್ತಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.