ADVERTISEMENT

ಚಿತ್ರದುರ್ಗ: ವಾರಾಂತ್ಯದಲ್ಲಿ ಜಿಲ್ಲೆಯ ಪ್ರವಾಸಿತಾಣ ಭರ್ತಿ

ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ, ಅಂತರ, ಮಾಸ್ಕ್‌ ಕಣ್ಮರೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 16:40 IST
Last Updated 1 ಆಗಸ್ಟ್ 2021, 16:40 IST
ಚಿತ್ರದುರ್ಗದ ಆಡುಮಲ್ಲೇಶ್ವರ ಕಿರುಮೃಗಾಲಯದ ಉದ್ಯಾನದಲ್ಲಿ ಭಾನುವಾರ ಆಟದಲ್ಲಿ ನಿರತರಾದ ಮಕ್ಕಳು.
ಚಿತ್ರದುರ್ಗದ ಆಡುಮಲ್ಲೇಶ್ವರ ಕಿರುಮೃಗಾಲಯದ ಉದ್ಯಾನದಲ್ಲಿ ಭಾನುವಾರ ಆಟದಲ್ಲಿ ನಿರತರಾದ ಮಕ್ಕಳು.   

ಚಿತ್ರದುರ್ಗ: ಕೋವಿಡ್‌ ಮೂರನೇ ಅಲೆಯ ಭೀತಿಯ ನಡುವೆಯೂ ಪ್ರವಾಸಿತಾಣಗಳೂ ಭರ್ತಿಯಾಗುತ್ತಿವೆ. ವಾರಾಂತ್ಯ ಸಂದರ್ಭದಲ್ಲಿ ರಾಜ್ಯದ ಹಲವೆಡೆಯಿಂದ ಜಿಲ್ಲೆಗೆ ಪ್ರವಾಸಿಗರ ದಂಡು ಹರಿದುಬರುತ್ತಿದೆ.

ಐತಿಹಾಸಿಕ ಕಲ್ಲಿನ ಕೋಟೆ, ಆಡುಮಲ್ಲೇಶ್ವರ ಕಿರುಮೃಗಾಲಯ, ಚಂದ್ರವಳ್ಳಿ, ವಿ.ವಿ.ಸಾಗರ ಜಲಾಶಯ, ಮುರುಘಾ ಮಠ ಸೇರಿ ಹಲವು ಪ್ರವಾಸಿತಾಣಗಳಿಗೆ ಭಾನುವಾರ ನಿರೀಕ್ಷೆ ಮೀರಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕೋವಿಡ್‌ ಎರಡನೇ ಅಲೆಯ ತೀವ್ರತೆ ಕಡೆಮೆಯಾದ ಬಳಿಕ ಪ್ರವಾಸಿಗರು ಇತ್ತ ಮುಖ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಕಾರಣಕ್ಕೆ ಬಾಗಿಲು ಮುಚ್ಚಿದ್ದ ಪ್ರವಾಸಿತಾಣಗಳು ಹೊಸ ಮೆರುಗು ಪಡೆದುಕೊಳ್ಳುತ್ತಿವೆ.

ಕೋವಿಡ್‌ ತಡೆಗೆ ಸರ್ಕಾರ ರೂಪಿಸಿದ ಮಾರ್ಗಸೂಚಿಗಳು ಇಲ್ಲಿ ಸ್ಪಷ್ಟವಾಗಿ ಉಲ್ಲಂಘನೆ ಆಗುತ್ತಿವೆ. ಮಾಸ್ಕ್‌ ಧರಿಸುವ ಹಾಗೂ ಅಂತರ ಕಾಯ್ದುಕೊಳ್ಳುವುದನ್ನು ಬಹುತೇಕರು ಮರೆತಿರುವಂತೆ ಕಾಣುತ್ತಿದೆ. ಪ್ರವಾಸಿತಾಣಗಳಲ್ಲಿ ಜನಜಂಗುಳಿ ನಿರ್ಮಾಣವಾಗುತ್ತಿದೆ. ಟಿಕೆಟ್‌ ಕೌಂಟರ್‌ ಬಳಿ ನೀಡುವ ಸೂಚನೆಗಳನ್ನು ಪ್ರವಾಸಿಗರು ಪಾಲನೆ ಮಾಡುತ್ತಿಲ್ಲ.

ADVERTISEMENT

ಚಿತ್ರನಟಿ ಜಯಂತಿ ನಿಧನರಾದ ಬಳಿಕ ಚಿತ್ರದುರ್ಗ ಕೋಟೆ ಮತ್ತೊಮ್ಮೆ ಗಮನ ಸೆಳೆಯುತ್ತಿದೆ. ‘ನಾಗರಹಾವು’ ಚಿತ್ರದ ‘ಕನ್ನಡ ನಾಡಿನ ವೀರ ರಮಣಿಯ...’ ಹಾಡಿನಲ್ಲಿ ಓನಕೆ ಓಬವ್ವನಾಗಿ ಜಯಂತಿ ಕಾಣಿಸಿಕೊಂಡಿದ್ದರು. ಅವರು ಇತ್ತೀಚೆಗೆ ಅಗಲಿದ್ದು, ಓಬವ್ವನ ಕಿಂಡಿಯನ್ನು ನೋಡಲು ಪ್ರವಾಸಿಗರು ಹೆಚ್ಚಾಗಿ ಕೋಟೆಗೆ ಭೇಟಿ ನೀಡುತ್ತಿದ್ದಾರೆ.

ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಕೋಟೆಯಲ್ಲಿ ಜಲಧಾರೆಗಳು ಸೃಷ್ಟಿಯಾಗಿವೆ. ಮೆಟ್ಟಿಲುಗಳ ಮೇಲೆ ಹರಿಯುವ ನೀರಿನ ಜರಿಯನ್ನು ನೋಡಲು ಪ್ರವಾಸಿಗರು ಉತ್ಸುಕರಾಗಿ ಬರುತ್ತಿದ್ದಾರೆ. ಕೋಟೆಯ ಮುಂಭಾಗದ ರಸ್ತೆಯಲ್ಲಿ ವಾಹನದಟ್ಟಣೆ ಹೆಚ್ಚಾಗುತ್ತಿದೆ. ಸಮೀಪದ ಅಂಗಡಿಗಳು ಪ್ರವಾಸಿಗರಿಂದ ತುಂಬಿರುತ್ತವೆ.

ಆಡುಮಲ್ಲೇಶ್ವರ ಕಿರುಮೃಗಾಲಯಕ್ಕೆ ಹೆಚ್ಚಾಗಿ ಮಕ್ಕಳು ಭೇಟಿ ನೀಡುತ್ತಿದ್ದಾರೆ. ಮೃಗಾಲಯದ ಆವರಣದಲ್ಲಿರುವ ಉದ್ಯಾನದಲ್ಲಿ ಆಟವಾಡುವುದು ಮಕ್ಕಳಿಗೆ ಇಷ್ಟ. ಚಂದ್ರವಳ್ಳಿಯಲ್ಲಿ ಪ್ರವಾಸಿಗರು ದಿನಗಟ್ಟಲೆ ಕಾಲ ಕಳೆಯುತ್ತಾರೆ. ವಿ.ವಿ.ಸಾಗರ ಜಲಾಶಯದ ಮಟ್ಟ ಹೆಚ್ಚಾಗುತ್ತಿದ್ದು, ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.