
ಚಿತ್ರದುರ್ಗ: ‘ಜಿಲ್ಲೆಗೆ ಎರಡು ತಿಂಗಳಲ್ಲಿ ತುಂಗಭದ್ರಾ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಆಗಲಿದೆ. ಬಹು ಕುಡಿಯುವ ನೀರು ಯೋಜನೆಯಡಿ ಪ್ರತಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಹರಿಯಲಿದೆ’ ಎಂದು ಶಾಸಕ, ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ. ರಘುಮೂರ್ತಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಗ್ರಾಮೀಣ ನೀರು ಸರಬರಾಜು ಯೋಜನೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
‘ತುಂಗಾಭದ್ರಾ ಜಲಾಶಯದ ಹಿನ್ನೀರಿನಿಂದ ತುಮಕೂರು ಜಿಲ್ಲೆಯ ಪಾವಗಡ ವಿಧಾನಸಭಾ ಕ್ಷೇತ್ರ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಮತ್ತು ಚಳ್ಳಕೆರೆ ವಿಧಾನಸಭಾ ಕ್ಷೇತ್ರ, ವಿಜಯನಗರ ಜಿಲ್ಲೆಯ ಕೂಡ್ಲಿಗಿ, ಹೊಸಪೇಟೆ ಕ್ಷೇತ್ರಗಳಿಗೆ ಬಹುಗ್ರಾಮ ಕುಡಿಯುವ ನೀರನ್ನು ಪ್ರಾಯೋಗಿಕವಾಗಿ ಹರಿಸಲಾಗುತ್ತಿದೆ. ಈಗಾಗಲೇ ಓವರ್ ಹೆಡ್ ಟ್ಯಾಂಕ್ ಗಳಿಗೆ ಬಿಡಲಾಗಿದೆ’ ಎಂದರು.
‘ವಿವಿಧೆಡೆ ಹಾಕಲಾಗಿರುವ ಪೈಪ್ ಲೈನ್ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಎಲ್ಲೆಲ್ಲಿ ವ್ಯತ್ಯಾಸಗಳಾಗಿದೆ ಅದನ್ನು ಸರಿಪಡಿಸುವ ಮೂಲಕ ಎಲ್ಲಾ ಹಳ್ಳಿಗಳ ಟ್ಯಾಂಕ್‌ಗಳಿಗೆ ನೀರು ಹರಿಸುವ ಕೆಲಸ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ತುಂಗಭದ್ರಾ ಜಲಾಶಯದಿಂದ ನೀರೆತ್ತುವ ಮೂಲಕ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲಾ ಮುಖ್ಯ ಹಾಗೂ ವಿತರಣಾ ಪೈಪ್ ಲೈನ್ ಕಾಮಗಾರಿಗಳನ್ನು ಸರಿಪಡಿಸಬೇಕು. ನೀರು ಹರಿಸುವ ಸಂದರ್ಭದಲ್ಲಿ ಯಾವುದೇ ತೊಂದರೆಯಾದರೆ ತಕ್ಷಣವೇ ಅವುಗಳನ್ನು ದುರಸ್ತಿ ಮಾಡಬೇಕು’ ಎಂದರು.
‘ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ಚಿತ್ರದುರ್ಗ ತಾಲೂಕು, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ತುರುವನೂರು ಹೋಬಳಿಯ 59 ಗ್ರಾಮಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗಿದೆ. ಶೀಘ್ರವಾಗಿ ಈ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಪ್ರತಿ ಹಳ್ಳಿಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಟ್ಯಾಂಕ್ ನಿರ್ಮಿಸಲಾಗಿದೆ’ ಎಂದರು.
‘ಗುಣಮಟ್ಟ ಮತ್ತು ಸ್ವಚ್ಛವಾಗಿರುವ ಕಡೆ ಬಿಟ್ಟು ಉಳಿದಂತೆ ಅಗತ್ಯವಿರುವ ಎಲ್ಲಾ ಕಡೆ ಹೊಸ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲಾಗುವುದು. ಆ ಮೂಲಕ ಜನರ ಆರೋಗ್ಯ ದೃಷ್ಟಿಯಿಂದ ಶುದ್ದ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ವಹಿಸಲಾಗಿದೆ. ಈಗಾಗಲೇ ಇರುವ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ಕ್ರಮ ವಹಿಸಲಾಗಿದೆ. ಈ ಕುರಿತು ಅಧಿಕಾರಿಗಳು ಸಮಗ್ರ ಮಾಹಿತಿ ಒದಗಿಸಬೇಕು’ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್ ಆಕಾಶ್, ಜಿ.ಪಂ ಉಪಕಾರ್ಯದರ್ಶಿ ರಂಗಸ್ವಾಮಿ, ಕುಡಿಯುವ ನೀರು ಸರಬರಾಜು ಇಲಾಖೆ ಅಧೀಕ್ಷಕ ಎಂಜಿನಿಯರ್ ಇಂದ್ರಕುಮಾರ್, ಕಾರ್ಯನಿರ್ವಾಹಕ ಎಂಜಿನಿಯರ್ ಅಮರನಾಥ್ ಜೈನ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್, ಮೇಘ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಎಜಿಎಂ ಜೈರಾಮ್, ಜಿಎಂ ಕೋಟೇಶ್ವರ ರಾವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.