ADVERTISEMENT

ಸಾವಿರ ವಿದ್ಯಾರ್ಥಿಗಳಿಗೆ ಇಬ್ಬರೇ ಪ್ರಾಧ್ಯಾಪಕರು

ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ಕೊರತೆ; ಸಕಾಲಕ್ಕೆ ನಡೆಯದ ತರಗತಿಗಳು

ಜಿ.ಬಿ.ನಾಗರಾಜ್
Published 19 ಜನವರಿ 2021, 1:29 IST
Last Updated 19 ಜನವರಿ 2021, 1:29 IST
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣದಲ್ಲಿ ಸೋಮವಾರ ಕಂಡುಬಂದ ವಿದ್ಯಾರ್ಥಿಗಳು.
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣದಲ್ಲಿ ಸೋಮವಾರ ಕಂಡುಬಂದ ವಿದ್ಯಾರ್ಥಿಗಳು.   

ಚಿತ್ರದುರ್ಗ: ಕೋವಿಡ್‌ ಆತಂಕ ದೂರವಾಗುತ್ತಿದ್ದಂತೆ ಪದವಿ ಕಾಲೇಜು ಪೂರ್ಣವಾಗಿ ಬಾಗಿಲು ತೆರೆದಿವೆ. ದಿನ ಕಳೆದಂತೆ ಕಾಲೇಜಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ, ಅತಿಥಿ ಉಪನ್ಯಾಸಕರ ಕೊರತೆಯಿಂದ ಸಕಾಲಕ್ಕೆ ತರಗತಿಗಳು ನಡೆಯುತ್ತಿಲ್ಲ.

ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಸುಮಾರು 1,200 ವಿದ್ಯಾರ್ಥಿಗಳಿದ್ದಾರೆ. ಇಬ್ಬರೇ ಪ್ರಾಧ್ಯಾಪಕರು ಎಲ್ಲರಿಗೂ ಬೋಧನೆ ಮಾಡುವುದು ಅಸಾಧ್ಯವಾಗಿದೆ. ಸರ್ಕಾರಿ ವಿಜ್ಞಾನ ಕಾಲೇಜಿನ ಇಂಗ್ಲಿಷ್‌ ವಿಭಾಗದಲ್ಲಿ ಒಬ್ಬರೇ ಪ್ರಾಧ್ಯಾಪಕರಿದ್ದಾರೆ. ಎಲ್ಲ ತರಗತಿಗಳಿಗೆ ಒಬ್ಬರೇ ಬೋಧನೆ ಮಾಡುವುದು ಕಷ್ಟವಾಗಿದೆ. ಕಾಲೇಜಿಗೆ ಹಾಜರಾದರೂ ಕ್ಯಾಂಪಸ್‌ ಸುತ್ತಿ ಮನೆಗೆ ಮರಳುವಂತಾಗಿದೆ ವಿದ್ಯಾರ್ಥಿಗಳ ಪಾಡು.

ಸಾಮಾನ್ಯವಾಗಿ ಶೈಕ್ಷಣಿಕ ವರ್ಷ ಜೂನ್ ಅಥವಾ ಜುಲೈ ತಿಂಗಳಲ್ಲಿ ಆರಂಭವಾಗುತ್ತಿತ್ತು. ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣಕ್ಕೆ ಶೈಕ್ಷಣಿಕ ವರ್ಷ ಆರಂಭವಾಗುವುದು ವಿಳಂಬವಾಯಿತು. ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ ನ. 17ರಿಂದ ತರಗತಿಗಳು ಆರಂಭವಾದವು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರಿಂದ ಬೋಧಕರ ಕೊರತೆ ಕಾಡಲಿಲ್ಲ. ಜ.15ರಿಂದ ಪ್ರಥಮ ಹಾಗೂ ದ್ವಿತೀಯ ವರ್ಷದ ಪದವಿ ತರಗತಿಗಳು ಆರಂಭವಾಗಿದ್ದರಿಂದ ಬೋಧಕರ ಸಮಸ್ಯೆ ಎದುರಾಗಿದೆ.

ADVERTISEMENT

ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಅತಿಥಿ ಉಪನ್ಯಾಸಕರ ನೇಮಕಾತಿಯೂ ನಡೆಯುತ್ತಿತ್ತು. ಪ್ರಸಕ್ತ ವರ್ಷ ಕಾಲೇಜು ಬಾಗಿಲು ತೆರೆದರೂ ನೇಮಕಾತಿ ಪ್ರಕ್ರಿಯೆ ಆರಂಭವಾಗಿಲ್ಲ. 2019–20ನೇ ಶೈಕ್ಷಣಿಕ ವರ್ಷದಲ್ಲಿ ನೇಮಕಾತಿ ಹೊಂದಿದವರ ಸೇವೆಯನ್ನೇ ಮುಂದುವರಿಸಲು ಅತಿಥಿ ಉಪನ್ಯಾಸಕರು ಒತ್ತಾಯಿಸಿದ್ದಾರೆ. ಸರ್ಕಾರ ಮಾತ್ರ ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸಕಾಲಕ್ಕೆ ತರಗತಿ ನಡೆಸಲು ಏಕೆ ಸಾಧ್ಯವಾಗುತ್ತಿಲ್ಲ ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರು ಉತ್ತರಿಸಲು ಹೆಣಗಾಡುತ್ತಿದ್ದಾರೆ.

ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳಿವೆ. 2,800 ವಿದ್ಯಾರ್ಥಿಗಳಿದ್ದು, 40 ಕಾಯಂ ಪ್ರಾಧ್ಯಾಪಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ 78 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಪದವಿ ಹಂತದ ವಾಣಿಜ್ಯ ವಿಭಾಗಕ್ಕೆ ಅಂದಾಜು 60 ಅತಿಥಿ ಉಪನ್ಯಾಸಕರ ಅಗತ್ಯವಿದೆ.

ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ 2,400ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಪ್ರಾಯೋಗಿಕ ತರಗತಿಗಳು ನಡೆಯುವ ಕಾರಣಕ್ಕೆ ಹೆಚ್ಚು ಬೋಧಕ ಸಿಬ್ಬಂದಿಯ ಅಗತ್ಯವಿದೆ. ಅತಿಥಿ ಉಪನ್ಯಾಸಕರ ಕೊರತೆ ಇರುವುದರಿಂದ ಎಲ್ಲ ತರಗತಿಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಪ್ರಾಧ್ಯಾಪಕರು.

ಪಾಲನೆಯಾಗುತ್ತಿಲ್ಲ ಕೋವಿಡ್‌ ನಿಯಮ ಕೋವಿಡ್‌ ನಿಯಮ ಪಾಲಿಸಿ ತರಗತಿ ನಡೆಸುವಂತೆ ಸರ್ಕಾರ ಸೂಚನೆ ನೀಡಿದೆ. ಬೋಧಕರ ಕೊರತೆ ಇರುವುದರಿಂದ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಿದೆ.

ಶೇ 50ರಷ್ಟು ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಹಾಗೂ ಉಳಿದ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬೋಧನೆ ಮಾಡುವಂತೆ ನಿಯಮಾವಳಿ ರೂಪಿಸಲಾಗಿದೆ. ಕೆಲ ಕಾಲೇಜುಗಳು ವಿಷಯವಾರು ವಿಂಗಡಣೆ ಮಾಡಿಕೊಂಡಿವೆ. ಸಾಕಷ್ಟು ಸಂಖ್ಯೆಯ ಬೋಧಕರು ಇಲ್ಲದಿರುವುದರಿಂದ ಒಂದೇ ತರಗತಿಗೆ ಎರಡು ಬಾರಿ ಬೋಧನೆ ಮಾಡಲು ಆಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.