ADVERTISEMENT

ಸಂವಿಧಾನ ತಿದ್ದುಪಡಿಗೆ ಅವಕಾಶ ಇದೆ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 5:07 IST
Last Updated 12 ಆಗಸ್ಟ್ 2022, 5:07 IST
ಚಿತ್ರದುರ್ಗದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ ಧ್ವಜ ವಿತರಣಾ ಕಾರ್ಯಕ್ರಮದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿದರು. ರಾಜ್ಯಸಭಾ ಮಾಜಿ ಸದಸ್ಯ ಎಚ್‌.ಹನುಮಂತಪ್ಪ, ಪ್ರಾಂಶುಪಾಲೆ ಪ್ರೊ.ಎಂ.ಎಸ್‌.ಸುಧಾದೇವಿ ಇದ್ದಾರೆ.
ಚಿತ್ರದುರ್ಗದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ ಧ್ವಜ ವಿತರಣಾ ಕಾರ್ಯಕ್ರಮದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿದರು. ರಾಜ್ಯಸಭಾ ಮಾಜಿ ಸದಸ್ಯ ಎಚ್‌.ಹನುಮಂತಪ್ಪ, ಪ್ರಾಂಶುಪಾಲೆ ಪ್ರೊ.ಎಂ.ಎಸ್‌.ಸುಧಾದೇವಿ ಇದ್ದಾರೆ.   

ಚಿತ್ರದುರ್ಗ: ಸಾಮಾಜಿಕ ಪರಿಸ್ಥಿತಿಯ ಅಗತ್ಯಕ್ಕೆ ತಕ್ಕಂತೆ ಸಂವಿಧಾನಕ್ಕೆ ತಿದ್ದುಪಡಿ ತರಲು ಅವಕಾಶವಿದೆ. ಅಂಬೇಡ್ಕರ್ ಹಾಗೂ ಸಂವಿಧಾನ ರಚನಾ ಸಮಿತಿಯ ಸದಸ್ಯರೇ ಇದನ್ನು ಹೇಳಿದ್ದಾರೆ ಎಂದುಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ ಧ್ವಜ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಷ್ಟ್ರದ ಭವಿಷ್ಯದ ಬೆಳವಣಿಗೆಗಳಲ್ಲಿ ಸಾಮಾಜಿಕ ಅಸಮತೋಲನ ಉಂಟಾದಾಗ ಸಂವಿಧಾನಕ್ಕೆ ತಿದ್ದುಪಡಿ ಅವಶ್ಯಕತೆ ಇದೆ ಎಂದು ಅಂಬೇಡ್ಕರ್‌ ಹೇಳಿದ್ದರು. ಆ ಎಲ್ಲಾ ಪ್ರಯತ್ನಗಳು ಕಾಲಕ್ಕೆ ತಕ್ಕಂತೆ ನಡೆಯುತ್ತಿರುತ್ತವೆ. ಆ ದಿಕ್ಕಿನಲ್ಲಿ ದೇಶದಲ್ಲಿ ಅನೇಕ ಬದಲಾವಣೆಗಳಾಗಿವೆ’ ಎಂದರು.

ADVERTISEMENT

‘ರಾಷ್ಟ್ರೀಯ ವಿಚಾರಧಾರೆಗಳನ್ನು ಮುಕ್ತವಾಗಿ ಅಭಿವ್ಯಕ್ತಗೊಳಿಸುವ ಸ್ವಾತಂತ್ರ್ಯವನ್ನು ಡಾ.ಬಿ.ಆರ್‌.ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿದರು. ಭಾವನೆಗಳನ್ನು ಯಾವುದೇ ಅಡೆತಡೆ ಇಲ್ಲದೆ ಸಮಾಜಕ್ಕೆ ಮುಟ್ಟಿಸುವಂತಹ ವಿಶ್ವದ ಬಹಳ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ’ ಎಂದು ತಿಳಿಸಿದರು.

‘ಸ್ವತಂತ್ರ್ಯ ಪೂರ್ವದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಂಡರೆ ಇದು ಕೇವಲ ಸ್ವಾತಂತ್ರ್ಯದ ಹಬ್ಬವಲ್ಲ, ಅನೇಕ ಮಹನೀಯರ ತ್ಯಾಗ, ಬಲಿದಾನದ ಪ್ರತಿಫಲ. ಬ್ರಿಟೀಷರ ಗುಂಡಿಗೆ ಎದೆಯೊಡ್ಡಿದ

ದೇಶಪ್ರೇಮಿಗಳ ಜೀವನ ಚರಿತ್ರೆ ಇವತ್ತಿನ ರಾಜಕಾರಣಿಗಳಿಗೆ ಆದರ್ಶ ಆಗಬೇಕಿತ್ತು. ಆದರೆ, ಅನೇಕರಿಗೆ ಆದರ್ಶವಾಗಿಲ್ಲ’ ಎಂದು ಬೇಸರಿಸಿದರು.

ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ರಾಜ್ಯಸಭಾ ಮಾಜಿ ಸದಸ್ಯ ಎಚ್‌.ಹನುಮಂತಪ್ಪ, ಪ್ರಾಂಶುಪಾಲರಾದ ಪ್ರೊ.ಎಂ.ಎಸ್‌. ಸುಧಾದೇವಿ, ಆಡಳಿತಾಧಿಕಾರಿ ಡಿ.ಎಚ್‌.ನಟರಾಜ್‌, ಸರಸ್ವತಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಫಾತ್ಯರಾಜನ್‌, ಕಾರ್ಯದರ್ಶಿ ಡಿ.ಕೆ.ಶೀಲಾ, ಸದಸ್ಯರಾದ ಅಬ್ದುಲ್‌ ರೆಹಮಾನ್‌, ಚಲ್ಮೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.