ADVERTISEMENT

ಕೆರೆಗಳಿಗೆ ನೀರು ತುಂಬಿಸುವ ಹೋರಾಟ

ನೇತೃತ್ವ ವಹಿಸಿಕೊಳ್ಳಲು ನಂಜಾವಧೂತ ಸ್ವಾಮೀಜಿಗೆ ರೈತರ ಮನವಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 4:34 IST
Last Updated 11 ಜುಲೈ 2025, 4:34 IST
ಹಿರಿಯೂರು ತಾಲ್ಲೂಕಿನ ಬೀರೇನಹಳ್ಳಿ ಸುತ್ತಮುತ್ತಲ ಗ್ರಾಮಗಳ ರೈತ ಮುಖಂಡರು ನಂಜಾವಧೂತ ಸ್ವಾಮೀಜಿಗೆ ಮನವಿ ಸಲ್ಲಿಸಿದರು
ಹಿರಿಯೂರು ತಾಲ್ಲೂಕಿನ ಬೀರೇನಹಳ್ಳಿ ಸುತ್ತಮುತ್ತಲ ಗ್ರಾಮಗಳ ರೈತ ಮುಖಂಡರು ನಂಜಾವಧೂತ ಸ್ವಾಮೀಜಿಗೆ ಮನವಿ ಸಲ್ಲಿಸಿದರು   

ಹಿರಿಯೂರು: ತಾಲ್ಲೂಕಿನಲ್ಲಿ ವಾಣಿವಿಲಾಸ ಜಲಾಶಯ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ನಾಲೆಯ ಮೂಲಕ ಕೆರೆಗಳಿಗೆ ನೀರು ತುಂಬಿಸಲು ಒತ್ತಾಯಿಸಿ ನಡೆಸುತ್ತಿರುವ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳುವಂತೆ ಗುರುವಾರ ಇಲ್ಲಿನ ಬೀರೇನಹಳ್ಳಿ ಸುತ್ತಮುತ್ತಲ ಗ್ರಾಮಗಳ ರೈತ ಮುಖಂಡರು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಮಠಕ್ಕೆ ತೆರಳಿ ನಂಜಾವಧೂತ ಸ್ವಾಮೀಜಿಗೆ ಮನವಿ ಸಲ್ಲಿಸಿದರು. 

ವಾಣಿವಿಲಾಸ ಅಣೆಕಟ್ಟೆಯ ನಾಲೆಗಳು ಹಾದು ಹೋಗಿರುವ ಜಮೀನುಗಳನ್ನು ಹೊರತುಪಡಿಸಿದರೆ, ಜವನಗೊಂಡನಹಳ್ಳಿ, ಕಸಬಾ, ಐಮಂಗಲ ಹಾಗೂ ಧರ್ಮಪುರ ಹೋಬಳಿಗಳಲ್ಲಿ ಅಂತರ್ಜಲಮಟ್ಟ ಕುಸಿದಿದೆ. 1200 ರಿಂದ 1300 ಅಡಿ ವರೆಗೆ ಕೊರೆಸಿದರೂ, ಕೊಳವೆಬಾವಿಗಳಲ್ಲಿ ನೀರು ಬರುತ್ತಿಲ್ಲ ಎಂದು ಹೇಳಿದರು. 

ಪಂಪ್‌ಸೆಟ್ ಆಶ್ರಯದಲ್ಲಿ ಬೆಳೆಸಿರುವ ಅಡಿಕೆ, ತೆಂಗು, ದಾಳಿಂಬೆ, ಬಾಳೆಯ ತೋಟಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ. ಬೀರೇನಹಳ್ಳಿ ಭಾಗದಲ್ಲಿ ಜುಲೈನಲ್ಲಿಯೇ ತೋಟಗಳಿಗೆ ಟ್ಯಾಂಕರ್ ಮೂಲಕ ನೀರು ಉಣಿಸುತ್ತಿದ್ದೇವೆ. ಇದು ದುಬಾರಿಯಾಗಿ ಪರಿಣಮಿಸಿದೆ  ಎಂದು ರೈತರು ನೋವು ಹೇಳಿಕೊಂಡರು. 

ADVERTISEMENT

ಜವನಗೊಂಡನಹಳ್ಳಿ ಹೋಬಳಿಯ 16 ಕೆರೆಗಳಿಗೆ ನೀರು ತುಂಬಿಸುವಂತೆ 255 ದಿನ ಸುದೀರ್ಘ ಹೋರಾಟ ನಡೆಸಿ, ಕೊನೆಗೆ ಆಮರಣಾಂತ ಉಪವಾಸಕ್ಕೆ ನಿರ್ಧರಿಸ‌ಲಾಗಿತ್ತು. 3 ತಿಂಗಳ ಗಡುವು ಕೇಳಿದ್ದ ಸಚಿವ ಸುಧಾಕರ್ 4 ತಿಂಗಳು ಕಳೆದರೂ, ಈ ವಿಚಾರದಲ್ಲಿ ಆಗಿರುವ ಪ್ರಗತಿ ಬಗ್ಗೆ ಚಕಾರ ಎತ್ತುತ್ತಿಲ್ಲ. 

ಜುಲೈ 12ರಂದು ಉಪಮುಖ್ಯಮಂತ್ರಿ ಜೊತೆ ರೈತರ ಸಭೆ ನಡೆಸಲಾಗುವುದು ಎಂದು ಸಚಿವ ಡಿ.ಸುಧಾಕರ್ ಭರವಸೆ ನೀಡಿದ್ದು, ಸಭೆ ನಡೆದು ಸಮಸ್ಯೆ ಇತ್ಯರ್ಥ ಆಗದೇ ಇದ್ದರೆ ಹಿರಿಯೂರು ಬಂದ್ ಕರೆ ಕೊಡುತ್ತೇವೆ. ತಾವು ಈ ಹೋರಾಟಕ್ಕೆ ಬರಬೇಕು ಎಂದು ರೈತರು ಸ್ವಾಮೀಜಿಯನ್ನು ಆಹ್ವಾನಿಸಿದರು.

ನಿಯೋಗದಲ್ಲಿ ರೈತಸಂಘ ಮತ್ತು ಹಸಿರುಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ಆಲೂರು ಸಿದ್ದರಾಮಣ್ಣ, ಬೀರೇನಹಳ್ಳಿ ರಾಮಯ್ಯ, ತಿಪ್ಪೇಸ್ವಾಮಿ, ತಿಮ್ಮಯ್ಯ, ಜೆಜೆಹಳ್ಳಿ ಈರಣ್ಣ, ಮಹೇಶಣ್ಣ, ಶಿವಣ್ಣ, ಕರಿಯಪ್ಪ, ಎಂ.ಆರ್.ಈರಣ್ಣ, ತಿಮ್ಮಣ್ಣ, ಗೋವಿಂದಪ್ಪ, ಧನಂಜಯ್, ಕೃಷ್ಣಪ್ಪ ಉಪಸ್ಥಿತರಿದ್ದರು.

ಶಾಂತಿಯುತ ಹೋರಾಟ: ಸ್ವಾಮೀಜಿ ಕೆರೆಗಳಿಗೆ ನೀರು ತುಂಬಿಸುವಂತೆ ರೈತರು ನಡೆಸುತ್ತಾ ಬಂದಿರುವ ಹೋರಾಟಕ್ಕೆ ಸರ್ಕಾರ ಸ್ಪಂದಿಸಬೇಕಿತ್ತು. ಅನ್ನ ಬೆಳೆಯಲು ನೀರು ಕೇಳುವ ರೈತರನ್ನು ಗೋಳಾಡಿಸುವುದು ವ್ಯವಸ್ಥೆಯ ಅಣಕವೇ ಸರಿ. ಜುಲೈ 12ರ ಸಭೆಯಲ್ಲಿ ಸಮಸ್ಯೆ ಇತ್ಯರ್ಥ ಆಗದಿದ್ದರೆ ರೈತರೊಂದಿಗೆ ಚಳವಳಿಯಲ್ಲಿ ಪಾಲ್ಗೊಳ್ಳುತ್ತೇನೆ. ಜೊತೆಗೆ ನೀರಾವರಿ ಸಚಿವರೊಂದಿಗೆ ಚರ್ಚಿಸುತ್ತೇನೆ. ರೈತರು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು. ಶಾಂತಿಯುತ ಹೋರಾಟದ ಮೂಲಕ ನೀರು ಪಡೆಯೋಣ ಎಂದು ನಂಜಾವಧೂತ ಸ್ವಾಮೀಜಿ ಭರವಸೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.