ADVERTISEMENT

ಹೊಸದುರ್ಗ | ನಿರಂತರ ಮಳೆ: ಯೂರಿಯಾಗೆ ಅಧಿಕ ಬೇಡಿಕೆ

ಹೊಸದುರ್ಗ; ರೈತರಿಗೆ ದೊರೆಯದ ಅಗತ್ಯ ರಸಗೊಬ್ಬರ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 6:47 IST
Last Updated 8 ಸೆಪ್ಟೆಂಬರ್ 2025, 6:47 IST
ಹೊಸದುರ್ಗದ ಎಪಿಎಂಸಿ ಆವರಣದಲ್ಲಿ ಯೂರಿಯಾ ರಸಗೊಬ್ಬರಕ್ಕಾಗಿ ಸರದಿ ಸಾಲಿನಲ್ಲಿ ನಿಂತಿರುವ ರೈತರು
ಹೊಸದುರ್ಗದ ಎಪಿಎಂಸಿ ಆವರಣದಲ್ಲಿ ಯೂರಿಯಾ ರಸಗೊಬ್ಬರಕ್ಕಾಗಿ ಸರದಿ ಸಾಲಿನಲ್ಲಿ ನಿಂತಿರುವ ರೈತರು   

ಹೊಸದುರ್ಗ: ಒಂದೂವರೆ ತಿಂಗಳಿನಿಂದ ಆಗಾಗ ಸೋನೆ ಮಳೆಯಾಗುತ್ತಿದ್ದು, ರಾಗಿ ಹಾಗೂ ಮುಸುಕಿನ ಜೋಳ ಬೆಳೆಗೆ ಯೂರಿಯಾ ರಸಗೊಬ್ಬರ ಖರೀದಿಸಲು ರೈತರು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಮಳೆಗಾಲದ ಬೆಳೆಗಳಿಗೆ ಈಗ ರಸಗೊಬ್ಬರ ಹಾಕಲು ಸಕಾಲವಾಗಿದೆ. ರಸಗೊಬ್ಬರ ಹಾಕಲು ಯಾವುದೇ ಅಂಗಡಿಗಳಲ್ಲಿಯೂ ರಸಗೊಬ್ಬರ ದಾಸ್ತಾನು ಇಲ್ಲ. ಪಟ್ಟಣದ ಎಪಿಎಂಸಿ ಆವರಣ, ಸೊಸೈಟಿ ಅಥವಾ ರೈತ ಉತ್ಪಾದಕರ ಸಂಸ್ಥೆಗಳಿಗೆ ಯೂರಿಯಾ ಗೊಬ್ಬರ ಬಂದರೆ ಸಾಕು ಸಾವಿರಾರು ಜನರು ಸರದಿ ಸಾಲಿನಲ್ಲಿ ನಿಲ್ಲುತ್ತಾರೆ. ಮುಂಜಾನೆ 5 ಗಂಟೆಯಿಂದ ನಿಂತು ಮಧ್ಯಾಹ್ನ 2 ಗಂಟೆಗೆ ಗೊಬ್ಬರ ಪಡೆದು ಮನೆಗೆ ತೆರಳುತ್ತಿದ್ದಾರೆ. ರೈತರಿಗೆ ನಿತ್ಯ ಕಾಯುವುದೇ ಕೆಲಸವಾಗಿಬಿಟ್ಟಿದೆ.

ಸರ್ಕಾರ ರಾಗಿ ಬೆಳೆಗೆ ಬೆಂಬಲಬೆಲೆ ಘೋಷಿಸಿದೆದೆ. ತಾಲ್ಲೂಕಿನ ಕೃಷಿ ಭೂಮಿ ರಾಗಿ ಬೆಳೆಗೆ ಯೋಗ್ಯವಾಗಿದೆ. ಹವಾಮಾನವೂ ಉತ್ತಮವಾಗಿದ್ದು, ರಾಗಿ ಬೆಳೆ ವಿಸ್ತೀರ್ಣಗೊಂಡಿದೆ. ಇಷ್ಟೇ ಅಲ್ಲದೇ ನಿರಂತರ ಮಳೆಯ ಕಾರಣದಿಂದ ಯೂರಿಯಾ ಬೆಳೆಗೆ ಬೇಡಿಕೆ ಹೆಚ್ಚಾಗಿದೆ. ರಾಗಿಗೆ ಸಮಯಕ್ಕೆ ಸರಿಯಾಗಿ ಗೊಬ್ಬರ ಹಾಕದಿದ್ದರೆ, ತೇವಾಂಶ ಹೆಚ್ಚಾಗಿ ಹಳದಿ ಬಣ್ಣಕ್ಕೆ ತಿರುಗುತ್ತಿವೆ.

ADVERTISEMENT

‘ಒಬ್ಬ ರೈತನಿಗೆ 2 ಚೀಲ ಮಾತ್ರ ಯೂರಿಯಾ ನೀಡುತ್ತಿರುವುದು ಸಾಕಾಗುತ್ತಿಲ್ಲ. ಎರಡು ಎಕರೆಗೆ ಮೂರು ಚೀಲವಾದರೂ ಯೂರಿಯಾ ಬೇಕು. ರಾಗಿ ಬಿತ್ತಿದಾಗಿನಿಂದಲೂ ಒಂದೆರಡು ದಿನ ಬಿಟ್ಟು ನಿರಂತರವಾಗಿ ಮಳೆ ಸುರಿಯುತ್ತಿದೆ. ಸದ್ಯ ಯೂರಿಯಾ ಹಾಕದಿದ್ದರೆ ರಾಗಿ ಹಾಗೂ ಮುಸುಕಿನ ಜೋಳ ಕೈಗೆಟುಕುವುದೇ ಅನುಮಾನವಾಗಿದೆ. ಅಗತ್ಯ ರಸಗೊಬ್ಬರ ನೀಡಲು ಸರ್ಕಾರ ಕ್ರಮ ವಹಿಸಬೇಕು. ತಪ್ಪಿದ್ದಲ್ಲಿ ರಾಗಿ ಹಾಗೂ ಮುಸುಕಿನ ಜೋಳ ಇಳುವರಿ ಕುಂಠಿತವಾಗಬಹುದು’ ಎಂದು ಬಾಗೂರು ಗ್ರಾಮದ ರೈತ ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.

‘ತಾಲ್ಲೂಕಿನಾದ್ಯಂತ 31,000  ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ಇನ್ನೂ 4 ರಿಂದ 5 ಸಾವಿರ ಹೆಕ್ಟೇರ್‌ ಬಿತ್ತನೆಯಾಗುವ ನಿರೀಕ್ಷೆಯಿದೆ. ಒಂದು ತಿಂಗಳಿನಿಂದ 800 ಟನ್ ಯೂರಿಯಾ ಗೊಬ್ಬರ ವಿತರಿಸಲಾಗಿದೆ. ಶನಿವಾರ ಅಥವಾ ಭಾನುವಾರ ಇನ್ನೂ 200 ಟನ್ ಯೂರಿಯಾ ಬರುವ ನಿರೀಕ್ಷೆಯಿದೆ. ಜಾನಕಲ್, ದೇವಪುರ, ಸಾಣೇಹಳ್ಳಿ ಕಂಚೀಪುರ, ಬಾಗೂರು, ಶ್ರೀರಾಂಪುರ ಸೊಸೈಟಿ ಅಥವಾ ರೈತ ಉತ್ಪಾದನೆ ಕೇಂದ್ರಗಳಿಗೆ ಗೊಬ್ಬರ ನೀಡಲಾಗುವುದು. ರೈತರ ಎಫ್ಐಡಿ ಪರಿಶೀಲಿಸಿ, ಗೊಬ್ಬರ ವಿತರಿಸಲಾಗುತ್ತಿದೆ. ಇತರೆ ತಾಲ್ಲೂಕು ಅಥವಾ ಜಿಲ್ಲೆಯ ರೈತರಿಗೆ ನೀಡಿಲ್ಲ. ಇನ್ನೂ 1,000 ರಿಂದ 1,200 ಟನ್ ಯೂರಿಯಾ  ಅವಶ್ಯಕತೆಯಿದೆ. ರೈತರು ಆತಂಕಪಡುವ ಅಗತ್ಯವಿಲ್ಲ. ರೈತರು ನ್ಯಾನೋ ಯೂರಿಯಾ ಗೊಬ್ಬರ ಬಳಸಿ. ಹರಳು ರೂಪದ ಯೂರಿಯಾ ರಸಗೊಬ್ಬರ ಮಿತಗೊಳಿಸಿ. ಭೂಮಿ ಫಲವತ್ತತೆ ಕಾಪಾಡಿಕೊಳ್ಳಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶಸಲಹೆ ನೀಡಿದರು.

ಹೊಸದುರ್ಗದ ಬಾಗೂರಿನ ರೈತ ಉತ್ಪಾದಕರ ಸಂಸ್ಥೆಯಲ್ಲಿ ಯೂರಿಯಾ ಖರೀದಿಗಾಗಿ ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತಿರುವ ರೈತರು
ಹೊಸದುರ್ಗ ಬಾಗೂರಿನ  ಜಮೀನಿನಲ್ಲಿ ಯೂರಿಯಾ ಹಾಕುತ್ತಿರುವ ರೈತ ವೆಂಕಟೇಶ್

ಸತತ ಮಳೆಯಿಂದಾಗಿ ತೇವಾಂಶ ಹೆಚ್ಚಳ ರಾಗಿ, ಮುಸುಕಿನ ಜೋಳ ಕೈತಪ್ಪುವ ಆತಂಕ ರೈತರಿಗೆ ಅಗತ್ಯವಿದ್ದಷ್ಟು ಪೂರೈಕೆಗೆ ಆಗ್ರಹ

ಕಾಳಸಂತೆಯಲ್ಲಿ ಯೂರಿಯಾ ಮಾರಾಟ ಆಗದಂತೆ ತಡೆಗಟ್ಟಬೇಕು. ಗೊಬ್ಬರದ ಸಮಸ್ಯೆಯಾಗಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ. ನ್ಯಾನೋ ಯೂರಿಯಾವನ್ನು ರೈತರ ಎಲ್ಲಾ ಜಮೀನುಗಳಿಗೆ ಸರ್ಕಾರವೇ ಡ್ರೋನ್ ಮೂಲಕ ಸಿಂಪಡಿಸಲಿ
ಕೆ.ಸಿ. ಮಹೇಶ್ವರಪ್ಪ ರೈತ ಸಂಘದ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.