ADVERTISEMENT

ಹಿರಿಯೂರು: ಉತ್ತರೆ ಗುಡ್ಡ ಪ್ರದೇಶ ಇನ್ನು ವನ್ಯಜೀವಿ ಧಾಮ

ಪ್ರಾಣಿ–ಪಕ್ಷಿ ಸಂಕುಲ ಉಳಿವಿಗೆ ಸಹಕಾರಿ: ಶಾಸಕಿ ಪೂರ್ಣಿಮಾ ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 5:01 IST
Last Updated 19 ಜನವರಿ 2023, 5:01 IST
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಎಡಭಾಗದ ಅಂಚಿಗೆ ಹೊಂದಿಕೊಂಡಿರುವ ಉತ್ತರೆಗುಡ್ಡ ಅರಣ್ಯ ಪ್ರದೇಶವನ್ನು ಈಚೆಗೆ ವನ್ಯಜೀವಿಧಾಮಕ್ಕೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಭೇಟಿ ನೀಡಿದ್ದರು.
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಎಡಭಾಗದ ಅಂಚಿಗೆ ಹೊಂದಿಕೊಂಡಿರುವ ಉತ್ತರೆಗುಡ್ಡ ಅರಣ್ಯ ಪ್ರದೇಶವನ್ನು ಈಚೆಗೆ ವನ್ಯಜೀವಿಧಾಮಕ್ಕೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಭೇಟಿ ನೀಡಿದ್ದರು.   

ಹಿರಿಯೂರು: ‘ಮೀಸಲು ಅರಣ್ಯ ಪ್ರದೇಶವಾಗಿದ್ದ ತಾಲ್ಲೂಕಿನ ಉತ್ತರೆಗುಡ್ಡ ಅರಣ್ಯ ಪ್ರದೇಶವನ್ನು ಈಚೆಗೆ ಅರಣ್ಯ ಇಲಾಖೆ ವನ್ಯಜೀವಿಧಾಮ ಎಂದು ಘೋಷಿಸಿದ್ದು, ಇದರಿಂದ ಅರಣ್ಯ ಹಾಗೂ ಪ್ರಾಣಿ–ಪಕ್ಷಿ ಸಂಕುಲದ ಉಳಿವಿಗೆ ಸಹಕಾರಿಯಾಗಲಿದೆ’ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಎಡಭಾಗದ ಅಂಚಿಗೆ ಹೊಂದಿಕೊಂಡಿರುವ ಉತ್ತರೆಗುಡ್ಡ ಅರಣ್ಯ ಪ್ರದೇಶಕ್ಕೆ ಈಚೆಗೆ ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು, ಪರಿಸರ ಪ್ರೇಮಿಗಳೊಂದಿಗೆ ಭೇಟಿ ನೀಡಿದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

‘ಜೂನ್ ತಿಂಗಳಿಂದ ಅಕ್ಟೋಬರ್ ನಡುವೆ ಈ ಪ್ರದೇಶಕ್ಕೆ ಭೇಟಿ ನೀಡಿದರೆ ಮಲೆನಾಡಿಗೆ ಭೇಟಿ ನೀಡಿದ ಅನುಭವ ಆಗುತ್ತದೆ. ಹಿರಿಯೂರು ಅರಣ್ಯ ವಲಯವು ಮಾರಿಕಣಿವೆ ಮೀಸಲು ಅರಣ್ಯ ಹೊಂದಿದ್ದು, ಜೋಗಿಮಟ್ಟಿ– ಬುಕ್ಕಾಪಟ್ಟಣ ವನ್ಯಧಾಮಗಳ ಮಧ್ಯದಲ್ಲಿದೆ. ವಿಶೇಷವೆಂದರೆ ಭದ್ರಾಹುಲಿ ಅರಣ್ಯ ಸಂರಕ್ಷಿತ ಪ್ರದೇಶ ಹಾಗೂ ಬನ್ನೇರುಘಟ್ಟ ರಾಷ್ಟ್ರೀಯ ವನ್ಯಧಾಮದಿಂದ ಬರುವ ಆನೆ ಕಾರಿಡಾರ್ ಸಹ ಆಗಿದ್ದು, 27,334.05 ಎಕರೆ ವಿಸ್ತೀರ್ಣ ಹೊಂದಿದೆ. ಜೀವ ವೈವಿಧ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಉದ್ದೇಶದಿಂದ 1905ರಲ್ಲಿಯೇ ಇದನ್ನು ಮೀಸಲು ಅರಣ್ಯವೆಂದು ಘೋಷಿಸ ಲಾಗಿತ್ತು’ ಎಂದು ವಿವರಿಸಿದರು.

ADVERTISEMENT

‘ಈ ಪ್ರದೇಶದಲ್ಲಿ ಕೊಂಡುಕುರಿ, ಕೃಷ್ಣಮೃಗ, ಚಿರತೆ, ತೋಳ, ಕತ್ತೆ ಕಿರುಬ, ನರಿ, ಚಿಪ್ಪುಹಂದಿ, ಮುಳ್ಳುಹಂದಿ, ನಕ್ಷತ್ರ ಆಮೆ, ನೀರುನಾಯಿ, ನಾಗರಹಾವು, ದಾಸರಹಾವು ಒಳಗೊಂಡಂತೆ 19 ಪ್ರಭೇದದ ಪ್ರಾಣಿಗಳು, ಮೈನಾ, ಕೋಗಿಲೆ, ಹದ್ದು ಒಳಗೊಂಡು 35 ಜಾತಿಯ ಪಕ್ಷಿಗಳು, ಉದಯ, ದಿಂಡಲ್, ಕಮರಾ, ನೆಲ್ಲಿ, ಸೋಮೆ, ಹೊನ್ನೆ, ಬೀಟೆ, ಮತ್ತಿ, ಬೂರುಗ, ಬಿದಿರು, ಕಾಚು, ಕಕ್ಕೆ, ನೇರಳೆ, ಆಲ, ಅರಳಿ, ಬಸರಿ, ಶನೇಶ್ವರ ವೃಕ್ಷ (ಯಾರೂ ಕಡಿಯದ ಮರ), ಈಚಲು, ಬೇವು, ಮುತ್ತುಗ, ಕರಿಜಾಲಿ, ಧೂಪ ಸೇರಿದಂತೆ 120 ಜಾತಿಯ ಗಿಡ–ಮರಗಳು ಇಲ್ಲಿವೆ ಎಂಬುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಉತ್ತರೆಗುಡ್ಡ ಅರಣ್ಯ ಪ್ರದೇಶ ಸಮುದ್ರಮಟ್ಟದಿಂದ 3,677 ಅಡಿ ಎತ್ತರದಲ್ಲಿದ್ದು, (ಜೋಗಿಮಟ್ಟಿ 3,641ಅಡಿ) ವಾಣಿವಿಲಾಸ ಜಲಾಶಯ, ಉಡುವಳ್ಳಿ ಕೆರೆ, ಗುಡ್ಡದ ನೇರಳೆ ಕೆರೆ, ಕಂಚಿಪುರದಕೆರೆ, ಕಟ್ಟೆ ಹೊಳೆ (ಕತ್ತೆಹೊಳೆ)ಕೆರೆಗಳ ಅಚ್ಚು ಕಟ್ಟು ಹೊಂದಿದೆ’ ಎಂದು ತಿಳಿಸಿದರು.

ಹಿರಿಯೂರು ಮತ್ತು ಹೊಸದುರ್ಗ ತಾಲ್ಲೂಕುಗಳಿಗೆ ಸೇರಿದ ಪುರಾತನ ಧಾರ್ಮಿಕ ಸ್ಥಳಗಳಾದ ರಾಮೇಶ್ವರ ದೇವರ ವಜ್ರ, ಸಿದ್ದಪ್ಪನ ವಜ್ರ, ಗಿಳಿವಜ್ರ, ತೀರ್ಥರಾಮೇಶ್ವರ ವಜ್ರಗಳಿವೆ. ಈ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಕುದುರೆ ಕಣಿವೆ ಮೀಸಲು ಅರಣ್ಯ, ಲಕ್ಕಿಹಳ್ಳಿ ಮೀಸಲು ಅರಣ್ಯ ಹಾಗೂ ಸುವರ್ಣಮುಖಿ ಮೀಸಲು ಅರಣ್ಯಗಳಿದ್ದು, ಇವೆಲ್ಲವನ್ನು ಒಗ್ಗೂಡಿಸಿ ‘ಉತ್ತರೆಗುಡ್ಡ ವನ್ಯಜೀವಿ ಧಾಮ’ ಎಂದು ಘೋಷಿಸಿರುವ ಕಾರಣ ಅಪರೂಪದ ವನ್ಯ ಸಂಪತ್ತನ್ನು ರಕ್ಷಿಸಿದಂತೆ ಆಗಿದೆ ಎಂದು ಪೂರ್ಣಿಮಾ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.