ADVERTISEMENT

ಹಿರಿಯೂರು| ವಿವಿ ಸಾಗರ ಸುಂದರ ಪ್ರವಾಸಿ ತಾಣಕ್ಕಾಗಿ ಬದ್ಧತೆ: ಸುಧಾಕರ್

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 6:08 IST
Last Updated 13 ಅಕ್ಟೋಬರ್ 2025, 6:08 IST
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಣೆಕಟ್ಟೆಗೆ ಭೇಟಿ ನೀಡಿ ಬೆಂಬಲಿಗರೊಂದಿಗೆ ಹಿನ್ನೀರಿನಲ್ಲಿ ದೋಣಿ ವಿಹಾರದ ಸಂಭ್ರಮ ಸವಿದರು.
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಣೆಕಟ್ಟೆಗೆ ಭೇಟಿ ನೀಡಿ ಬೆಂಬಲಿಗರೊಂದಿಗೆ ಹಿನ್ನೀರಿನಲ್ಲಿ ದೋಣಿ ವಿಹಾರದ ಸಂಭ್ರಮ ಸವಿದರು.   

ಹಿರಿಯೂರು: ಮೈಸೂರಿನ ಕೃಷ್ಣರಾಜಸಾಗರದ ಬೃಂದಾವನದ ರೀತಿಯಲ್ಲಿ ವಾಣಿವಿಲಾಸ ಜಲಾಶಯ ಪ್ರದೇಶವನ್ನು ಸುಂದರ ಪ್ರವಾಸಿ ತಾಣವನ್ನಾಗಿಸುವುದು ನನ್ನ ಬದ್ಧತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.

ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಹಿನ್ನೀರಿನಲ್ಲಿ ಭಾನುವಾರ ಸಂಜೆ ಬೆಂಬಲಿಗರೊಂದಿಗೆ ದೋಣಿ ವಿಹಾರದ ಸಂಭ್ರಮ ಅನುಭವಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಚಿತ್ರದುರ್ಗದ ಕೋಟೆ ಹೊರತುಪಡಿಸಿದರೆ ವಾಣಿವಿಲಾಸಕ್ಕಿಂತ ಸುಂದರ ಪ್ರವಾಸಿ ತಾಣ ಮತ್ತೊಂದಿಲ್ಲ. ವರುಣನ ಕೃಪೆ ಹಾಗೂ ಭದ್ರಾ ಯೋಜನೆಯ ನೀರು ಬರುತ್ತಿರುವ ಕಾರಣ ಕಳೆದ ವರ್ಷ ಮತ್ತು ಈ ವರ್ಷ ಸತತವಾಗಿ ಜಲಾಶಯ ಭರ್ತಿಯಾಗುತ್ತಿದೆ. 1933 ರಿಂದ ಜಲಾಶಯ ಭರ್ತಿಯಾಗಿದ್ದನ್ನೇ ನೋಡದ ಜನರಿಗೆ ಇದು ಎಂದೂ ಭರ್ತಿಯಾಗುವುದಿಲ್ಲ ಎಂಬ ಭಾವನೆಯೇ ಇತ್ತು. ಆದರೆ ಆರು ವರ್ಷದ ಅವಧಿಯಲ್ಲಿ ಮೂರನೇ ಬಾರಿ ಕೋಡಿ ಬೀಳುವುದನ್ನು ನಾಡಿನ ಜನತೆ ಒಂದೆರಡು ದಿನಗಳಲ್ಲಿ ನೋಡಲಿದ್ದಾರೆ ಎಂದು ಅವರು ತಿಳಿಸಿದರು.

ADVERTISEMENT

ಚಿತ್ರದುರ್ಗ ನಿರ್ಮಿತಿ ಕೇಂದ್ರದಿಂದ ನಿರ್ಮಿಸಿರುವ ವಸತಿಗೃಹ ಹಾಗೂ ಉದ್ಯಾನಗಳನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿಕೊಳ್ಳಲಾಗುವುದು. ಅರಣ್ಯ ಇಲಾಖೆ ಮೂಲಕ ಪ್ರಕೃತಿ ವನವನ್ನು ಹಿಂದಿನಂತೆ ಬೆಳೆಸಲಾಗುವುದು. ಪ್ರವಾಸೋದ್ಯಮದಲ್ಲಿ ಅನುಭವ ಇರುವವರೊಂದಿಗೆ ಚರ್ಚಿಸಿ ಸೂಕ್ತ ಪ್ರವಾಸಿ ತಾಣವನ್ನಾಗಿಸುವ ಕೆಲಸಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಸುಧಾಕರ್ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ, ಮುಖಂಡ ಗರೀಬ್ ಆಲಿ ಮುನ್ನ, ನಗರಸಭೆ ಅಧ್ಯಕ್ಷ ಆರ್. ಬಾಲಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್. ನಾಗೇಂದ್ರನಾಯ್ಕ್, ಸ್ಟೀಫನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.