ಹಿರಿಯೂರು: ವರುಣನ ಕೃಪೆಯಿಂದಾಗಿ ಸಮೀಪದ ವಾಣಿವಿಲಾಸ ಜಲಾಶಯ 4ನೇ ಬಾರಿ ಕೋಡಿ ಬೀಳುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಚೆಗೆ ಜಲಾಶಯ ಕಣ್ತುಂಬಿಕೊಳ್ಳಲು ರಾಜ್ಯ, ಹೊರರಾಜ್ಯಗಳಿಂದ ಅಪಾರ ಸಂಖ್ಯೆಯ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಆದರೆ ಅವರನ್ನು ಹೊತ್ತುತರುವ ವಾಹನ ನಿಲುಗಡೆಯೇ ಸವಾಲಾಗಿ ಪರಿಣಮಿಸಿದೆ.
ಜಲಾಶಯದ ವಿಶಾಲ ಜಲರಾಶಿ, ಎರಡು ಗುಡ್ಡಗಳ ನಡುವಿನ ಅಣೆಕಟ್ಟೆ, ಪ್ರವಾಸಿ ಮಂದಿರದ ಕಡೆಯ ಬೆಟ್ಟದ ಮೇಲಿಂದ ಕೆಳಗಿಳಿಯುವ ಸುಂದರ ಪ್ರದೇಶ ಪ್ರವಾಸಿಗರ ಮನಸೂರೆಗೊಳ್ಳುತ್ತಿದೆ. ಹಲವು ದಶಕಗಳವರೆಗೂ ಇಂಥದ್ದೊಂದು ಜಲಾಶಯ ಇದೆ ಎಂಬುದೇ ಹೊರಗಿನ ಜನರಿಗೆ ಗೊತ್ತಿರಲಿಲ್ಲ. ಮಾರಿ ಕಣಿವೆ ಎಂದು ಸ್ಥಳೀಯರಿಗಷ್ಟೇ ತಿಳಿದಿತ್ತು.
ಆದರೆ, ಈಚೆಗೆ ಜಲಾಶಯ ಭರ್ತಿಯಾಗುತ್ತಿರುವ ಕಾರಣ ಜಲಲ ಜಲರಾಶಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಸ್ಥಳಕ್ಕೆ ಬಂದ ಪ್ರವಾಸಿಗರು, ಯುಟ್ಯೂಬರ್‌ಗಳು ಜಲಾಶಯದ ಸುಂದರ ದೃಶ್ಯಗಳನ್ನು ಸೆರೆ ಹಿಡಿದು ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿರುವ ಕಾರಣ ಪ್ರವಾಸಿಗರು ವಿವಿ ಸಾಗರ ಜಲಾಶಯದತ್ತ ಲಗ್ಗೆ ಇಡುವಂತೆ ಮಾಡಿದೆ.
ರಾಜ್ಯದ ಮೂಲೆಮೂಲೆಯಿಂದ ಪ್ರವಾಸಿಗರು ಈಗ ವಿವಿ ಸಾಗರದತ್ತ ಬರುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಗೆ ಸಮೀಪವೇ ಇರುವ ಕಾರಣ ಹೊರರಾಜ್ಯಗಳ ಜನರೂ ಜಲಾಶಯದತ್ತ ಬರುತ್ತಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಭಾಗದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹೀಗಾಗಿ ಜಲಾಶಯದ ತಟದ ಕಣಿವೆ ಮಾರಮ್ಮ ದೇವಾಲಯದ ಮುಂದಿನ ಜಾಗ ವಾಹನ ನಿಲುಗಡೆಗೆ ಸಾಕಾಗುತ್ತಿಲ್ಲ.
ವಾಣಿವಿಲಾಸಪುರ ಗ್ರಾಮದಿಂದ ಅಣೆಕಟ್ಟೆಗೆ ಹೋಗುವ ಹಾದಿಯಲ್ಲಿನ ಹಳೆಯ ಸೇತುವೆ ಬಿದ್ದು ಹೋಗಿದ್ದು, ಹೊಸಸೇತುವೆ ತುಂಬಾ ಕಿರಿದಾಗಿದೆ. ಕೋಡಿಯ ಸ್ಥಳದಲ್ಲಿ ಶಾಶ್ವತ ಸೇತುವೆ ನಿರ್ಮಿಸದ ಕಾರಣಕ್ಕೆ ವಾಹನಗಳನ್ನು ನಿಲುಗಡೆ ಮಾಡಲು ಜಾಗವೇ ಇಲ್ಲವಾಗಿದೆ. 2022ರಲ್ಲಿ ಕೋಡಿ ಬಿದ್ದ ಕೇವಲ 9 ದಿನಗಳಲ್ಲಿ ವಾರಾಂತ್ಯದ ದಿನಗಳೂ ಸೇರಿ 90,000ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದರು. ಈಗ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಊಟ–ವಸತಿ ಸೌಲಭ್ಯ ಸಾಲದು:
ವಿವಿ ಸಾಗರ ಜಲಾಶಯಕ್ಕೆ ಬರುವ ಪ್ರವಾಸಿಗರಿಗೆ ಊಟ– ವಸತಿ ಸಮಸ್ಯೆಯೂ ಕಾಡುತ್ತಿದೆ. ವಿಶ್ವೇಶ್ವರಯ್ಯ ನೀರಾವರಿ ನಿಗಮಕ್ಕೆ ಸೇರಿದ ಎರಡು ಪ್ರವಾಸಿ ಮಂದಿರಗಳಿದ್ದು, ಆರೇಳು ಕೊಠಡಿಗಳು ಮಾತ್ರ ಇವೆ. ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಿರುವ ವಸತಿ ಗೃಹಗಳನ್ನು ಇನ್ನೂ ನಿರ್ಮಿತಿ ಕೇಂದ್ರದವರು ಹಸ್ತಾಂತರಿಸದ ಕಾರಣಕ್ಕೆ ಏಳೆಂಟು ವರ್ಷಗಳಿಂದ ಅವೆಲ್ಲ ಇದ್ದೂ ಇಲ್ಲದಂತಾಗಿವೆ. ಖಾಸಗಿಯವರಿಗೆ ಸೇರಿದ ಒಂದೇ ಒಂದು ವಸತಿ ಗೃಹವಿದ್ದು, ಏಳೆಂಟು ಕೊಠಡಿಗಳು ಮಾತ್ರ ಅಲ್ಲಿವೆ.
‘ಊಟ– ಉಪಾಹಾರಕ್ಕೆ ವಿವಿಪುರ ವೃತ್ತದಲ್ಲಿರುವ ಐದಾರು ಸಣ್ಣ ಹೋಟೆಲ್ ಆಧಾರ. ಒಮ್ಮೆಗೆ 50– 100 ಪ್ರವಾಸಿಗರು ಕುಳಿತುಕೊಳ್ಳುವಂತಹ ಹೋಟೆಲ್ ಇದ್ದರೆ ಒಳ್ಳೆಯದು. ಆದರೆ, ವಾರಾಂತ್ಯಕ್ಕೆ, ವರ್ಷಾಂತ್ಯಕ್ಕೆ ಅಥವಾ ವಿಶೇಷ ಸಂದರ್ಭಗಳಲ್ಲಿ ಪ್ರವಾಸಿಗರು ಬರುವುದರಿಂದ ಅಷ್ಟು ದೊಡ್ಡ ಹೋಟೆಲ್ ನಿರ್ವಹಣೆ ಕಷ್ಟ. ಸರ್ಕಾರವೇ ಭೋಜನಕ್ಕೆ ವ್ಯವಸ್ಥೆ ಮಾಡುವ ಅಗತ್ಯವಿದೆ’ ಎಂದು ಸ್ಥಳೀಯರು ಹೇಳುತ್ತಾರೆ.
ನಗರದಿಂದ 18 ಕಿ.ಮೀ. ದೂರದಲ್ಲಿರುವ ಜಲಾಶಯವನ್ನು ವೇದಾವತಿ ನದಿಗೆ ಅಡ್ಡಲಾಗಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಾಯಿ ಕೆಂಪನಂಜಮ್ಮಣ್ಣಿ ಅವರ ಹೆಸರಿನಲ್ಲಿ ನಿರ್ಮಿಸಿದ್ದರು. 1897ರಲ್ಲಿ ಕಾಮಗಾರಿ ಆರಂಭಿಸಿ ಕೇವಲ 10 ವರ್ಷಗಳಲ್ಲಿ ಪೂರ್ಣಗೊಳಿಸಿದ್ದರು. 1,330 ಅಡಿ ಉದ್ದ, 150 ಅಡಿ ಅಗಲ, 142 ಅಡಿ ಎತ್ತರದ ಅಣೆಕಟ್ಟೆ 1907ರಲ್ಲಿ ಪೂರ್ಣಗೊಂಡಿತು.
ಜಲಾಶಯದ ಒಟ್ಟು ಅಚ್ಚುಕಟ್ಟು ಪ್ರದೇಶ 29,985 ಎಕರೆ. ಯೋಜನೆಯ ಅಂದಾಜು ವೆಚ್ಚ ₹ 45 ಲಕ್ಷ ಮಾತ್ರ. ಜಲಾಶಯ ನಿರ್ಮಾಣ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಲು 1901ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾರಿಕಣಿವೆಗೆ ಭೇಟಿ ನೀಡಿದ್ದರು.
ಆರನಕಣಿವೆ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಹಿರಿಯೂರು ಕಡೆಯಿಂದ ಬರುವವರು ಭರಮಗಿರಿ ಗ್ರಾಮದ ಸಮೀಪದಲ್ಲಿ ಹೊಸದುರ್ಗ ಬೈಪಾಸ್ ರಸ್ತೆ ಮೂಲಕ ಬರಬೇಕಾಗುತ್ತದೆವಿಜಯಕುಮಾರ್ ಎಇಇ ವಿಶ್ವೇಶ್ವರಯ್ಯ ನೀರಾವರಿ ನಿಗಮ
129.10 ಅಡಿಗೆ ನೀರಿನ ಮಟ್ಟ
ಅಕ್ಟೋಬರ್ 10ರಂದು ಬೆಳಿಗ್ಗೆ ಜಲಾಶಯದ ನೀರಿನ ಮಟ್ಟ 129.10 ಅಡಿಗೆ (ಪೂರ್ಣಮಟ್ಟ 130 ಅಡಿ) ತಲುಪಿದ್ದು 2917 ಕ್ಯುಸೆಕ್ ಒಳಹರಿವು ಇತ್ತು. ಇದೇ ಪ್ರಮಾಣದಲ್ಲಿ ಒಳಹರಿವು ಮುಂದುವರಿದಲ್ಲಿ 10– 12 ದಿನಗಳಲ್ಲಿ ಜಲಾಶಯ ಭರ್ತಿಯಾಗಲಿದೆ. 1933ರ ಸೆ. 2ರಂದು ಪ್ರಥಮ ಬಾರಿಗೆ ಜಲಾಶಯ ಕೋಡಿ ಬಿದ್ದಿತ್ತು. 89 ವರ್ಷಗಳ ನಂತರ 2022ರ ಸೆ. 2ರಂದು 2ನೇ ಬಾರಿಗೆ ಕೋಡಿ ಬಿದ್ದಿತ್ತು. 2024 ಜ. 12ರಂದು 3ನೇ ಬಾರಿಗೆ ಕೋಡಿಬಿದ್ದಿತ್ತು. ವಿಶೇಷವೆಂದರೆ 1933 ಹಾಗೂ 2022ರಲ್ಲಿ ಜಲಾಶಯ ತನ್ನ ಗರಿಷ್ಠ ಮಟ್ಟ 135 ಅಡಿ ತಲುಪಿದ್ದರಿಂದ ಕೋಡಿಯಲ್ಲಿ ಅಪಾರ ಪ್ರಮಾಣದ ನೀರು ಹರಿದು ವೇದಾವತಿ ನದಿ ಸೇರಿತ್ತು. ಕೋಡಿಯಲ್ಲಿ ನೀರು ನರ್ತಿಸುತ್ತ ಸಾಗುವ ದೃಶ್ಯ ಮನಮೋಹಕವಾಗಿತ್ತು.
- ನದಿ ಪಾತ್ರದ ಜನರಿಗೆ ಎಚ್ಚರಿಕೆ
ಜಲಾಶಯದ ಮೇಲ್ಭಾಗದಲ್ಲಿ 2– 3 ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜಲಾಶಯ ಯಾವ ಕ್ಷಣದಲ್ಲಾದರೂ ಕೋಡಿ ಬೀಳುವ ಸಂಭವವಿದೆ. ವೇದಾವತಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಗಳಲ್ಲಿ ಇರಬೇಕು ಎಂದು ತಹಶೀಲ್ದಾರ್ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಪೊಲೀಸ್ ಇಲಾಖೆ ಸೂಚಿಸಿವೆ. ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಿದೆ. ಇದೇ ಪ್ರಮಾಣದಲ್ಲಿ ನೀರಿನ ಹರಿವು ಮುಂದುವರಿದಲ್ಲಿ ಜಲಾಶಯ ಯಾವ ಕ್ಷಣದಲ್ಲಾದರೂ ಕೋಡಿ ಬೀಳುವ ಸಾಧ್ಯತೆ ಇದೆ. ಇನ್ನೂ ನಾಲ್ಕೈದು ದಿನ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿದೆ. ಕೋಡಿಯ ನೀರು ವೇದಾವತಿ ನದಿಯ ಮೂಲಕ ಹರಿದು ಬರಲಿದೆ. ಹೀಗಾಗಿ ನದಿ ಪಾತ್ರದಲ್ಲಿ ನೆಲೆಸಿರುವವರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ನದಿಗಿಳಿದು ಈಜುವುದು ಬಟ್ಟೆ ಅಥವಾ ಜಾನುವಾರು ತೊಳೆಯುವುದನ್ನು ಮಾಡಬಾರದು ಎಂದು ಎಚ್ಚರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.