ADVERTISEMENT

ವಾಣಿವಿಲಾಸ ಜಲಾಶಯ: 3 ವರ್ಷದಲ್ಲಿ 3ನೇ ಬಾರಿ ಕೋಡಿ; ರೈತರಲ್ಲಿ ಮನೆಮಾಡಿದ ಸಂಭ್ರಮ

ಸುವರ್ಣಾ ಬಸವರಾಜ್
Published 20 ಅಕ್ಟೋಬರ್ 2025, 6:32 IST
Last Updated 20 ಅಕ್ಟೋಬರ್ 2025, 6:32 IST
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯ ಕೋಡಿಯಲ್ಲಿ ಭಾನುವಾರ ಬೆಳಿಗ್ಗೆ ನೀರು ಹರಿಯುತ್ತಿರುವುದು
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯ ಕೋಡಿಯಲ್ಲಿ ಭಾನುವಾರ ಬೆಳಿಗ್ಗೆ ನೀರು ಹರಿಯುತ್ತಿರುವುದು   

ಹಿರಿಯೂರು: ಭಾನುವಾರ ಬೆಳಿಗ್ಗೆ ಇಲ್ಲಿನ ವಾಣಿವಿಲಾಸ ಜಲಾಶಯದ ಕೋಡಿ ಬಿದ್ದಿದ್ದು, ಸಾರ್ವಜನಿಕರು ಸಂಭ್ರಮಿಸುತ್ತಿದ್ದಾರೆ. 

1907ರಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ವಾಣಿವಿಲಾಸ ಜಲಾಶಯ 1933ರಲ್ಲಿ ಪ್ರಥಮ ಬಾರಿಗೆ ಕೋಡಿ ಬಿದ್ದಿತ್ತು. ತದನಂತರ 2022ರ ವರೆಗೆ (89 ವರ್ಷ) ಅಣೆಕಟ್ಟೆಗೆ ನೀರು ಹರಿದು ಬಂದಿದ್ದಕ್ಕಿಂತ ಖಾಲಿಯಾಗಿದ್ದೇ ಹೆಚ್ಚು. 2022ರ ಸೆ. 2 ರಂದು ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿದ್ದು, ಭದ್ರಾ ಜಲಾಶಯದ ನೀರು ಹರಿದು ಬಂದ ಪರಿಣಾಮ 2ನೇ ಬಾರಿ ಭರ್ತಿಯಾಗಿತ್ತು. 2025ರ ಜ. 12 ರಂದು 3ನೇ ಬಾರಿ ಕೋಡಿಯಲ್ಲಿ ನೀರು ಹರಿದಿತ್ತು. ವರ್ಷ ತುಂಬುವುದರ ಒಳಗೆ ಇದೀಗ ಮತ್ತೊಮ್ಮೆ ಕೋಡಿ ಬಿದ್ದಿರುವುದು ರೈತರಲ್ಲಿ ಸಂತಸವನ್ನು ಹೆಚ್ಚಿಸಿದೆ. 

ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಉತ್ತಮ ಮಳೆಯಾಗಿರುವ ಕಾರಣ ಒಳಹರಿವಿನ ಪ್ರಮಾಣ ಭಾನುವಾರ 1945 ಕ್ಯುಸೆಕ್‌ಗೆ ಹೆಚ್ಚಿತ್ತು. ಸಂಜೆ ವೇಳೆಗೆ ಕೋಡಿಯ ಮೇಲ್ಭಾಗದಲ್ಲಿ ಹರಿಯುವ ನೀರಿನ ಪ್ರಮಾಣ ಹೆಚ್ಚಲಿದೆ ಎಂದು ವಿಶ್ವೇಶ್ವರಯ್ಯ ನೀರಾವರಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ADVERTISEMENT

2017 ರಲ್ಲಿ ಮಳೆಯ ಕೊರತೆಯ ಕಾರಣಕ್ಕೆ ವಾಣಿವಿಲಾಸ ಜಲಾಶಯ ಪ್ರಥಮ ಬಾರಿಗೆ ಡೆಡ್ ಸ್ಟೋರೇಜ್ (60 ಅಡಿ) ತಲುಪಿತ್ತು. ಜಿಲ್ಲೆಯ ಅಂತರ್ಜಲಕ್ಕೆ ಏಕ ಮಾತ್ರ ಆಸರೆ ಎಂದೇ ಗುರುತಿಸಲ್ಪಟ್ಟಿದ್ದ ಜಲಾಶಯ ಡೆಡ್ ಸ್ಟೋರೇಜ್ ತಲುಪಿದ್ದರಿಂದ ಒಂದೆಡೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾದರೆ, ಮತ್ತೊಂದೆಡೆ ಅಚ್ಚುಕಟ್ಟು ಪ್ರದೇಶದ ಸಾವಿರಾರು ಎಕರೆ ತೆಂಗು, ಅಡಿಕೆ ತೋಟಗಳು ಕಣ್ಮರೆಯಾಗಿ, ನೂರಾರು ಕುಟುಂಬಗಳು ಊರು ತೊರೆದು ಬದುಕು ಅರಸಿ ದೊಡ್ಡ ದೊಡ್ಡ ನಗರಗಳಿಗೆ ವಲಸೆ ಹೋಗಿದ್ದವು. 

ಸ್ಥಳೀಯ ರೈತರ ಹೋರಾಟಕ್ಕೆ ಸ್ಪಂದಿಸಿದ ಅಂದಿನ ಸರ್ಕಾರ 2019 ರಿಂದ ಭದ್ರಾ ಜಲಾಶಯದ ನೀರನ್ನು ತಾತ್ಕಾಲಿಕವಾಗಿ ಪಂಪ್ ಮಾಡುವ ಮೂಲಕ ವಾಣಿವಿಲಾಸಕ್ಕೆ ಹರಿಸಲು ಆರಂಭಿಸಿತು. ಭದ್ರಾ ನೀರಿನ ಜೊತೆಗೆ ವರುಣನ ಕೃಪೆಯೂ ಸೇರಿ ಜಲಾಶಯದ ನೀರಿನ ಮಟ್ಟ 60 ಅಡಿಯಿಂದ 102.15 ಅಡಿಗೆ ಹೆಚ್ಚಿತ್ತು. 2020ರಲ್ಲಿ ನೀರಿನಮಟ್ಟ 106 ಅಡಿಗೆ, 2021 ರಲ್ಲಿ 125.15 ಅಡಿಗೆ ಹೆಚ್ಚಿ, 2022ರ ಸೆ.2 ರಂದು ಕೋಡಿ ಹರಿದಿತ್ತು.

ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯ ಕೋಡಿಯಲ್ಲಿ ಭಾನುವಾರ ಬೆಳಿಗ್ಗೆ ನೀರು ಹರಿಯುತ್ತಿರುವುದು

ಹೆಚ್ಚಿದ ಅಡಿಕೆ–ತೆಂಗು ಬೆಳೆ ಪ್ರದೇಶ 

ಜಲಾಶಯ ಬರಿದಾಗಿ ಅಂತರ್ಜಲ ಕುಸಿತದ ಕಾರಣಕ್ಕೆ ಸಾವಿರಾರು ಎಕರೆಯಲ್ಲಿದ್ದ ತೋಟಗಳನ್ನು ಕಳೆದುಕೊಂಡು ವಲಸೆ ಹೋಗಿದ್ದ ಬಹುತೇಕ ರೈತರು ಜಲಾಶಯ 2ನೇ ಬಾರಿಗೆ ಭರ್ತಿಯಾದ ನಂತರ ಸ್ವಗ್ರಾಮಗಳಿಗೆ ಮರಳಿ ಮತ್ತೆ ಅಡಿಕೆ ತೆಂಗು ನಾಟಿ ಮಾಡಿದ್ದು ಹೊಸ ತೋಟಗಳು ಒಂದೆರಡು ವರ್ಷದಲ್ಲಿ ಫಸಲು ಕೊಡುವ ಹಂತದಲ್ಲಿವೆ. ಈಗ ನಾಲ್ಕನೇ ಬಾರಿ ಕೋಡಿ ಹರಿದಿರುವ ಕಾರಣದಿಂದ ತೋಟದ ಬೆಳೆಗಾರರು ನಿರಾಳ ಭಾವ ತಾಳುವಂತಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.