ಹಿರಿಯೂರು: ತಾಲ್ಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ಏಪ್ರಿಲ್ 10ರಿಂದ 16ರವರೆಗೆ ನಡೆಯಲಿದೆ.
ಏ.10ರಂದು ಗಂಗಾ ಪೂಜೆ, ರುದ್ರಾಭಿಷೇಕ ಮತ್ತು ಕಂಕಣ ಧಾರಣೆ ನಡೆಯಲಿದೆ. ಏ.11ರಂದು ಧ್ವಜಾರೋಹಣ ಮತ್ತು ಪಲ್ಲಕ್ಕಿ ಉತ್ಸವ, ಏ. 12ರಂದು ಅಗ್ನಿಗೊಂಡ, ಬೆಳ್ಳಿ ಕವಚಧಾರಣೆ, ಏ.13ರಂದು ಹೂವಿನ ತೇರು ಜರುಗಲಿದೆ. ಏ. 14ರಂದು ದೊಡ್ಡ ರಥೋತ್ಸವ, ಏ.15ರಂದು ವಸಂತೋತ್ಸವ ಮತ್ತು ಆಂದೋಳನೋತ್ಸವ, ಏ.16ರಂದು ಓಕಳಿ ಹಾಗೂ ಕಂಕಣ ವಿಸರ್ಜನೆ ನಡೆಯಲಿದೆ.
101 ದೇವಸ್ಥಾನಗಳಿರುವ ಗ್ರಾಮ:
101 ದೇವಸ್ಥಾನಗಳಿರುವ ಹರ್ತಿಕೋಟೆ ಇದೇ ಕಾರಣಕ್ಕೆ ಇತಿಹಾಸದಲ್ಲಿ ವಿಶೇಷ ಸ್ಥಾನ ಗಳಿಸಿದೆ. ಈ ಊರಲ್ಲಿ ಯಾವ ದಿಕ್ಕಿನಲ್ಲಿ ನಿಂತು ನೋಡಿದರೂ ದೇವಸ್ಥಾನಗಳು ತಲೆಯೆತ್ತಿ ನಿಂತಿರುವುದು ಕಣ್ಣಿಗೆ ಬೀಳುತ್ತದೆ. ಊರಿನಲ್ಲಿ ಬ್ರಿಟಿಷರ ಕಾಲದ ಹಲವು ಮಾದರಿಯ ಮನೆಗಳು ಇಂದಿಗೂ ಉಳಿದಿವೆ.
ವೀರಭದ್ರ ಸ್ವಾಮಿ ಜಾತ್ರಾ ಮಹೋತ್ಸವ ಸುಮಾರು 111 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ನಡೆಯುವ ಉತ್ಸವದಲ್ಲಿ ದನಗಳ ಜಾತ್ರೆ ಹೆಚ್ಚು ಆಕರ್ಷಣೀಯ. ಮುಂಗಾರು ಮಳೆ ಆರಂಭವಾಗುವ ಸಮಯದಲ್ಲಿ ದನಗಳ ಜಾತ್ರೆ ನಡೆಯುವ ಕಾರಣ ರಾಜ್ಯದ ಬೇರೆ ಬೇರೆ ಭಾಗಗಳಿಂದ ರಾಸುಗಳ ಖರೀದಿಗೆ ರೈತರು ಬರುತ್ತಾರೆ. ಉತ್ತಮ ರಾಸುಗಳಿಗೆ ಬಹುಮಾನ ನೀಡುವ ಸಂಪ್ರದಾಯವಿದೆ.
ವೀರಭದ್ರಸ್ವಾಮಿ ದೇವಾಲಯವು ತುಂಬಾ ವಿಶಾಲವಾಗಿದ್ದು, ದೇಗುಲದ ಮರು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ವೀರಭದ್ರನ ಶಿಲಾಮೂರ್ತಿ ಮನಮೋಹಕವಾಗಿದ್ದು, ಗುಡಿಯಲ್ಲಿರುವ ಗಂಟೆಗಳು ಬಹುಪಾಲು ಶಾಸನೋಕ್ತವಾಗಿವೆ. ಗುಡಿಯಲ್ಲಿರುವ ಗಂಟೆಯೊಂದರ ಮೇಲೆ ದಾನಿಗಳ ಪೂರ್ಣ ವಿಳಾಸವಿದೆ ಮತ್ತು ಬರಹವಿದೆ. ದೊಡ್ಡ ರಥೋತ್ಸವದಂದು ರಥಕ್ಕೆ ಸುಂದರವಾಗಿ ಅಲಂಕರಿಸಿ ಹರ್ತಿಕೋಟೆ ಸುತ್ತಲಿನ ಗ್ರಾಮಗಳ ಭಕ್ತರು ಕೊಬ್ಬರಿ ಆರತಿ ಮಾಡಿ ರಥವನ್ನು ಎಳೆಯುತ್ತಾರೆ. ಜಾತ್ರೆಗೆ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
ಉತ್ಸವದಲ್ಲಿ ನಡೆಯುವ ಅಗ್ನಿಗುಂಡವನ್ನು ದುಗ್ಗಲವೆಂದು ಕರೆಯುತ್ತಾರೆ. ತುಗ್ಗಲಿ ಮರವನ್ನು ತಂದು ದೇವಸ್ಥಾನದ ಮುಂಭಾಗದಲ್ಲಿ ಕತ್ತರಿಸಿ ಅದಕ್ಕೆ ದೊಡ್ಡ ಗುಂಡಿಯನ್ನು ತೋಡಿ ಕಟ್ಟಿಗೆ ತುಂಬಿ ಇಡೀ ರಾತ್ರಿ ಬೆಂಕಿ ಉರಿಸಿ ಕೆಂಡ ಮಾಡುತ್ತಾರೆ. ಬೆಳಗಿನ ಜಾವ 4ರಿಂದ 5ಕ್ಕೆ ಸಮಯದಲ್ಲಿ ಕೆಂಡಕ್ಕೆ ಧೂಪ ಹಾಕಿ ಇದರ ಸುತ್ತಲೂ ದೇವರನ್ನು, ದೇವರ ಪಲ್ಲಕ್ಕಿಯನ್ನು ಪ್ರದರ್ಶಿಸಿ ಅನಂತರ ಭಕ್ತರು ಕೆಂಡ ಹಾಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.