ADVERTISEMENT

ಪರಶುರಾಂಪುರ: ವೀರಾಂಜನೇಯ ಸ್ವಾಮಿ ಜಾತ್ರೆ ಇಂದಿನಿಂದ

ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡುಗಳಿಂದಲೂ ಜನರು ಭಾಗಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 5:06 IST
Last Updated 25 ಫೆಬ್ರುವರಿ 2023, 5:06 IST
ಪರಶುರಾಂಪುರ ಸಮೀಪದ ಮಲನೂರು ವಡ್ಡೆಪಾಳ್ಯಂನ ಗುಡಿಬಂಡೆ ವೀರಾಂಜನೇಯ ಸ್ವಾಮಿ ದೇವಸ್ಥಾನ.
ಪರಶುರಾಂಪುರ ಸಮೀಪದ ಮಲನೂರು ವಡ್ಡೆಪಾಳ್ಯಂನ ಗುಡಿಬಂಡೆ ವೀರಾಂಜನೇಯ ಸ್ವಾಮಿ ದೇವಸ್ಥಾನ.   

ಪರಶುರಾಂಪುರ: ಹೋಬಳಿ ಸಮೀಪದ ಮಲನೂರು ವಡ್ಡೆಪಾಳ್ಯಂನ ಗುಡಿಬಂಡೆ ವೀರಾಂಜನೇಯ ಸ್ವಾಮಿಯ ಜಾತ್ರಾ ಮಹತ್ಸೋವ ಶನಿವಾರದಿಂದ ಆರಂಭವಾಗಲಿದ್ದು ದೇವಸ್ಥಾನ ಸಮಿತಿಯವರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಫೆ. 25ರಂದು ಪರಶುರಾಂಪುರ ಬಳಿಯ ವೇದಾವತಿ ನದಿಯಲ್ಲಿ ಗಂಗಾ ಪೂಜೆ ಮತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ, ಫೆ. 26ರಂದು ವೀರಾಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ, ಫೆ 27ರಂದು ಎತ್ತಿನ ಓಟದ ಸ್ಪರ್ಧೆ, ಫೆ. 28ರಂದು ಮಹಾಮಂಗಳಾರತಿಯೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದೆ. ಜಾತ್ರೆಗೆ ಮೊದಲು ವೇದಾವತಿ ನದಿಯಲ್ಲಿ ಗಂಗಾ ಪೂಜೆ ಮಾಡುವುದು ವಾಡಿಕೆ ಎನ್ನುತ್ತಾರೆ ಗ್ರಾಮದ ಹಿರಿಯರು.

2ನೇ ವರ್ಷದ ಬ್ರಹ್ಮ ರಥೋತ್ಸವ: ಕಳೆದ ಸಲ ನೂತನ ರಥ ನಿರ್ಮಾಣ ಮಾಡಿ ರಥೋತ್ಸವ ನೆರವೇರಿಸಲಾಗಿತ್ತು. ಈ ಸಲ ಭಾನುವಾರ ರಥೋತ್ಸವ ನಡೆಯುತ್ತಿದ್ದು, ಶಾಸಕ ರಘುಮೂರ್ತಿ ಅವರು ಹೆಲಿಕಾಪ್ಟರ್‌ ಮೂಲಕ ರಥೋತ್ಸವಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ.

ADVERTISEMENT

ವೀರಾಂಜನೇಯ ಸ್ವಾಮಿ ಭೋವಿ ಜನಾಂಗದ ಆರಾಧ್ಯ ದೈವವಾಗಿದ್ದು ವೀರಾಂಜನೇಯ, ಗುಡಿಬಂಡಪ್ಪ, ಆಂಜನೇಯ, ರಾಮಂಜನೇಯ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಯಾವುದೇ ಹೊಸ ಕೆಲಸ ಮಾಡುವ ಮುನ್ನ ದೇವರ ಅಪ್ಪಣೆ ಪಡೆದು ಮುಂದುವರಿಯುವುದು ಜಾರಿಯಲ್ಲಿದೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡುಗಳಿಂದಲೂ ಜನರು ಜಾತ್ರೆಗೆ ಬರುತ್ತಾರೆ.

ಗ್ರಾಮ ಪಂಚಾಯಿತಿ ಸದಸ್ಯೆ ಸವಿತಾ ಮತ್ತು ಗುತ್ತಿಗೆದಾರ ರಾಮಂಜನೇಯ ಅವರು ಸತತ 4 ವರ್ಷಗಳಿಂದ ವೇದಾವತಿ ನದಿ ದಡದಲ್ಲಿ ಜಾತ್ರೆಗೆ ಬರುವ ಭಕ್ತರಿಗೆ ಉಚಿತವಾಗಿ ಊಟದ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.