ADVERTISEMENT

ವಿಜಯದಶಮಿ ಮೂಲಕ ನವರಾತ್ರಿಗೆ ತೆರೆ

ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿದ ಭಕ್ತರು; ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 6:01 IST
Last Updated 3 ಅಕ್ಟೋಬರ್ 2025, 6:01 IST
ಚಿತ್ರದುರ್ಗದ ಕಣಿವೆ ಮಾರಮ್ಮ ದೇವಸ್ಥಾನದಲ್ಲಿ ಭಕ್ತರಿಗೆ ಬನ್ನಿ ವಿತರಿಸಲಾಯಿತು
ಚಿತ್ರದುರ್ಗದ ಕಣಿವೆ ಮಾರಮ್ಮ ದೇವಸ್ಥಾನದಲ್ಲಿ ಭಕ್ತರಿಗೆ ಬನ್ನಿ ವಿತರಿಸಲಾಯಿತು   

ಚಿತ್ರದುರ್ಗ: ನಾಡಹಬ್ಬ ದಸರಾ ಮಹೋತ್ಸವದ ನವರಾತ್ರಿ ಸಂಭ್ರಮಕ್ಕೆ ಗುರುವಾರ ವಿಜಯ ದಶಮಿ ಮೂಲಕ ವೈಭವದ ತೆರೆ ಬಿದ್ದಿತು. ಸಂಪ್ರದಾಯದಂತೆ ಭಕ್ತರು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿಯುವ ಮೂಲಕ ದೇವಿ ಕೃಪೆಗೆ ಪಾತ್ರರಾದರು.

ದಸರಾ ದಿನಗಳಲ್ಲಿ ಶಕ್ತಿ ದೇವತೆಗಳಿಗೆ ಪೂಜೆ ಸಲ್ಲಿಸುವ ಭಕ್ತರಿಗೆ ಆಯುಧ ಪೂಜೆ, ವಿಜಯದಶಮಿ ಮಹತ್ವದ್ದಾಗಿವೆ. ಬುಧವಾರ ವಾಹನಗಳು, ಯಂತ್ರೋಪಕರಣ ಹಾಗೂ ಎಲೆಕ್ಟ್ರಿಕಲ್‌ ವಸ್ತುಗಳನ್ನು ಹೂವುಗಳಿಂದ ಅಲಂಕರಿಸಿ ಆಯುಧ ಪೂಜೆ ನೆರವೇರಿಸಿದರು.

ನಗರದ ಮದಕರಿ ನಾಯಕನ ವೃತ್ತದಲ್ಲಿ ವಾಹನಗಳ ಅಲಂಕಾರಕ್ಕಾಗೇ ಸಾಲು ಸಾಲು ಅಂಗಡಿಗಳನ್ನು ತೆರೆಯಲಾಗಿತ್ತು. ಇದರಿಂದಾಗಿ ಕಾರು, ಬೈಕ್‌, ಬಸ್‌, ಲಾರಿಗಳು ವಿಶೇಷ ಹೂವಿನ ಅಲಂಕಾರದಲ್ಲಿ ಕಂಗೊಳಿಸಿದವು. ಆಯುಧ ಪೂಜೆಯನ್ನು ಶಾಸ್ತ್ರೋಕ್ತವಾಗಿ ಪೂರ್ಣಗೊಳಿಸಿದ ಭಕ್ತರು ಗುರುವಾರದ ವಿಜಯದಶಮಿಗೆ ಸಿದ್ಧತೆ ನಡೆಸಿದ್ದರು. ಸೂರ್ಯ ಉದಯಿಸುವ ಮುನ್ನವೇ ಮಹಿಳೆಯರು ಮನೆಗಳಲ್ಲಿ ಪೂಜಾ ಕೈಂಕರ್ಯ ಪೂರ್ಣಗೊಳಿಸಿ ಕುಟುಂಬ ಸಮೇತ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿದರು.

ADVERTISEMENT

ಹಳೆ ಚಿತ್ರದುರ್ಗ ಭಾಗದವರು ಮೇಲುದುರ್ಗದ ಶಮಿ ವೃಕ್ಷಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಉಳಿದಂತೆ ಜೋಗಿಮಟ್ಟಿ ರಸ್ತೆ, ಸಂತೆಹೊಂಡದ ಮಾರಮ್ಮ ದೇವಿ ಬಡಾವಣೆಗಳಲ್ಲಿ ನಿರ್ಮಿಸಿದ ಬನ್ನಿ ಕಟ್ಟೆಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಮನೆಗಳಲ್ಲಿ ಗುರು–ಹಿರಿಯರಿಗೆ ಬನ್ನಿ ಹಂಚುವ ಮೂಲಕ ವಿಜಯದಶಮಿ ಹಬ್ಬದ ಶುಭಾಶಯ ಕೋರುವ ದೃಶ್ಯ ಸಾಮಾನ್ಯವಾಗಿತ್ತು. ಕಿರಿಯರು ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಮೇಲುದುರ್ಗದ ಏಕನಾಥೇಶ್ವರಿ, ಕೋಟೆ ರಸ್ತೆಯ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮಿ, ಅಂಬಾಭವಾನಿ, ಹೊಳಲ್ಕೆರೆ ರಸ್ತೆಯ ಬರಗೇರಮ್ಮ, ಗೌರಸಂದ್ರ ಮಾರಮ್ಮ, ಕುಂಚಿಗನಾಳ್‌ ಬಳಿಯ ಕಣಿವೆ ಮಾರಮ್ಮ, ನಗರವಾಸಿ ಕಣಿವೆ ಮಾರಮ್ಮ, ಬುರುಜನಹಟ್ಟಿಯ ಮಲೆನಾಡ ಚೌಡೇಶ್ವರಿ, ಬನಶಂಕರಿ, ಹಟ್ಟಿ ಮಾರಮ್ಮ, ಸಂತೆ ಹೊಂಡ ಬಳಿಯ ಬನ್ನಿ ಮಹಾಕಾಳಿ, ಕಾಮನಬಾವಿ ಬಡಾವಣೆಯ ಕಾಳಿಕಾ ಮಠೇಶ್ವರಿ ಹೀಗೆ ದೇವಿಯರ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರದೊಂದಿಗೆ ಪೂಜೆ ನಡೆಸಲಾಯಿತು.

ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನದ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ನಗರದ ಸಂತೆ ಹೊಂಡದ ಬಳಿಯ ಬನ್ನಿ ಮಹಾಕಾಳಿ ದೇವಸ್ಥಾನದ ಮುಂಭಾಗ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿಯ ಕೆಂಡಾರ್ಚನೆ ನೆರವೇರಿತು.

ಚಿತ್ರದುರ್ಗದ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದ ಆವರಣದಲ್ಲಿ ವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ವೈಭವದಿಂದ ನಡೆಯಿತು
ಅಂಬಾರಿ ಅಲಂಕಾರದಲ್ಲಿ ಬರಗೇರಮ್ಮ ದೇವಿ 
ಹೂವಿನ ಅಲಂಕಾರದಲ್ಲಿ ಏಕನಾಥೇಶ್ವರಿ ದೇವಿ
ಹೂವಿನ ಅಲಂಕಾರದಲ್ಲಿ ಕಣಿವೆ ಮಾರಮ್ಮ 
ಕೋಟೆ ರಸ್ತೆಯ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ
ಕೊಲ್ಲಾಪುರದ ಮಹಾಲಕ್ಷ್ಮಿ

ವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ

ದಸರಾ ಪ್ರಯುಕ್ತ ನಗರದ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದ ಆವರಣದಲ್ಲಿ ಗುರುವಾರ ವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ವೈಭವದಿಂದ ನೆರವೇರಿತು. ಸಂಪ್ರದಾಯದಂತೆ ಗರುಡ ವಾಹನದ ಮೇಲೆ ಸ್ವಾಮಿಯನ್ನು ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರಿಂದ ಹರ್ಷೋದ್ಘಾರ ಮೊಳಗಿದವು. ನಂತರ ಕೆಲ ಭಕ್ತರು ಸ್ವಾಮಿಯ ಹೂವಿನ ಹಾರಗಳನ್ನು ಹರಾಜಿನಲ್ಲಿ ಖರೀದಿಸಿದರು. ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಅಂಬು ಕತ್ತರಿಸಿ ಅಂಬಿನೋತ್ಸವ ನೆರವೇರಿಸಲಾಯಿತು. ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ಭಕ್ತರು ಬನ್ನಿ ಮುಡಿಯುವ ಮೂಲಕ ಪರಸ್ಪರ ಹಬ್ಬದ ಸಂಭ್ರಮ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.