ಚಿತ್ರದುರ್ಗ: ‘ಅದ್ಭುತ ದೇವಾಲಯಗಳನ್ನು ನಿರ್ಮಿಸಿ ನಾಡಿನ ವಾಸ್ತುಶಿಲ್ಪಕ್ಕೆ ಕೊಡುಗೆ ನೀಡಿದ ವಿಶ್ವಕರ್ಮ ಸಮುದಾಯವು ದೇಶಕ್ಕೆ ಆಸ್ತಿಯಾಗಿದೆ. ಹಿಂದಿನಿಂದ ಬಂದ ಕುಲಕಸುಬನ್ನು ಸಮುದಾಯದ ಸದಸ್ಯರು ಮುಂದುವರಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ವತಿಯಿಂದ ಬುಧವಾರ ನಗರದ ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಹೊಯ್ಸಳರ ಕಾಲದ ಬೇಲೂರು, ಹಳೇಬಿಡು, ವಿಜಯನಗರ ಸಾಮ್ರಾಜ್ಯದ ಹಂಪಿ ದೇವಾಲಯಗಳು ವಿಶ್ವ ಪಾರಂಪರಿಕ ತಾಣಗಳೆಂದು ಗುರುತಿಕೊಂಡಿವೆ. ಈ ದೇವಾಲಯಗಳ ಹಿಂದೆ ವಿಶ್ವಕರ್ಮ ಸಮುದಾಯದ ಶ್ರಮವಿದೆ. ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ಮೂರ್ತಿ ಕೆತ್ತಿದ ಅರುಣ್ ಯೋಗಿರಾಜ್ ಸೇರಿದಂತೆ ರಾಜ್ಯದ ಹಲವು ಶಿಲ್ಪಕಲಾಕರರು ವಿಶ್ವದಾದ್ಯಂತ ತಮ್ಮ ಛಾಪು ಮೂಡಿಸಿದ್ದಾರೆ’ ಎಂದರು.
‘ಜಿಲ್ಲೆಯ ವಿನಯ್ ಕಾಳಾಚಾರ್ ಅಮೆರಿಕದ ವಾಷಿಂಗ್ಟನ್‌ನಲ್ಲಿ 20 ಅಡಿ ಎತ್ತರದ ಕನ್ನಡ ಭುವನೇಶ್ವರಿ ಶಿಲ್ಪಕಲಾ ಮೂರ್ತಿ ಕೆತ್ತನೆ ಮಾಡಿ ಕನ್ನಡದ ಸೊಬಗು ಹೆಚ್ಚಿಸಿದ್ದಾರೆ. ಸಾವಿರಾರು ವರ್ಷಗಳ ವಾಸ್ತುಶಿಲ್ಪ ಕಲೆಯನ್ನು ಇಂದಿಗೂ ವಿಶ್ವಕರ್ಮರು ಜೀವಂತವಾಗಿ ಇರಿಸಿದ್ದಾರೆ’ ಎಂದು ಹೇಳಿದರು.
‘ಜಿಲ್ಲಾಡಳಿತದಿಂದ ವರ್ಷಕ್ಕೆ 36ಕ್ಕೂ ಹೆಚ್ಚು ಜಯಂತಿಗಳನ್ನು ಆಚರಿಸಲಾಗುತ್ತದೆ. ಜಯಂತಿಗಳನ್ನು ವಿಜೃಂಭಣೆಯಿಂದ ಆಚರಿಸುವುದರ ಜೊತೆಗೆ ಮಹನೀಯರ ತತ್ವಾದರ್ಶ ಪಾಲಿಸಬೇಕು. ವಿಶ್ವಕರ್ಮ ಸಮುದಾಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಬೇಕು’ ಎಂದು ತಹಶೀಲ್ದಾರ್ ಗೋವಿಂದರಾಜ್ ಸಲಹೆ ನೀಡಿದರು.
‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ವಿಶ್ವಕರ್ಮ ಸಮಾಜವು ಬೆಂಬಲವಾಗಿ ನಿಲ್ಲಬೇಕು. ಸಮೀಕ್ಷೆಯಲ್ಲಿ ರಾಷ್ಟ್ರೀಯತೆಯ ಕಾಲಂನಲ್ಲಿ ಭಾರತೀಯರೆಂದು, ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ವಿಭಾಗದಲ್ಲಿ ವಿಶ್ವಕರ್ಮ, ಪ್ರವರ್ಗ-2ಎ ಎಂದು ನಮೂದಿಸಬೇಕು’ ಎಂದು ವಿಶ್ವಕರ್ಮ ಮಹಾ ಸಂಸ್ಥಾನದ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
‘ಕಾಯಕವನ್ನು ನಿಷ್ಠೆಯಿಂದ ಮಾಡುವ ವಿಶ್ವಕರ್ಮ ಸಮುದಾಯ ಕೆಲಸದಲ್ಲಿಯೇ ದೇವರನ್ನು ಕಾಣುತ್ತದೆ. ಇಂತಹ ವರ್ಗಗಳಿಗೆ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು 2ಎ ಅಡಿ ಮೀಸಲಾತಿ ನೀಡಿ ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ನಾಂದಿ ಹಾಡಿದರು’ ಎಂದು ಮುರುಘಾ ಮಠದ ಬಸವಕುಮಾರ ಸ್ವಾಮೀಜಿ ಹೇಳಿದರು.
ವಿಶ್ವಕರ್ಮ ಜಯಂತಿ ಅಂಗವಾಗಿ ಚಿತ್ರದುರ್ಗ ನಗರದ ಬುರುಜನಹಟ್ಟಿಯ ಕೋಟೆ ಆಂಜನೇಯ ದೇವಸ್ಥಾನ ಬಳಿ ವಿಶ್ವಕರ್ಮ ಭಾವಚಿತ್ರ ಮೆರವಣಿಗೆಗೆ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಕೆ.ಪಿ.ರವೀಂದ್ರನಾಥಾಚಾರ್ ಉಪನ್ಯಾಸ ನೀಡಿದರು. ಉಮೇಶ್ ಪತ್ತಾರ ಮತ್ತು ತಂಡ ಗೀತಗಾಯನ ನಡೆಸಿಕೊಟ್ಟರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿಶ್ವಕರ್ಮ ಸಮುದಾಯ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉಮೇಶ್ ಈಶ್ವರ್ ನಾಯ್ಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್, ವಿಶ್ವಕರ್ಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಸುರೇಶಾಚಾರ್ಯ, ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪ ಟ್ರಸ್ಟ್‌ನ ಎ.ಶಂಕರಾಚಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.