
ಹೊಳಲ್ಕೆರೆ: ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವಾಗ ಮುನ್ನ ತಟ್ಟೆ, ಲೋಟಗಳನ್ನು ಬಿಸಿ ನೀರಿನಲ್ಲಿ ತೊಳೆಯಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಂ.ಚಂದ್ರಪ್ಪ ಅವರು ಬಿಇಒ ಶ್ರೀನಿವಾಸ್ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ ಅವರಿಗೆ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
‘ಪ್ರತೀ ದಿನ ಊಟದ ನಂತರ ತಟ್ಟೆ, ಲೋಟಗಳನ್ನು ಬಿಸಿನೀರಿನಲ್ಲಿ ತೊಳೆಯುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಕಡಿಮೆ ಇರುತ್ತದೆ. ಮೊಟ್ಟೆ, ಬಾಳೆಹಣ್ಣು ಹಾಗೂ ಕಾಳುಗಳನ್ನು ಸರಿಯಾಗಿ ವಿತರಣೆ ಮಾಡಲಾಗುತ್ತಿದೆಯೇ ಎಂದು ಪರಿಶೀಲನೆ ನಡೆಸಲು ಸಮಿತಿ ರಚಿಸಲಾಗುವುದು’ ಎಂದು ತಿಳಿಸಿದರು.
‘ಚಿಕ್ಕಜಾಜೂರು ಸರ್ಕಾರಿ ಶಾಲೆಯ ಜಾಗದಲ್ಲಿ ಖಾಸಗಿಯವರು ಮಳಿಗೆ ನಿರ್ಮಿಸುತ್ತಿದ್ದು, ತಕ್ಷಣವೇ ತೆರವು ಮಾಡಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ ಹಾಗೂ ಕೆಡಿಪಿ ಸದಸ್ಯ ಪಾಡಿಗಟ್ಟೆ ಸುರೇಶ್ ಆಗ್ರಹಿಸಿದರು.
‘ಚಿಕ್ಕಜಾಜೂರಿನಲ್ಲಿ ಸ್ಮಶಾನಕ್ಕೆ ಮೀಸಲಿಟ್ಟಿರುವ ಜಾಗವನ್ನು ಒತ್ತುವರಿ ಮಾಡಲಾಗಿದ್ದು, ಹದ್ದುಬಸ್ತು ಮಾಡಿಸಿಕೊಡಿ’ ಎಂದು ಕೆಡಿಪಿ ಸದಸ್ಯ ಪುಟ್ಟಸ್ವಾಮಿ ಅವರು ತಹಶೀಲ್ದಾರ್ ವಿಜಯ ಕುಮಾರ್ ಅವರಿಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರಪ್ಪ, ತಾಲ್ಲೂಕಿನ ಎಲ್ಲ ಕಡೆ ಇರುವ ಸ್ಮಶಾನಗಳನ್ನು ಹದ್ದುಬಸ್ತು ಮಾಡಿಸುವಂತೆ ತಹಶೀಲ್ದಾರ್‌ಗೆ ಸೂಚಿಸಿದರು. ಹದ್ದುಬಸ್ತು ಮಾಡಿದ ನಂತರ ಅನುದಾನ ನೀಡಿ ಸ್ಮಶಾನ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.
‘ಜೆಜೆಎಂ ಕಾಮಗಾರಿ ಕಳಪೆಯಿಂದ ಕೂಡಿದ್ದು, ಓವರ್‌ಹೆಡ್ ಟ್ಯಾಂಕ್‌ಗಳಲ್ಲಿ ನೀರು ಸೂರುತ್ತಿದೆ. ಯೋಜನೆಗೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದು, ಒಂದು ನಲ್ಲಿಯಲ್ಲೂ ನೀರು ಬಂದಿಲ್ಲ. ಜೆಜೆಎಂ ಕಾರ್ಯಪಾಲಕ ಎಂಜಿನಿಯರ್ ಸಭೆಗೆ ಬಾರದೇ, ಸೆಕ್ಷನ್ ಅಧಿಕಾರಿಯನ್ನು ಕಳುಹಿಸಿದ್ದಾರೆ. ಅವರನ್ನು ಈಗಲೇ ಸಭೆಗೆ ಕರೆಸಬೇಕು. ಅವರು ಬಂದ ಮೇಲೆ ಚರ್ಚೆ ನಡೆಯಲಿ’ ಎಂದು ಕೆಡಿಪಿ ಸದಸ್ಯ ಕಿರಣ್, ಗಂಗಾಧರ್ ಪಟ್ಟು ಹಿಡಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಶಿವಣ್ಣ, ಕೆಡಿಪಿ ಸದಸ್ಯರಾದ ಸುಭಾನ್ ಸಾಬ್, ಬಿಂದು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಂಗಸ್ವಾಮಿ, ತಹಶೀಲ್ದಾರ್ ವಿಜಯ ಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಶಿವಪ್ರಕಾಶ್, ಸಿಪಿಐ ಶ್ರೀಶೈಲ ಇದ್ದರು.
ಸಭೆಯಲ್ಲಿ ಶಾಸಕರ ಸೂಚನೆ
*ಶಾಲಾ ಶೌಚಾಲಯದ ಸ್ಥಿತಿಗತಿ ಬಗ್ಗೆ ವರದಿ ತರಿಸಿಕೊಳ್ಳಲು ಶಾಸಕ ಚಂದ್ರಪ್ಪ ಸೂಚನೆ
*ಪ್ರತೀ ಶಾಲೆಗೂ ₹5 ಲಕ್ಷ ಅನುದಾನ ನೀಡಲಾಗುತ್ತಿದ್ದು ಒಂದೇ ಮಾದರಿಯ ಶೌಚಾಲಯ ನಿರ್ಮಿಸಬೇಕು *ಹೊಸದಾಗಿ ಜಾನುವಾರು ಸಮೀಕ್ಷೆ ಮಾಡಿಸಿ ತಿಂಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸುವಂತೆ ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ರಂಗಸ್ವಾಮಿ ಅವರಿಗೆ ಸೂಚನೆ
*ಗ್ರಾಮೀಣ ಭಾಗದ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟಿದ್ದು 15ನೇ ಹಣಕಾಸು ಯೋಜನೆಯ ಅನುದಾನ ಬಳಸಿ ತಕ್ಷಣವೇ ಆರ್‌ಒ ಪ್ಲಾಂಟ್‌ಗಳನ್ನು ದುರಸ್ತಿ ಮಾಡಿಸಲು ಸೂಚನೆ
‘ಬಾರ್ ಮಾಲೀಕರ ಮೇಲೆ ಕ್ರಮ ಕೈಗೊಳ್ಳಿ’
‘ಹಳ್ಳಿಗಳಲ್ಲಿ ಮೂರ್ನಾಲ್ಕು ಪೌಚ್ ಮದ್ಯ ಇಟ್ಟುಕೊಂಡವರ ಮೇಲೆ ದೂರು ದಾಖಲಿಸುತ್ತೀರಿ. ಆದರೆ ಇವರಿಗೆ ಮದ್ಯ ಮಾರಾಟ ಮಾಡಿದ ಬಾರ್ ಮಾಲೀಕನ ವಿರುದ್ಧ ಏಕೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಎಂದು ಶಾಸಕ ಎಂ.ಚಂದ್ರಪ್ಪ ಅಬಕಾರಿ ಅಧಿಕಾರಿಯನ್ನು ಪ್ರಶ್ನಿಸಿದರು.
‘ಮಧ್ಯರಾತ್ರಿಯವರೆಗೆ ಬಾರ್‌ಗಳು ತೆರೆದಿರುತ್ತವೆ. ವಾಹನಗಳ ಚಾಲಕರು ಕುಡಿದು ವಾಹನ ಚಾಲನೆ ಮಾಡುವುದರಿಂದ ಹೆಚ್ಚು ಅಪಘಾತ ಸಂಭವಿಸುತ್ತಿವೆ. ಅಧಿಕಾರಿಗಳು ಬಾರ್ ಮಾಲೀಕರಿಂದ ಮಾಮೂಲು ಪಡೆದು ಸುಮ್ಮನಾಗುತ್ತಾರೆ’ ಎಂದು ಸದಸ್ಯ ಸುರೇಶ್ ಗಂಗಾಧರ್ ಆಕ್ರೋಶ ವ್ಯಕ್ತಪಡಿಸಿದರು.
‘ಒಬ್ಬ ವ್ಯಕ್ತಿ 2.4 ಲೀಟರ್ ಮದ್ಯ ಇಟ್ಟುಕೊಳ್ಳಬಹುದು ಎಂಬ ನಿಯಮ ಇದೆ. ಇದನ್ನು ಮೀರಿ ಮದ್ಯ ಇಟ್ಟುಕೊಂಡಿದ್ದರೆ ಮಾತ್ರ ಕ್ರಮ ಕೈಗೊಳ್ಳಿ. ಮದ್ಯ ಅಕ್ರಮ ಮಾರಾಟಗಾರರ ಜತೆಗೆ ಬಾರ್ ಮಾಲೀಕರ ಮೇಲೆಯೂ ಕ್ರಮ ಕೈಗೊಂಡು ಬಾರ್ ಪರವಾನಿಗೆ ರದ್ದುಗೊಳಿಸಿ’ ಎಂದು ಚಂದ್ರಪ್ಪ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.