ADVERTISEMENT

ಪರಶುರಾಂಪುರ | ದುರಸ್ತಿಗೆ ಕಾದಿದೆ ಹಾಲಿಗೊಂಡನಹಳ್ಳಿ ಬ್ಯಾರೇಜ್

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 7:21 IST
Last Updated 28 ಆಗಸ್ಟ್ 2023, 7:21 IST
ಹೋಬಳಿಯ ಹಾಲಿಗೊಂಡನಹಳ್ಳಿಯ ಬಳಿ ಇರುವ ಬ್ಯಾರೇಜ್ ಕಿತ್ತು ಹೋಗಿರುವುದು
ಹೋಬಳಿಯ ಹಾಲಿಗೊಂಡನಹಳ್ಳಿಯ ಬಳಿ ಇರುವ ಬ್ಯಾರೇಜ್ ಕಿತ್ತು ಹೋಗಿರುವುದು   

ತಿಮ್ಮಯ್ಯ ಜೆ.

ಪರಶುರಾಂಪುರ: ಸಮೀಪದ ಹಾಲಿಗೊಂಡನಹಳ್ಳಿ ಸಮೀಪವಿರುವ ವೇದಾವತಿ ಬ್ಯಾರೇಜ್‌ ಹಾಳಾಗಿ ವರ್ಷ ಕಳೆದರೂ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಗಮನ ನೀಡದಿರುವುದು ರೈತರ ಆತಂಕ ಹೆಚ್ಚಿಸಿದೆ.

ವೇದಾವತಿ ನದಿಗೆ 2012-13ರಲ್ಲಿ ಅಂದಿನ ಶಾಸಕ ದಿ.ತಿಪ್ಪೇಸ್ವಾಮಿ ಅವರ ಅವಧಿಯಲ್ಲಿ ನಿರ್ಮಾಣ ಕಾರ್ಯ ಪ್ರಾರಂಭಿಸಿದ್ದ ಈ ಬ್ಯಾರೇಜ್ ಅನ್ನು ನಂತರದಲ್ಲಿ ಶಾಸಕರಾದ ಟಿ.ರಘುಮೂರ್ತಿ ಉದ್ಘಾಟಿಸಿದ್ದರು.

ADVERTISEMENT

ಕಳೆದ ಬಾರಿ ಈ ಭಾಗದಲ್ಲಿ ಸುರಿದ ಭಾರಿ ಮಳೆಯ ಕಾರಣ ಪ್ರವಾಹದ ರೀತಿಯಲ್ಲಿ ನದಿ ಹರಿದು ಈ ಬ್ಯಾರೇಜ್‌ನ ಶೇ 40ರಷ್ಟು ಭಾಗ ಕಿತ್ತು ಹೋಗಿದೆ. ಬ್ಯಾರೇಜ್ ಉದ್ದ 170 ಮೀಟರ್ ಇದ್ದು, 60 ಮೀಟರ್ ನಷ್ಟು ಕಿತ್ತು ಹೋಗಿದೆ.

ಬ್ಯಾರೇಜ್‌ ಕಿತ್ತುಹೋಗಿ ನೀರು ಸೋರುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿಯುವ ಭೀತಿ ಇದೆ. ಬೇಸಿಗೆಯಲ್ಲಿ ಈ ಭಾಗದ ಜನ-ಜಾನುವಾರುಗಳಿಗೆ ಎದುರಾಗುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಬ್ಯಾರೇಜ್ ದುರಸ್ತಿಗೆ ತುರ್ತಾಗಿ ಯೋಜನೆ ರೂಪಿಸಬೇಕು.
ರುದ್ರಮುನಿಯಪ್ಪ, ಪ್ರಗತಿಪರ ರೈತ, ಹಾಲಿಗೊಂಡನಹಳ್ಳಿ

ಈ ಬಾರಿ ಮಳೆ ಕೊರೆತೆ ಆಗಿರುವುದರಿಂದ ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆ ಹೆಚ್ಚಾಗಿದ್ದು, ಶೀಘ್ರ ಬ್ಯಾರೇಜ್ ದುರಸ್ತಿ ಮಾಡಿಸಿ ಬ್ಯಾರೇಜ್ ಅಕ್ಕಪಕ್ಕದ ಹಳ್ಳಿಗಳ ರೈತರ ತೋಟಗಳನ್ನು ರಕ್ಷಿಸಬೇಕಲ್ಲದೆ, ಕುಡಿಯುವ ನೀರಿನ ಬವಣೆಯನ್ನು ತಪ್ಪಿಸಬೇಕು. ಈ ಬಗ್ಗೆ ಈಗಾಗಲೇ ಅನೇಕ ಸಲ ಸಂಬಂಧಿಸಿದವರ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರಾದ ರುದ್ರಮುನಿಯಪ್ಪ, ತಿಪ್ಪೇಸ್ವಾಮಿ, ಚಲುಮಪ್ಪ, ಹನುಮಂತರಾಯ ಅಗ್ರಹಿಸಿದ್ದಾರೆ.

ಪ್ರವಾಹದ ತುರ್ತು ನಿಧಿ ಕೇವಲ ₹ 50 ಲಕ್ಷದಿಂದ ₹ 60 ಲಕ್ಷ ಬಳಸಬಹುದು. ಅದರೆ ದುರಸ್ತಿಗೆ ₹ 5 ಕೋಟಿಯಿಂದ ₹ 6 ಕೋಟಿ ಬೇಕಾಗುತ್ತದೆ. ಸರ್ಕಾರಕ್ಕೆ ವಿವರವಾದ ವರದಿ ನೀಡಿದ್ದು ಅನುದಾನ ಬಂದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು.
ಅಣ್ಣಪ್ಪ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ, ಚಳ್ಳಕೆರೆ ವಿಭಾಗ

‘ವೇದಾವತಿ ನದಿಯಲ್ಲಿ ಈಗಿರುವ ಬೊಂಬೆರಹಳ್ಳಿ, ಗೊರ್ಲತ್ತು, ಕಲಮರಹಳ್ಳಿ, ಚೌಳೂರು, ಪರಶುರಾಂಪುರ ಮತ್ತು ವೃಂದಾವನಹಳ್ಳಿ ಬ್ಯಾರೇಜ್‌ಗಳಲ್ಲಿ ನೀರಿದೆ. ನಮ್ಮೂರಿನ ಬ್ಯಾರೇಜ್‌ನಲ್ಲಿ ಮಾತ್ರ ನೀರಿಲ್ಲ. ಮುಂದಿನ ಮಾರ್ಚ್‌ ಅಥವಾ ಮೇನಲ್ಲಿ ವಾಣಿವಿಲಾಸ ಸಾಗರದಿಂದ ನೀರು ಬಿಡುವ ವೇಳೆಗೆ ಇದರ ದುರಸ್ತಿ ಮಾಡಿಸಿದರೆ ಬ್ಯಾರೇಜ್‌ ಸುತ್ತಮುತ್ತಲ ಹಳ್ಳಿಯವರಿಗೆ ಅನುಕೂಲವಾಗುತ್ತದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು’ ಎಂದು ಹಾಲಿಗೊಂಡನಹಳ್ಳಿ ರೈತರು ಆಗ್ರಹಿಸಿದ್ದಾರೆ.

ಹೋಬಳಿಯ ಹಾಲಿಗೊಂಡನಹಳ್ಳಿಯ ಬಳಿ ಇರುವ ಬ್ಯಾರೆಜ್ ಕಿತ್ತು ಹೋಗಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.