ADVERTISEMENT

ಚಿತ್ರದುರ್ಗ | ನೀರಿಗಾಗಿ ನಿದ್ದೆಗೆಡುವ ಕಡ್ಲೆಗುದ್ದು ಗ್ರಾಮಸ್ಥರು

ಜಿಲ್ಲೆಯ 197 ಹಳ್ಳಿಗಳಲ್ಲಿ ಜೀವಜಲಕ್ಕೆ ಉಂಟಾಗಲಿದೆ ತತ್ವಾರ

ಜಿ.ಬಿ.ನಾಗರಾಜ್
Published 18 ಏಪ್ರಿಲ್ 2020, 2:25 IST
Last Updated 18 ಏಪ್ರಿಲ್ 2020, 2:25 IST
ಚಿತ್ರದುರ್ಗ ತಾಲ್ಲೂಕಿನ ಕಡ್ಲೇಗುದ್ದು ಗ್ರಾಮದಲ್ಲಿ ನೀರಿನ ಬಂಡಿಯಲ್ಲಿ ಬಿಂದಿಗೆ ಇಟ್ಟು ಕೊಳವೆ ಬಾವಿ ಸುತ್ತ ಕಾಯುತ್ತಿರುವುದು.
ಚಿತ್ರದುರ್ಗ ತಾಲ್ಲೂಕಿನ ಕಡ್ಲೇಗುದ್ದು ಗ್ರಾಮದಲ್ಲಿ ನೀರಿನ ಬಂಡಿಯಲ್ಲಿ ಬಿಂದಿಗೆ ಇಟ್ಟು ಕೊಳವೆ ಬಾವಿ ಸುತ್ತ ಕಾಯುತ್ತಿರುವುದು.   

ಚಿತ್ರದುರ್ಗ: ‘ಕುಡಿಯುವ ನೀರು ಹಿಡಿಯಲು ಬೆಳಿಗ್ಗೆ ಪಾಳಿಗೆ ಇಟ್ಟ ಬಿಂದಿಗೆ ಸಂಜೆ ಹೊತ್ತಿಗೆ ತುಂಬುತ್ತದೆ. ನಾಲ್ಕು ಕೊಡಕ್ಕಿಂತ ಹೆಚ್ಚು ನೀರು ಯಾರಿಗೂ ಸಿಗುವುದಿಲ್ಲ. ನೀರು ಸಂಗ್ರಹಿಸಲು ರಾತ್ರಿ ಇಡೀ ನಿದ್ದೆಗೆಡುವ ದುರ್ದೈವ ನಮ್ಮದು..’ ಎನ್ನುವಾಗ ಕಡ್ಲೆಗುದ್ದು ಗ್ರಾಮದ ಧನಂಜಯ ಅವರಲ್ಲಿ ಬೇಸರ, ಸಿಟ್ಟು ಏಕಕಾಲಕ್ಕೆ ಸ್ಫೋಟವಾಯಿತು.

ಚಿತ್ರದುರ್ಗ ತಾಲ್ಲೂಕಿನ ಕಡ್ಲೆಗುದ್ದು ನೀರಿನ ಸಮಸ್ಯೆಯನ್ನು ತೀವ್ರವಾಗಿ ಎದುರಿಸುತ್ತಿರುವ ಗ್ರಾಮ. ಬೇಸಿಗೆ ಆರಂಭ ಆಗುವುದಕ್ಕೂ ಮೊದಲೇ ನೀರಿಗೆ ಹಾಹಾಕಾರ ಸೃಷ್ಟಿಯಾಗಿತ್ತು. ಡಿಸೆಂಬರ್‌ ತಿಂಗಳಲ್ಲೇ ಬೀದಿಗೆ ಇಳಿದ ಗ್ರಾಮದ ಮಹಿಳೆಯರು ಬಿಂದಿಗೆ ಹಿಡಿದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಗಮನ ಸೆಳೆದಿದ್ದರು. ಐದು ತಿಂಗಳು ಕಳೆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

600ಕ್ಕೂ ಹೆಚ್ಚು ಮನೆಗಳಿರುವ ಗ್ರಾಮದಲ್ಲಿ ಎರಡು ಕೊಳವೆ ಬಾವಿಗಳಿವೆ. ಕುಡಿಯಲು ಯೋಗ್ಯವಿಲ್ಲದ ಕಾರಣ ಒಂದು ಕೊಳವೆ ಬಾವಿ ಬಳಕೆಗೆ ಮಾತ್ರ ಉಪಯೋಗವಾಗುತ್ತಿದೆ. ಮೊತ್ತೊಂದು ಕೊಳವೆ ಬಾವಿ ಕುಡಿಯುವ ನೀರಿಗೆ ಆಸರೆಯಾಗಿದೆ. ಬೇಸಿಗೆ ಸಮೀಪಿಸುತ್ತಿದ್ದಂತೆ ಎರಡೂ ಬಾವಿಗಳು ಬತ್ತಲಾರಂಭಿಸಿವೆ. ನೀರಿನ ಸೆಲೆ ಕಡಿಮೆಯಾದಂತೆ ಗ್ರಾಮಸ್ಥರ ಆತಂಕ ಹೆಚ್ಚಾಗುತ್ತಿದೆ. ಕೊಳವೆ ಬಾವಿ ಮುಂಭಾಗದ ಸರತಿ ಸಾಲು ಕಿ.ಮೀ ದೂರದವರೆಗೆ ವಿಸ್ತರಿಸುತ್ತಿದೆ.

ADVERTISEMENT

ಗ್ರಾಮಕ್ಕೆ ಯಾವುದೇ ಸಂದರ್ಭದಲ್ಲಿ ಭೇಟಿ ನೀಡಿದರೂ ಬಿಂದಿಗೆ ಇಟ್ಟುಕೊಂಡ ಬಂಡಿಗಳು ಕಾಣಸಿಗುತ್ತವೆ. ಹಗಲು – ರಾತ್ರಿ ಎನ್ನದೇ ಜನರು ನೀರು ಸಂಗ್ರಹಿಸಲು ಕಷ್ಟಪಡುತ್ತಿದ್ದಾರೆ. ಕೃಷಿ ಚಟುವಟಿಕೆ, ಮನೆಗೆಲಸದ ಮೇಲೆಯೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೂ ಇದೊಂದು ಕಾಯಕವಾಗಿದೆ.

ಕೊರೊನಾ ಸೋಂಕಿನ ಭೀತಿ ಆವರಿಸಿರುವ ಈ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸಲಾಗಿದೆ. ಆದರೆ, ನೀರು ಸಂಗ್ರಹಿಸುವ ಸಂದರ್ಭದಲ್ಲಿ ಈ ‘ಅಂತರ’ ಪದಕ್ಕೆ ಅರ್ಥವೇ ಇರುವುದಿಲ್ಲ. ಸರತಿ ಸಾಲಿನಲ್ಲಿ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆಯನ್ನು ಗ್ರಾಮದ ಮುಖಂಡರು ರೂಪಿಸಿದ್ದಾರೆ. ಸೋಂಕು ಅಂಟುವ ಭೀತಿಯ ನಡುವೆಯೂ ಜೀವ ಜಲಕ್ಕೆ ಎಲ್ಲರೂ ಮುಗಿಬೀಳುವುದು ಅನಿವಾರ್ಯವಾಗಿದೆ.

‘ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಡಳಿತ ಕೊಂಚ ಸ್ಪಂದಿಸಿತು. ಟ್ಯಾಂಕರ್‌ ಮೂಲಕ ನೀರು ಒದಗಿಸುವ ಆಶ್ವಾಸನೆ ನೀಡಿತು. ಆದರೆ, ಅದು ಬಹು ದಿನಗಳ ವರೆಗೆ ಸಾಧ್ಯವಾಗಲಿಲ್ಲ. ಯುಗಾದಿ ಹಬ್ಬದ ಸಂದರ್ಭದಲ್ಲಿ ನಾಲ್ಕಾರು ದಿನ ಕಾಣಿಸಿಕೊಂಡ ಟ್ಯಾಂಕರ್‌ ಈಗ ನಾಪತ್ತೆಯಾಗಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಣ್ಣಪ್ಪಸ್ವಾಮಿ.

ಗ್ರಾಮ ಸಮೀಪದ ತೋಟಗಳ ಮಾಲೀಕರು ಟ್ಯಾಂಕರ್‌ಗೆ ನೀರು ಕೊಡುತ್ತಿದ್ದರು. ಬೇಸಿಗೆ ಬಿಸಿಲು ಹೆಚ್ಚಾದ ಪರಿಣಾಮ ನೀರಿನ ಸೆಲೆ ಕಡಿಮೆಯಾಗಿದೆ. ತೋಟಕ್ಕೆ ನೀರು ಸಾಲುತ್ತಿಲ್ಲವೆಂಬ ಕಾರಣಕ್ಕೆ ಟ್ಯಾಂಕರ್‌ಗೆ ನೀರು ಕೊಡುತ್ತಿಲ್ಲ. ತಾಲ್ಲೂಕು ಪಂಚಾಯಿತಿ ಏಕಾಏಕಿ ಟ್ಯಾಂಕರ್‌ ಸ್ಥಗಿತಗೊಳಿಸಿದೆ. ಇದನ್ನು ಪ್ರಶ್ನಿಸಿದ ಗ್ರಾಮಸ್ಥರಿಗೆ ಜನಪ್ರತಿನಿಧಿಯೊಬ್ಬರು ನೀಡಿದ ಉತ್ತರ ಗ್ರಾಮಸ್ಥರನ್ನು ಕೆರಳಿಸಿದೆ. ‘ಕೊರೊನಾ ಸೋಂಕು ನಿಯಂತ್ರಣಕ್ಕೆ ಗಮನ ಹರಿಸಲಾಗಿದೆ. ಬರುವಷ್ಟೇ ನೀರು ಬಳಸಿ ಮನೆಯಲ್ಲೇ ಇರಿ’ ಎಂದು ಜನಪ್ರತಿನಿಧಿ ಹೇಳಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರದಿಂದ ಚಿತ್ರದುರ್ಗಕ್ಕೆ ನೀರು ಪೂರೈಸುವ ಕೊಳವೆ ಮಾರ್ಗ ಗ್ರಾಮದ ಸಮೀಪದಲ್ಲೇ ಹಾದು ಹೋಗಿದೆ. ಹಿರೆಗುಂಟನೂರು, ಭೀಮಸಮುದ್ರ ಸೇರಿ ಹಲವು ಗ್ರಾಮಗಳಿಗೆ ಶಾಂತಿಸಾಗರದ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಕಡ್ಲೆಗುದ್ದು ಗ್ರಾಮಕ್ಕೂ ಇದೇ ನೀರು ಒದಗಿಸಬೇಕು ಎಂಬ ಒತ್ತಾಯ ಹಲವು ದಿನಗಳಿಂದ ಇದೆ. ಆದರೆ, ಈ ಬೇಡಿಕೆ ಇನ್ನೂ ಈಡೇರಿಲ್ಲ.

₹ 25 ಲಕ್ಷ ಅನುದಾನ

ಕುಡಿಯುವ ನೀರು ಪೂರೈಕೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸಮಸ್ಯೆ ಸೃಷ್ಟಿಯಾಗಬಹುದಾದ ಹಳ್ಳಿಗಳ ಪಟ್ಟಿ ಮಾಡಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪನಿರ್ದೇಶಕ ಎಚ್‌.ಹನುಮಂತಯ್ಯ ತಿಳಿಸಿದ್ದಾರೆ.

ಚಳ್ಳಕೆರೆ, ಮೊಳಕಾಲ್ಮುರು, ಚಿತ್ರದುರ್ಗ ತಾಲ್ಲೂಕಿಗೆ ₹ 25 ಲಕ್ಷ ಹಾಗೂ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ತಾಲ್ಲೂಕಿಗೆ ₹ 5 ಲಕ್ಷ ಅನುದಾನ ಬಿಡುಗಡೆಯಾಗಿದೆ. ಟ್ಯಾಂಕರ್‌ ನೀರು ಪೂರೈಸುವ ಸ್ಥಿತಿ ಯಾವುದೇ ಗ್ರಾಮದಲ್ಲಿಲ್ಲ. ಅಗತ್ಯವಿದ್ದರೆ ಕೊಳವೆ ಬಾವಿ ಎರವಲು ಸೇವೆ ಪಡೆಯುತ್ತೇವೆ. ಹೊಸ ಕೊಳವೆ ಬಾವಿ ಕೊರೆಸಲು ಸಿದ್ಧರಿದ್ದೇವೆ ಎಂಬುದು ಅಧಿಕಾರಿಗಳ ಸಬೂಬು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.