ADVERTISEMENT

ಚಿತ್ರದುರ್ಗ: ಕಾಯಕಲ್ಪಕ್ಕೆ ಕಾದಿವೆ ಜಲಮೂಲಗಳು...

ಒಡಲು ಸೇರುತ್ತಿರುವ ಕಟ್ಟಡ, ಚಿಕನ್‌ ಸೆಂಟರ್‌ ತ್ಯಾಜ್ಯ: ಉಸಿರುಗಟ್ಟಿಸುವ ವಾತಾವರಣ; ಕಲುಷಿತವಾಗುತ್ತಿದೆ ಗಂಗೆ

ಕೆ.ಪಿ.ಓಂಕಾರಮೂರ್ತಿ
ಕೊಂಡ್ಲಹಳ್ಳಿ ಜಯಪ್ರಕಾಶ
Published 7 ಜುಲೈ 2025, 5:37 IST
Last Updated 7 ಜುಲೈ 2025, 5:37 IST
ಚಿತ್ರದುರ್ಗದ ಮುನ್ಸಿಪಲ್‌ ಕಾಲೊನಿಯ ಗಣಪತಿ ದೇವಸ್ಥಾನದ ಹೊಂಡದ ದುಃಸ್ಥಿತಿ
ಪ್ರಜಾವಾಣಿ ಚಿತ್ರ: ವಿ.ಚಂದ್ರಪ್ಪ
ಚಿತ್ರದುರ್ಗದ ಮುನ್ಸಿಪಲ್‌ ಕಾಲೊನಿಯ ಗಣಪತಿ ದೇವಸ್ಥಾನದ ಹೊಂಡದ ದುಃಸ್ಥಿತಿ ಪ್ರಜಾವಾಣಿ ಚಿತ್ರ: ವಿ.ಚಂದ್ರಪ್ಪ   

ಚಿತ್ರದುರ್ಗ/ಮೊಳಕಾಲ್ಮುರು: ವರ್ಷದಿಂದ ವರ್ಷಕ್ಕೆ ಜಿಲ್ಲೆಯಾದ್ಯಂತ ಉತ್ತಮ ಮಳೆ ದಾಖಲಾಗುತ್ತಿದೆ. ಆದರೆ ಮನುಷ್ಯರ ನಿರಂತರ ಹಸ್ತಕ್ಷೇಪ, ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತನಕ್ಕೆ ಜಲಪಾತ್ರೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಅವುಗಳ ನೀರಿನ ಸಂಗ್ರಹ ಸಾಮರ್ಥ್ಯವೂ ಕುಗ್ಗುತ್ತಿದೆ. 

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 166 ಕೆರೆಗಳಿವೆ. ಮೂರು ವರ್ಷಗಳಿಂದ ಬಹುತೇಕ ಎಲ್ಲಾ ಕೆರೆಗಳೂ ಮೈದುಂಬುತ್ತಿವೆ. ಚಿತ್ರದುರ್ಗ ನಗರ ವ್ಯಾಪ್ತಿಯಲ್ಲೇ 15ಕ್ಕೂ ಹೆಚ್ಚು ಹೊಂಡ, ಪುಷ್ಕರಿಣಿಗಳಿವೆ. ಆದರೆ, ಮಳೆ ನೀರನ್ನು ಸರಿಯಾದ ರೀತಿ ಸಂಗ್ರಹಿಸಿ ಉಪಯೋಗಿಸುವಲ್ಲಿ ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು ನಿರಂತರವಾಗಿ ಎಡವುತ್ತಿವೆ.

ಚಿತ್ರದುರ್ಗ ನಗರದ ಕೆಂಚಮಲ್ಲಪ್ಪನ ಹೊಂಡ, ಸಿಹಿನೀರು ಹೊಂಡ, ಮುನ್ಸಿಪಲ್‌ ಕಾಲೊನಿಯ ಗಣಪತಿ ದೇಗುಲದ ಹಿಂಭಾಗದ ಪುಷ್ಕರಿಣಿ ಹಾಗೂ ಸಂತೆಹೊಂಡದ ಒಡಲಿಗೆ ಪ್ಲಾಸ್ಟಿಕ್‌ ತ್ಯಾಜ್ಯ, ತೆಂಗಿನಕಾಯಿ ಹಾಗೂ ಪೂಜೆ ಸಾಮಗ್ರಿಗಳು ಹೇರಳ ಪ್ರಮಾಣದಲ್ಲಿ ಸೇರುತ್ತಿವೆ. ಇರುವುದರಲ್ಲಿ ಚನ್ನಕೇಶವ ಹೊಂಡದ ಸ್ಥಿತಿ ಕೊಂಚ ಉತ್ತಮ ಎನ್ನುವಂತಿದೆ. ಸಿಹಿನೀರು ಹೊಂಡದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದೆ. ಇದರ ಅಭಿವೃದ್ಧಿ ವಿಚಾರವಾಗಿ ದಶಕಗಳಿಂದ ಎದ್ದಿದ್ದ ಕೂಗಿಗೆ ಸ್ಪಂದಿಸಿದ್ದ ನಗರಸಭೆ ಸುತ್ತಲೂ ಕಾಂಪೌಂಡ್‌ ನಿರ್ಮಿಸಿತ್ತು. ಈಗ ಪುನಃ ಇದು ನಿರ್ವಹಣೆ ಕೊರತೆ ಎದುರಿಸುತ್ತಿದೆ.

ADVERTISEMENT

ಮೊಳಕಾಲ್ಮುರು ತಾಲ್ಲೂಕಿನ ವಿವಿಧೆಡೆ ಬೇಕಾಬಿಟ್ಟಿ ತ್ಯಾಜ್ಯ ಸುರಿಯುತ್ತಿರುವುದರಿಂದ ಜಲಮೂಲಗಳು ದಿಕ್ಕು ಬದಲಿಸುತ್ತಿರುವುದಷ್ಟೇ ಅಲ್ಲದೇ ಅವು ವಿನಾಶದ ಆತಂಕವನ್ನೂ ಎದುರಿಸುತ್ತಿವೆ. ಬಹುತೇಕ ಎಲ್ಲ ಕಡೆ ಈ ಸಮಸ್ಯೆ ಕಾಣಸಿಗುತ್ತಿದೆ.

‘ಗ್ರಾಮಗಳಲ್ಲಿ ಕಟ್ಟಡಗಳ ತ್ಯಾಜ್ಯ, ಮಾಂಸದ ಅಂಗಡಿಗಳ ತ್ಯಾಜ್ಯ, ಮನೆಗಳ ತ್ಯಾಜ್ಯವನ್ನು ದೂರಕ್ಕೆ ತೆಗೆದುಕೊಂಡು ಹೋಗದೆ ಸಮೀಪದಲ್ಲೇ ಇರುವ ಹಳ್ಳ, ಕೊಳ್ಳಗಳಿಗೆ ಹಾಕಲಾಗುತ್ತಿದೆ. ಮಳೆ ಬಂದಾಗ ನೀರು ಸಮರ್ಪಕವಾಗಿ ಹರಿಯದೆ ದಿಕ್ಕು ಬದಲಿಸಿ ಜಮೀನುಗಳಿಗೆ ನುಗ್ಗುತ್ತಿದೆ. ಇದರಿಂದಾಗಿ ಕೆರೆ, ಚೆಕ್‌ ಡ್ಯಾಂ ಸೇರಬೇಕಿದ್ದ ಅಪಾರ ಜಲ ಸಂಪನ್ಮೂಲ ಪೋಲಾಗುತ್ತಿದೆ’ ಎಂಬ ದೂರುಗಳು ಕೇಳಿಬಂದಿವೆ.

‘ತಾಲ್ಲೂಕಿನಲ್ಲಿ 16 ಗ್ರಾಮ ಪಂಚಾಯಿತಿಗಳಿದ್ದು, ಎಲ್ಲ ಕಡೆ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ಬಹುತೇಕ ಘಟಕಗಳು ನಿರ್ವಹಣೆ ಕೊರತೆಯಿಂದ ನಲುಗಿವೆ. ಪಂಚಾಯಿತಿ ಸಿಬ್ಬಂದಿ ಬೇರೆ ದಾರಿ ಕಾಣದೆ ಗ್ರಾಮದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸಮೀಪದ ಹಳ್ಳ, ಕೊಳ್ಳಗಳಿಗೆ ತಂದು ಸುರಿಯುತ್ತಿದ್ದಾರೆ’ ಎಂದು ಮೊಗಲಹಳ್ಳಿಯ ನಾಗರಾಜ್‌ ದೂರಿದರು.

‘ಕಟ್ಟಡ ತ್ಯಾಜ್ಯವನ್ನು ಹಳ್ಳಗಳಲ್ಲಿ ಹಾಕುತ್ತಿರುವುದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದ ನೀರಿನ ಒತ್ತಡ ಹೆಚ್ಚಿ ಚೆಕ್‌ ಡ್ಯಾಂಗಳಿಗೂ ಹಾನಿಯಾಗಿದೆ. ಗ್ರಾಮವೊಂದರ ಸೋಲಾರ್ ಘಟಕಕ್ಕೆ ಕಳೆದ ವರ್ಷ ವ್ಯಾಪಕ ನೀರು ನುಗ್ಗಿ ವಿದ್ಯುತ್‌ ಅವಘಡ ಸಂಭವಿಸಿತ್ತು. ಕಂದಾಯ ಅಧಿಕಾರಿಗಳು ಭೇಟಿ ನೀಡಿ ಜೆಸಿಬಿಯಿಂದ ಮಣ್ಣು ತೆರವು ಮಾಡಿ, ನೀರಿನ ಹರಿವಿಗೆ ಅನುವು ಮಾಡಿಕೊಟ್ಟಿದ್ದರು. ಆದರೆ, ಸಮಸ್ಯೆಗೆ ಸೂಕ್ತ ಕಾರಣ ಹುಡುಕಿ ಮೂಲದಲ್ಲೇ ಅದನ್ನು ಸರಿಪಡಿಸಿಲ್ಲ. ಈ ವರ್ಷವೂ ಮಳೆ ಬಂದಾಗ ಈ ಸಮಸ್ಯೆ ಮರುಕಳಿಸಲಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಆರೋಪಿಸಿದರು. 

‘ಮಾಂಸದ ಅಂಗಡಿಯವರು ತ್ಯಾಜ್ಯವನ್ನು ಹಳ್ಳಗಳಲ್ಲಿ ಸುರಿಯುತ್ತಿರುವ ಪರಿಣಾಮ ಮಳೆ ಬಂದಾಗ ಅವು ಕೊಳೆತು ನಾರುತ್ತವೆ. ಇದರಿಂದಾಗಿ ದಾರಿ ಹೋಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ. ಹಳ್ಳಗಳ ಸಮೀಪ ವಾಸ ಮಾಡುವವರ ಸ್ಥಿತಿ ಹೇಳತೀರದು. ಸಮಸ್ಯೆ ಪರಿಹರಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ’ ಎಂದು ಕೊಂಡ್ಲಹಳ್ಳಿಯ ಪಾಂಡುರಂಗಪ್ಪ ಹೇಳಿದರು.

ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತು ಜಲಮೂಲಗಳನ್ನು ಕಾಪಾಡಬೇಕಿದೆ. ಇಲ್ಲವಾದರೆ ಬಂದ ನೀರು ವ್ಯರ್ಥವಾಗಿ ಪುನಃ ಸಮಸ್ಯೆ ಎದುರಾದರೂ ಅಚ್ಚರಿಯಿಲ್ಲ.

ಮೊಳಕಾಲ್ಮುರು ತಾಲ್ಲೂಕಿನ ಗ್ರಾಮವೊಂದರ ಬಳಿ ಹಳ್ಳಕ್ಕೆ ತ್ಯಾಜ್ಯ ಸುರಿದಿರುವುದು
ನಿರಂತರ ಸ್ವಚ್ಛತಾ ಕಾರ್ಯ ಕೈಗೊಂಡರೂ ಜನರು ಹೊಂಡಗಳನ್ನು ಮಲಿನಗೊಳಿಸುತ್ತಲೇ ಇದ್ದಾರೆ. ಇನ್ನು ಮುಂದೆ ಹೊಂಡಗಳನ್ನು ಸ್ವಚ್ಛಗೊಳಿಸಿ ಅದರ ವ್ಯಾಪ್ತಿಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸುತ್ತೇವೆ. ತ್ಯಾಜ್ಯ ಸುರಿಯುವವರನ್ನು ಪತ್ತೆ ಹಚ್ಚಿ ದಂಡ ವಿಧಿಸುತ್ತೇವೆ.
ಬಿ.ಎನ್‌.ಸುಮಿತಾ ನಗರಸಭೆ ಅಧ್ಯಕ್ಷೆ
ಜಲಮೂಲಗಳಿಗೆ ತ್ಯಾಜ್ಯ ಸುರಿಯುವ ಮೂಲಕ ವಿಷಕಾರಕ ಅಂಶ ಸುಲಭವಾಗಿ ನೀರಿಗೆ ಸೇರಲು ಅನುವು ಮಾಡಿಕೊಡುತ್ತಿದ್ದೇವೆ. ಇದು ಮುಂದುವರಿದಲ್ಲಿ ನೀರು ಉಪಯೋಗಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಲಿದೆ.
ಎನ್‌.ಜೆ.ದೇವರಾಜರೆಡ್ಡಿ ಅಂತರ್ಜಲ ತಜ್ಞ
ಹೋಬಳಿಯಲ್ಲಿ ಸುವರ್ಣಮುಖಿ ವೇದಾವತಿ ನದಿ ಹರಿಯುತ್ತಿದ್ದರೂ ಕುಡಿಯುವ ನೀರಿಗೆ ಬಡತನ ಎಂಬಂತಾಗಿದೆ. ಜಲಮೂಲಗಳ ನಿರ್ವಹಣೆ ಬಚಾವತ್‌ ತೀರ್ಪು ರಾಷ್ಟ್ರೀಯ ಜಲಾನಯನ ನೀತಿ ಅಡ್ಡಿಯಾಗಿದೆ.
ಎಂ.ಶಿವಣ್ಣ ಮಾಜಿ ಅಧ್ಯಕ್ಷ ಧರ್ಮಪುರ ಫೀಡರ್‌ ಚಾನಲ್‌ ಹೋರಾಟ ಸಮಿತಿ
ಧರ್ಮಪುರ ಸಮೀಪದ ಶ್ರವಣಗೆರೆ ಕೆರೆಯಲ್ಲಿ ಬಳ್ಳಾರಿ ಜಾಲಿ ಬೆಳೆದಿರುವುದು 

ಬಳ್ಳಾರಿ ಜಾಲಿಗೆ ಕೆರೆ ಏರಿಗಳಲ್ಲಿ ಬಿರುಕು !

ವಿ.ವೀರಣ್ಣ

ಧರ್ಮಪುರ: ಹೋಬಳಿಯ ಕೆರೆ ಕಟ್ಟೆ ಗೋಕಟ್ಟೆ ಮತ್ತು ಚೆಕ್ ಡ್ಯಾಂಗಳು ನಿರ್ವಹಣೆ ಕೊರತೆ ಎದುರಿಸುತ್ತಿವೆ. ಇವುಗಳಲ್ಲಿ ಹೂಳು ಮತ್ತು ಗಿಡ ಗಂಟಿಗಳು ಬೆಳೆದಿವೆ. ‘15 ದೊಡ್ಡ ಕೆರೆಗಳಲ್ಲಿ 7 ಕೆರೆಗಳಿಗೆ ವೇದಾವತಿ ನದಿಯ ಹೊಸಹಳ್ಳಿ ಸಮೀಪದ ಬ್ಯಾರೇಜ್‌ನಿಂದ ಪೈಪ್‌ಲೈನ್‌ ಮೂಲಕ ನೀರುಣಿಸುವ ಕಾರ್ಯ ಕೈಗೊಳ್ಳಲಾಗಿದೆ. ಹಲಗಲದ್ದಿ ಮದ್ದಿಹಳ್ಳಿ ಖಂಡೇನಹಳ್ಳಿ ಹೊಸಕೆರೆ ಬೇತೂರು ಮತ್ತು ಅರಳೀಕೆರೆ ಸಕ್ಕರ ಕೆರೆಗಳಿಗೆ ನೀರುಣಿಸಬೇಕಿದೆ. ಬಹುತೇಕ ಕೆರೆಗಳ ಏರಿ ಮೇಲೆ ಬಳ್ಳಾರಿ ಜಾಲಿ ಬೆಳೆದು ಅಲ್ಲಲ್ಲಿ ಏರಿ ಬಿರುಕು ಬಿಟ್ಟಿವೆ. ಕೆಲವು ಕಡೆ ಶಿಥಿಲಗೊಂಡಿವೆ.

ಶಿಡ್ಲಯ್ಯನಕೋಟೆ ಸಮೀಪದ ವೇದಾವತಿ ನದಿಗೆ ಅಡ್ಡಲಾಗಿ ಚೆಕ್‌ ಡ್ಯಾಂ ನಿರ್ಮಾಣಗೊಂಡಿದ್ದು ಎಡ ಮತ್ತು ಬಲನಾಲೆ ನಿರ್ಮಾಣಗೊಂಡಿವೆ. ಇಲ್ಲಿಂದ ಎಡನಾಲೆ ಮೂಲಕ ಚಳ್ಳಕೆರೆ ತಾಲ್ಲೂಕಿನ ರಾಣಿಕೆರೆ ಬಲನಾಲೆಯ ಮೂಲಕ ಬುರುಡುಕುಂಟೆ ಮತ್ತು ಪರಶುರಾಂಪುರ ಕೆರೆಗೆ ನೀರು ಹೋಗಲಿದೆ. ಆದರೆ ನಿರ್ವಹಣೆ ಕೊರತೆಯಿಂದ ಎರಡು ನಾಲೆಗಳಲ್ಲಿ ನೀರು ಮುಂದಕ್ಕೆ ಹೋಗದೆ ಆ ಭಾಗದ ರೈತರು ಶಾಶ್ವತವಾಗಿ ಬರಗಾಲದ ಪರಿಸ್ಥಿತಿ ಅನುಭವಿಸುವಂತಾಗಿದೆ. 

ನಾಯಕನಹಟ್ಟಿ ಪಟ್ಟಣದ ಚಿಕ್ಕಕೆರೆಯ ಬದಿಯಲ್ಲಿ ಸುರಿದಿರುವ ಕಟ್ಟಡ ತ್ಯಾಜ್ಯ

ನಿರ್ವಹಣೆ ಕೊರತೆ; ಆವರಿಸಿದ ಗಿಡಗಂಟಿ 

ಎಚ್‌.ಡಿ.ಸಂತೋಷ್‌

ಹೊಸದುರ್ಗ: ತಾಲ್ಲೂಕಿನಾದ್ಯಂತ ಇರುವ ಜಲಮೂಲಗಳು ನಿರ್ವಹಣೆ ಕೊರತೆಯಿಂದ ನಲುಗುತ್ತಿವೆ. ಹೂಳು ತುಂಬಿರುವುದರಿಂದ ಇವುಗಳ ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ಕೆರೆ ಏರಿ ಹಾಗೂ ಸುತ್ತಲೂ ಜಾಲಿಗಿಡ ಸೇರಿ ಅಪಾರ ಗಿಡಗಂಟಿಗಳು ಬೆಳೆದಿವೆ. ಕೆರೆಯ ಅಂಚಿನಲ್ಲಿ ನಿಧಾನವಾಗಿ ಒತ್ತುವರಿ ನಡೆಯುತ್ತಿದೆ. ಕೆರೆಯ ದಡದಲ್ಲಿ ಹಾಗೂ ಮಧ್ಯದಲ್ಲಿ ಪಾಚಿಯಂತಹ ಕಳೆ ಅಧಿಕವಾಗಿದೆ. ಹಿಂದೊಮ್ಮೆ ಅಧಿಕ ಮಳೆಯಾದ ಸಮಯದಲ್ಲಿ ತಾಲ್ಲೂಕಿನ ನೀರಗುಂದ ಕೆರೆ ಏರಿ ಒಡೆದು ಅಪಾರ ಹಾನಿಯಾಗಿತ್ತು.  ‘ನೀರಗುಂದ ಕೆರೆ 224.19 ಎಕರೆ ವಿಸ್ತೀರ್ಣ ಇದೆ. ಅದರ ಸುತ್ತಲೂ ತ್ಯಾಜ್ಯ ಹಾಗೂ ಗಿಡಗಂಟಿ ಆವರಿಸಿದೆ. ಕೆರೆ ಏರಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಐತಿಹಾಸಿಕ ಕೆರೆ ಹೀಗಾದರೆ ರೈತರ ಗತಿಯೇನು?’ ಎನ್ನುತ್ತಾರೆ ನೀರಗುಂದ ಗ್ರಾಮದ ರೈತ ರಘು.

ಜಲಪಾತ್ರೆ ಮಡಿಲಲ್ಲಿ ಘನತ್ಯಾಜ್ಯದ್ದೇ ಕಾರುಬಾರು

ವಿ.ಧನಂಜಯ

ನಾಯಕನಹಟ್ಟಿ: ಪಟ್ಟಣದ ಚಿಕ್ಕಕೆರೆಯ ಸುತ್ತಮುತ್ತ ಕಟ್ಟಡಗಳ ತ್ಯಾಜ್ಯ ತಂದು ಸುರಿಯುತ್ತಿರುವುದರಿಂದ ಕೆರೆ ಪರಿಸರ ಹಾಳಾಗಿ ಜಲಮೂಲಗಳು ಕಲುಷಿತವಾಗುತ್ತಿವೆ. ಚಿಕ್ಕಕೆರೆಯು ಪಟ್ಟಣಕ್ಕೆ ಹೊಂದಿಕೊಂಡಿರುವ ಕಾರಣ ತ್ಯಾಜ್ಯವನ್ನು ರಾಜಾರೋಷವಾಗಿಯೇ ಕೆರೆಗೆ ಹಾಕುತ್ತಿದ್ದಾರೆ. ಕೆರೆ ಸುತ್ತಮುತ್ತ ‘ಕಸ ಹಾಕಿದರೆ ದಂಡ ವಿಧಿಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ  ಎಚ್ಚರಿಕೆಯ ನಾಮಫಲಕ ಅಳವಡಿಸಿದರೂ ಯಾರೂ ಕ್ಯಾರೆ ಎನ್ನುತ್ತಿಲ್ಲ.

‘ಕೋಳಿ ಮೀನು ಅಂಗಡಿಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ರಾತ್ರಿ ವೇಳೆ ಕೆರೆಗೆ ತಂದು ಸುರಿಯುತ್ತಿದ್ದಾರೆ. ಇದರಿಂದ ಕೆರೆಯ ನೀರು ದುರ್ವಾಸನೆ ಬೀರುತ್ತಿದೆ. ಚಿಕ್ಕಕೆರೆಯು 389.19 ಎಕರೆ ವಿಸ್ತೀರ್ಣವಿದ್ದು 20ಕ್ಕೂ ಹೆಚ್ಚು ಗ್ರಾಮಗಳ ಅಂತರ್ಜಲ ವೃದ್ಧಿಗೆ ನೆರವಾಗಿದೆ. ಮಳೆಯ ಕೊರತೆಯಿಂದಾಗಿ  ಕಳೆದ 10 ವರ್ಷಗಳಿಂದ ಚಿಕ್ಕಕೆರೆಗೆ ನೀರು ಬಾರದೇ ಇರುವುದರಿಂದ ಸೀಮೆ ಜಾಲಿಗಿಡ ಬೆಳೆದಿವೆ. ಶಾಸಕ ಎನ್‌.ವೈ.ಗೋಪಾಲಕೃಷ್ಣ ಅವರು ಚಿಕ್ಕಕೆರೆಯ ಪುನಶ್ಚೇತನ ಮತ್ತು ಕೆರೆ ಪರಿಸರ ರಕ್ಷಿಸಲು ₹ 50 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ನೆಪ ಮಾತ್ರಕ್ಕೆ ಅಲ್ಲಲ್ಲಿ ತಂತಿಬೇಲಿ ನಿರ್ಮಿಸಲಾಗಿದೆ. ಈ ಕಾಮಗಾರಿ ಅಪೂರ್ಣವಾಗಿದ್ದು ರಾಜಾರೋಷವಾಗಿ ಕೆರೆಗೆ ಘನತ್ಯಾಜ್ಯ  ಸುರಿಯಲಾಗುತ್ತಿದೆ. ಅಧಿಕಾರಿಗಳು ಇದನ್ನು ಕಂಡೂ ಕಾಣದಂತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.