ADVERTISEMENT

ಕರಬೂಜ ದರ ತೀವ್ರ ಕುಸಿತ: ಬೆಳೆಗಾರರ ಆತಂಕ

250 ಎಕರೆಯಲ್ಲಿ ನಾಟಿ, ಮಳೆಯಿಂದ ತಗ್ಗಿದ ಬೇಡಿಕೆ, ತೀವ್ರ ನಷ್ಟ

ಕೊಂಡ್ಲಹಳ್ಳಿ ಜಯಪ್ರಕಾಶ
Published 12 ಜುಲೈ 2025, 4:47 IST
Last Updated 12 ಜುಲೈ 2025, 4:47 IST
ಮೊಳಕಾಲ್ಮುರು ತಾಲ್ಲೂಕಿನ ರಾವಲಕುಂಟೆಯಲ್ಲಿ ಮಾರುಕಟ್ಟೆಗೆ ಕಳಿಸಲು ಸಿದ್ಧವಾಗುತ್ತಿರುವ ಕರಬೂಜ
ಮೊಳಕಾಲ್ಮುರು ತಾಲ್ಲೂಕಿನ ರಾವಲಕುಂಟೆಯಲ್ಲಿ ಮಾರುಕಟ್ಟೆಗೆ ಕಳಿಸಲು ಸಿದ್ಧವಾಗುತ್ತಿರುವ ಕರಬೂಜ   

ಮೊಳಕಾಲ್ಮುರು: ಏಕಾಏಕಿ ಕರಬೂಜ (ಜರಡಿ ಕರಬೂಜ) ಹಣ್ಣಿನ ದರ ಕುಸಿತವಾಗಿರುವ ಪರಿಣಾಮ ಬೆಳೆಗಾರರಿಗೆ ನಷ್ಟದ ಆತಂಕ ಎದುರಾಗಿದೆ.

‘ಜಿಲ್ಲೆಯಲ್ಲಿ ಈ ಜಾತಿಯ ಕರಬೂಜವನ್ನು ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕುಗಳಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಇಲ್ಲಿ ಹೊರತುಪಡಿಸಿದರೆ ಆಂಧ್ರಗಡಿಯ ಡಿ.ಹಿರೇಹಾಳ್‌, ಕಲ್ಯಾಣದುರ್ಗ, ಮದನಪಲ್ಲಿ, ಅನಂತಪುರ ಭಾಗದಲ್ಲಿ ನಾಟಿ ಮಾಡಲಾಗುತ್ತದೆ. ಸದ್ಯ ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕುಗಳಲ್ಲಿ ಅಂದಾಜು 250 ಎಕರೆ ವಿಸ್ತೀರ್ಣದಲ್ಲಿ ನಾಟಿ ಮಾಡಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕುಮಾರ್‌ ಮಾಹಿತಿ ನೀಡಿದರು.

‘ತಿಂಗಳ ಹಿಂದೆ ಪ್ರಥಮ ಕಟ್ಟಿಂಗ್‌ ಹಣ್ಣಿನ ದರ ಪ್ರತಿ ಕೆ.ಜಿ.ಗೆ ₹ 25ರಿಂದ ₹ 30ರ ಆಸುಪಾಸಿನಲ್ಲಿತ್ತು. 15 ದಿನಗಳಿಂದ ಬೆಲೆ ಇಳಿಮುಖವಾಗಿದ್ದು, ಶುಕ್ರವಾರ ₹ 7ರಂತೆ ಪ್ರಥಮ ಕಟ್ಟಿಂಗ್‌ ಹಣ್ಣು ಮಾರಾಟ ಮಾಡಲಾಗಿದೆ. 2 ಮತ್ತು 3ನೇ ಕಟ್ಟಿಂಗ್‌ ದರ ಏರುವ ಲಕ್ಷಣಗಳಿಲ್ಲ. ಇದರಿಂದ ಹಾಕಿದ ಬಂಡವಾಳ ವಾಪಸ್‌ ಬಾರದ ಸ್ಥಿತಿ ಎದುರಾಗಿದೆ’ ಎಂದು ರಾವಲಕುಂಟೆಯ ಬೆಳೆಗಾರ ಚನ್ನವೀರರೆಡ್ಡಿ ಹೇಳಿದರು.

ADVERTISEMENT

‘ಪ್ರತಿ ಎಕರೆ ಕರಬೂಜಕ್ಕೆ 400 ಗ್ರಾಂ ಬೀಜ ಬೇಕಿದೆ. ಮಲ್ಚಿಂಗ್‌, ಕೂಲಿ, ಗೊಬ್ಬರ, ನಿರ್ವಹಣೆ, ಔಷಧ ವೆಚ್ಚ ಸೇರಿ ₹ 80,000 ದಿಂದ ₹ 90,000 ಖರ್ಚು ಬರುತ್ತದೆ. ಅಂದಾಜು ಇಳುವರಿ 7 ರಿಂದ 10 ಟನ್‌ ಬರುತ್ತದೆ. ಈಗಿನ ದರದಿಂದ ನಷ್ಟದಲ್ಲಿದ್ದೇವೆ. ಬೇಡಿಕೆ ಇಲ್ಲದಿರುವುದು ದರ ಕುಸಿತಕ್ಕೆ ಕಾರಣ ಎಂದು ಖರೀದಿದಾರರು ಹೇಳುತ್ತಾರೆ. ರಾಜ್ಯದಲ್ಲಿ ಈ ಹಣ್ಣಿಗೆ ನಿರ್ದಿಷ್ಟವಾದ ಮಾರುಕಟ್ಟೆಯಿಲ್ಲ. ಸಗಟು ವ್ಯಾಪಾರಿಗಳು ಜಮೀನುಗಳಿಗೆ ಬಂದು ಖರೀದಿ ಮಾಡುತ್ತಾರೆ’ ಎಂದರು. 

‘ಪ್ರಸಕ್ತ ವರ್ಷ ಹಣ್ಣು ನಾಟಿ ಮಾಡುವಲ್ಲಿ ಸ್ವಲ್ಪ ವಿಳಂಬವಾಗಿದೆ. ಮಳೆ, ಚಳಿ ಹೆಚ್ಚುತ್ತಿರುವುದರಿಂದ ಬೇಡಿಕೆ ಕುಸಿದಿದೆ. ಈ ಹಣ್ಣು ಜ್ಯೂಸ್‌ ತಯಾರಿಕೆಗೆ ಹೆಚ್ಚು ಬಳಕೆಯಾಗುತ್ತದೆ. ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಮಳೆ ಹೆಚ್ಚಾಗಿರುವುದು, ವಿಳಂಬವಾಗಿ ಹಣ್ಣು ಬಂದಿರುವುದು ಹಾಗೂ ಪ್ರತಿ ವರ್ಷಕ್ಕಿಂತ ಈ ವರ್ಷ ಹೆಚ್ಚು ಪ್ರದೇಶದಲ್ಲಿ ನಾಟಿ ಮಾಡಿರುವುದು ಬೇಡಿಕೆ ಕುಸಿತಕ್ಕೆ ಕಾರಣ’ ಎಂದು ಅಧಿಕಾರಿ ಕುಮಾರ್‌ ತಿಳಿಸಿದರು.

‘ಪ್ರಸಕ್ತ ವರ್ಷ ಮಳೆ ಬೇಗ ಆರಂಭವಾಗಿರುವ ಕಾರಣ ಬಿಸಿಲಿನ ಧಗೆ ಇಲ್ಲದೆ ಜ್ಯೂಸ್‌ಗೆ ಬೇಡಿಕೆ ಇಲ್ಲವಾಗಿದೆ. ಕಳೆದ ವಾರ ಪ್ರತಿ ಕೆ.ಜಿ. ಹಣ್ಣು ₹ 4ರಂತೆಯೂ ಮಾರಾಟವಾಗಿತ್ತು. ಹಣ್ಣು ಹೆಚ್ಚು ದಿನ ಕೆಡದಂತೆ ಇಡಲು ಸಾಧ್ಯವಿಲ್ಲ. ನಿರ್ದಿಷ್ಟ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ದರ ಏರಿಳಿತಕ್ಕೆ ಕಾರಣ. ಒಂದೊಂದು ಸಲ ವ್ಯಾಪಾರಿಗಳೂ ಸಿಕ್ಕಾಪಟ್ಟೆ ನಷ್ಟಕ್ಕೀಡಾಗುವ ಸಾಧ್ಯತೆ ಇದೆ’ ಎಂದು ಸಗಟು ವ್ಯಾಪಾರಿ ಪಾಪರೆಡ್ಡಿ ಹೇಳಿದರು.

ಮಳೆ ಮುಂದುವರಿದಲ್ಲಿ ಹಣ್ಣಿನ ದರ ಮತ್ತೆ ಕುಸಿಯಲಿದೆ. ಬೆಳೆಗಾರರು ಮಾರುಕಟ್ಟೆಯನ್ನು ಅಧ್ಯಯನ ಮಾಡಿ ನಾಟಿ ಮಾಡಬೇಕು. ಯಾರೋ ಒಂದಿಬ್ಬರಿಗೆ ಲಾಭ ಸಿಕ್ಕಿದೆ ಎಂದು ಅವರ ಹಾದಿಯಲ್ಲೇ ಹೋದರೆ ಈ ತರಹ ನಷ್ಟದ ಸಾಧ್ಯತೆ ಇರುತ್ತದೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು. 

ಕರಬೂಜ ಹಣ್ಣು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.