ADVERTISEMENT

ಮೊಳಕಾಲ್ಮುರು| ಮುಂದುವರಿದ ವಾರದ ಸಂತೆ ಗೋಳು: ಮನವಿಗೆ ಸೊಪ್ಪು ಹಾಕದ ಆಡಳಿತ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:05 IST
Last Updated 9 ಜನವರಿ 2026, 7:05 IST
ಮೊಳಕಾಲ್ಮುರಿನ ಮುಖ್ಯರಸ್ತೆ ಬದಿಯಲ್ಲಿ ವಾರದ ಸಂತೆ ಪೊಲೀಸ್‌ ಬಂದೋಬಸ್ತ್‌ನಲ್ಲಿ ನಡೆಯಿತು 
ಮೊಳಕಾಲ್ಮುರಿನ ಮುಖ್ಯರಸ್ತೆ ಬದಿಯಲ್ಲಿ ವಾರದ ಸಂತೆ ಪೊಲೀಸ್‌ ಬಂದೋಬಸ್ತ್‌ನಲ್ಲಿ ನಡೆಯಿತು    

ಮೊಳಕಾಲ್ಮುರು: ಸಂಘಟನೆಗಳ ಪ್ರತಿಭಟನೆ ಎಚ್ಚರಿಕೆ ಮಧ್ಯೆಯೂ ಬುಧವಾರ ಇಲ್ಲಿನ ಮುಖ್ಯ ರಸ್ತೆ ಇಕ್ಕೆಲಗಳಲ್ಲಿ ವಾರದ ಸಂತೆ ನಡೆಯುವ ಮೂಲಕ ಆಡಳಿತ ಯಂತ್ರದ ನಿರ್ಲಕ್ಷ್ಯ ಮುಂದುವರಿದಿದೆ.

ಬೆಳಿಗ್ಗೆಯೇ ಪೊಲೀಸರು ಸ್ಥಳದಲ್ಲಿ ಜಮಾಯಿಸಿದ್ದರು. ರಸ್ತೆಯಲ್ಲಿ ಸಂಚರಿಸುವ ವಾಹನಗಳ ವೇಗ ನಿಯಂತ್ರಿಸಲು ಅಲ್ಲಲ್ಲಿ ಬ್ಯಾರಿಕೇಡ್‌ ಹಾಕಲಾಗಿತ್ತು. ದೊಡ್ಡ ವಾಹನಗಳ ಮೇಲೆ ನಿಗಾ ಇಟ್ಟು ನಿಧಾನವಾಗಿ ಚಲಿಸುವಂತೆ ಸೂಚನೆ ನೀಡಲಾಯಿತು. ಸಂಜೆ ಸಂತೆ ಮುಗಿಯುವವರೆಗೆ ಪೊಲೀಸರು ಹಾಜರಿದ್ದು ವಾಹನ ನಿಯಂತ್ರಣ ಮಾಡಿದರು.

‘ಮುಂದಿನ ವಾರದಿಂದ ವ್ಯಾಪಾರಿಗಳು ರಸ್ತೆಗೆ ಇಳಿದು ವ್ಯಾಪಾರ ಮಾಡದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪಿಎಸ್‌ಐ ಮಹೇಶ್‌ ಹೊಸಪೇಟೆ ಹೇಳಿದರು.

ADVERTISEMENT

ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಘಟಕ ವಾರದ ಸಂತೆ ರಸ್ತೆ ಬದಿಯಲ್ಲಿ ನಡೆಸಬಾರದು, ಸಂಭವನೀಯ ಅನಾಹುತದ ಬಗ್ಗೆ ಜಿಲ್ಲಾಧಿಕಾರಿ ಮತ್ತು ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಸ್ಥಳಕ್ಕೆ ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ಬುಧವಾರ ಶಾಸಕ ಭವನ ಆವರಣದಲ್ಲಿ ಸಂತೆ ನಡೆಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿ ಪ್ರತಿಭಟನೆ ಮಾಡಿದ್ದರು.

ಆದರೂ ಹೊಣೆ ಹೊತ್ತಿರುವ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ ಯಾವ ಕ್ರಮಕ್ಕೂ ಮುಂದಾಗದಿರುವುದು ಬೇಸರದ ಸಂಗತಿ. ಅನಾಹುತ ಆಗುವವರೆಗೆ ಬುದ್ದಿ ಬರುವ ಲಕ್ಷಣ ಕಾಣುತ್ತಿಲ್ಲ ಎಂದು ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.