ADVERTISEMENT

ಮೊಳಕಾಲ್ಮುರು ಕ್ಷೇತ್ರದಿಂದ ಮತ್ತೆ ಸ್ಪರ್ಧೆ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 3:55 IST
Last Updated 19 ಆಗಸ್ಟ್ 2022, 3:55 IST
ಮೊಳಕಾಲ್ಮುರು ತಾಲ್ಲೂಕಿನ ಕೋನಾಪುರದಲ್ಲಿ ಗುರುವಾರ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯನ್ನು ಸಚಿವ ಬಿ. ಶ್ರೀರಾಮುಲು ಉದ್ಘಾಟಿಸಿದರು.
ಮೊಳಕಾಲ್ಮುರು ತಾಲ್ಲೂಕಿನ ಕೋನಾಪುರದಲ್ಲಿ ಗುರುವಾರ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯನ್ನು ಸಚಿವ ಬಿ. ಶ್ರೀರಾಮುಲು ಉದ್ಘಾಟಿಸಿದರು.   

ಮೊಳಕಾಲ್ಮುರು: ಮುಂದಿನ ಬಾರಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು ಜನರು ಆಶೀರ್ವಾದ ಮಾಡುವ ಮೂಲಕ ಬಾಕಿ ಇರುವ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.

ಗುರುವಾರ ಕೋನಾಪುರದಲ್ಲಿ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.

‘ಭರವಸೆ ನೀಡಿದ್ದ ಕೆಲ ಕಾರ್ಯಗಳನ್ನು ಮಾಡಲು ಸಾಧ್ಯವಾಗಿಲ್ಲ. ಆರಂಭದಲ್ಲಿ ನಮ್ಮ ಪಕ್ಷದ ಸರ್ಕಾರ ಇರಲಿಲ್ಲ. ಜತೆಗೆ ಕೋವಿಡ್ ಬಂದು ಸಮಸ್ಯೆ ಎದುರಾಯಿತು. ದಶಕಗಳಿಂದ ನನೆಗುದಿಗೆ ಬಿದ್ದಿರುವ ಹಲವು ಕೆಲಸಗಳು ಆಗಬೇಕಿದ್ದು ಇನ್ನೊಂದು ಬಾರಿ ಅವಕಾಶ ನೀಡಿದಲ್ಲಿ ಪೂರ್ಣಗೊಳಿಸಿ ಬೇರೆ ಕ್ಷೇತ್ರಕ್ಕೆ ಹೋಗುತ್ತೇನೆ’ ಎಂದು ಮನವಿ ಮಾಡಿದರು.

ADVERTISEMENT

‘ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬಾರದ ಕೋನಾಪುರ ಗ್ರಾಮದಲ್ಲಿ ಮೂಢನಂಬಿಕೆಗಳು ಜೀವಂತವಾಗಿದ್ದು ಜನರು ಇದರಿಂದ ಹೊರಬರಬೇಕಿದೆ. ಇಲ್ಲಿ ಪರಿಶಿಷ್ಟ ಜಾತಿ, ಪಂಗಡದ ಜನರು ವಾಸವಿದ್ದು, ಬುಡಕಟ್ಟು ಸಂಸ್ಕೃತಿಗಳ ಆರಾಧಕರಾಗಿದ್ದಾರೆ. ಈಗಲೂ ಈ ಸಂಸ್ಕೃತಿಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸರ್ಕಾರ ಈಚಿನ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದು ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಕೋನಾಪುರ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಂತೆ ಪ್ರೌಢಶಾಲೆ ಮಂಜೂರು ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜು ಆರಂಭಿಸಲು ಸಹ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಆಸ್ಪತ್ರೆ ಬೇಡಿಕೆಯು ಸರ್ಕಾರದ ಹಂತದಲ್ಲಿ ಪರಿಶೀಲನೆ
ಯಲ್ಲಿದೆ’ ಎಂದು ಶ್ರೀರಾಮುಲು ತಿಳಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಉಪ ಶಿಕ್ಷಣಾಧಿಕಾರಿ ರವಿಶಂಕರ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ವೆಂಕಟೇಶಪ್ಪ, ಸಮನ್ವಯ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಐಆರ್ ಟಿ ಹರಿ, ಶಿಕ್ಷಣ ಸಂಯೋಜಕ ಓಂಕಾರಪ್ಪ, ಬಿಜೆಪಿ ಮಂಡಲಾಧ್ಯಕ್ಷ ಡಾ.ಪಿ.ಎಂ. ಮಂಜುನಾಥ್, ಎಸ್‌ಟಿ ಮೋರ್ಚಾ ಅಧ್ಯಕ್ಷ ಜೀರಹಳ್ಳಿ ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುಲಿಂಗಪ್ಪ ಇದ್ದರು.

ಕಾರ್ಯಕ್ರಮದ ನಂತರ ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ಕೆರೆಗೆ ಶ್ರೀರಾಮುಲು ಬಾಗಿನ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.