ADVERTISEMENT

ಅಗತ್ಯವಸ್ತು ಬೆಲೆ ಏರಿಕೆಗೆ ಆಕ್ರೋಶ; ಮಹಿಳಾ ಕಾಂಗ್ರೆಸ್‌ ಪ್ರತಿಭಟನೆ

ಕೇಂದ್ರ–ರಾಜ್ಯ ಸರ್ಕಾರಗಳ ವಿರುದ್ಧ ಮಹಿಳಾ ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 15:17 IST
Last Updated 8 ಸೆಪ್ಟೆಂಬರ್ 2021, 15:17 IST
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದರು.
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದರು.   

ಚಿತ್ರದುರ್ಗ: ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದನ್ನು ವಿರೋಧಿಸಿ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಒಬಕೆ ಓಬವ್ವ ವೃತ್ತದ ಕಾಂಗ್ರೆಸ್‌ ಕಚೇರಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಸೌದೆ ಬಳಸಿ ಅಡುಗೆ ಮಾಡಿ ಆಕ್ರೋಶ ಹೊರಹಾಕಿದರು. ಆಡಳಿತದ ಅನುಭವ ಕೊರತೆ ಇರುವ ಬಿಜೆಪಿ ಸರ್ಕಾರವನ್ನು ರಾಷ್ಟ್ರಪತಿ ಅವರು ಕೂಡಲೇ ವಜಾಗೊಳಿಸಬೇಕು ಎಂದು ಮನವಿ ಮಾಡಿದರು.

2014ರಲ್ಲಿ ಅಧಿಕಾರಕ್ಕೆ ಬರುವ ಮೊದಲು ನರೇಂದ್ರ ಮೋದಿ ಅವರು ಹಲವು ಆಶ್ವಾಸನೆಗಳನ್ನು ನೀಡಿದ್ದರು. ಇದರಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವ ಭರವಸೆ ಪ್ರಮುಖವಾಗಿತ್ತು. ಏಳು ವರ್ಷಗಳ ಆಡಳಿತದಲ್ಲಿ ಇಂತಹ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಅಗತ್ಯವಸ್ತುಗಳ ಬೆಲೆ ದಿನ ಕಳೆದಂತೆ ಏರಿಕೆಯಾಗುತ್ತಿದೆ. ಇಂಧನ ಬೆಲೆ ಗಗನಮುಖಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಜನಸಾಮಾನ್ಯರ ಬದುಕು ಇನ್ನಷ್ಟು ದುರ್ಬರವಾಗಿದೆ. ಅನೇಕರು ಉದ್ಯೋಗ ಕಳೆದುಕೊಂಡು ಜೀವನನಿರ್ವಹಣೆಗೆ ಪರದಾಡುವಂತಾಗಿದೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮತದಾರರಿಗೆ ಆಶ್ವಾಸನೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಜನರ ಸಂಕಷ್ಟ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಜನಸಾಮಾನ್ಯರು ಜೀವನ ನಡೆಸಲು ಸಾಧ್ಯವಾಗದಷ್ಟು ಪ್ರತಿಕೂಲ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ದೇಶದ ಜನರಿಗೆ ಸುಳ್ಳು ಮಾಹಿತಿ ನೀಡಿ ಸರ್ಕಾರವೇ ಗೊಂದಲ ಸೃಷ್ಟಿಸುತ್ತಿರುವುದು ಖಂಡನೀಯ. ಜನವಿರೋಧಿ ನೀತಿಗಳನ್ನು ಹಿಂಪಡೆದು ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಸರ್ವರನ್ನು ಸಮಾನತೆಯಿಂದ ಕಾಣುವ ಆಡಳಿತ ನೀಡಬೇಕು. ರಾಷ್ಟ್ರಪತಿ ಮಧ್ಯಪ್ರವೇಶ ಮಾಡಬೇಕು ಎಂದು ಕೋರಿಕೊಂಡರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜಪೀರ್‌. ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಪಿ.ಎಸ್‌.ಗೀತಾ ನಂದಿನಿಗೌಡ, ಮುಖಂಡರಾದ ಆರ್‌.ಕಲ್ಪನಾ, ಟಿ.ಕುಮಾರಿ, ಶ್ರುತಿ, ಎಲ್‌.ಜಿ.ರತ್ನಮ್ಮ, ಎಸ್‌.ಜಿ.ವನಿತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.