ADVERTISEMENT

ಹೈನುಗಾರಿಕೆಯಲ್ಲಿ ಬದುಕು ಕಟ್ಟಿಕೊಂಡ ವನಜಾಕ್ಷಮ್ಮ

ಸಾಂತೇನಹಳ್ಳಿ ಸಂದೇಶ ಗೌಡ
Published 8 ಮಾರ್ಚ್ 2020, 11:18 IST
Last Updated 8 ಮಾರ್ಚ್ 2020, 11:18 IST
ವನಜಾಕ್ಷಮ್ಮ
ವನಜಾಕ್ಷಮ್ಮ   

ಹೊಳಲ್ಕೆರೆ: ತಾಲ್ಲೂಕಿನ ತೊಡರನಾಳ್ ಗ್ರಾಮದ ವನಜಾಕ್ಷಮ್ಮ ಹೈನುಗಾರಿಕೆ ನಡೆಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.

ವನಜಾಕ್ಷಮ್ಮ ಅವರಿಗೆ ಇಬ್ಬರು ಮಕ್ಕಳಿದ್ದು, ಚಿಕ್ಕವರಾಗಿದ್ದಾಗಲೇ ಪತಿ ತೀರಿಕೊಂಡರು. ಆದರೆ ಧೃತಿಗೆಡದ ಅವರು ಕೂಲಿ ಮಾಡಿ ಮಕ್ಕಳನ್ನು ಸಾಕಿ ಬೆಳೆಸಿದರು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನೂ ಕೊಡಿಸಿದರು. ಅವರಿಗೆ ಸ್ವಂತ ಮನೆ, ನಿವೇಶನ, ಜಮೀನು ಯಾವುದೂ ಇರಲಿಲ್ಲ. 2012ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಆರಂಭಿಸಿದ ಮಾರುತಿ ಮಹಿಳಾ ಸಂಘದ ಸದಸ್ಯೆಯಾದ ನಂತರ ಅವರ ಜೀವನವೇ ಬದಲಾಯಿತು.

‘ಮನಸ್ಸಿದ್ದರೆ ಮಾರ್ಗ’ ಎಂಬಂತೆ ಮೊದಲ ಬಾರಿಗೆ ಸ್ವಸಹಾಯ ಸಂಘದಿಂದ ₹ 10,000 ಸಾಲ ಪಡೆದು ಒಂದು ಹಸು ಖರೀದಿಸಿದರು. ಇದರೊಂದಿಗೆ ತರಕಾರಿ ಅಂಗಡಿಯನ್ನೂ ತೆರೆದರು. ಸಂಘದಿಂದ ನೆರವು ಪಡೆದು ಮತ್ತೆ ಹಸು ಖರೀದಿಸಿದರು. ಈಗ ಅವರ ಮನೆಯಲ್ಲಿ 5 ಹಸುಗಳಿದ್ದು, ನಿತ್ಯ 20 ಲೀಟರ್ ಹಾಲು ಜತೆಗೆ ಬೆಣ್ಣೆ, ತುಪ್ಪವನ್ನೂ ಮಾರಾಟ ಮಾಡುತ್ತಾರೆ. ಕೊಟ್ಟಿಗೆ ಗೊಬ್ಬರದಿಂದಲೂ ಸಾವಿರಾರು ರೂಪಾಯಿ ಆದಾಯ ಪಡೆಯುತ್ತಿದ್ದಾರೆ.

ADVERTISEMENT

‘ಪತಿ ತೀರಿಕೊಂಡಾಗ ನನಗೆ ದಿಕ್ಕೆ ತೋಚಲಿಲ್ಲ. ಮಕ್ಕಳನ್ನು ಸಾಕುವುದು ಹೇಗೆ ಎಂಬ ಚಿಂತೆ ಕಾಡುತ್ತಿತ್ತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸೇರಿದ ಮೇಲೆ ನನ್ನ ಬದುಕು ಬದಲಾಯಿತು. ಮಕ್ಕಳನ್ನು ಓದಿಸಿದ್ದಲ್ಲದೆ ನಿವೇಶನ ಖರೀದಿಸಿ, ಸ್ವಂತ ಮನೆಯನ್ನೂ ಕಟ್ಟಿಕೊಂಡಿದ್ದೇನೆ. ಗ್ರಾಮದಲ್ಲಿ ಎಲ್ಲರಂತೆ ಸ್ವಾಭಿಮಾನದಿಂದ ಬದುಕುತ್ತಿದ್ದೇನೆ’ ಎನ್ನುತ್ತಾರೆ ವನಜಾಕ್ಷಮ್ಮ.

ಹೈನುಗಾರಿಕೆ ಬಗ್ಗೆ ಹೆಚ್ಚು ತಿಳಿದುಕೊಂಡಿರುವ ಅವರು, ಪಶುವೈದ್ಯರ ಸಲಹೆ ಪಡೆದು ಹಸುಗಳಿಗೆ ತಾವೇ ಲಸಿಕೆ ಹಾಕುತ್ತಾರೆ. ಸಂಘದ ಅಧ್ಯಯನ ಪ್ರವಾಸ, ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಹಸು ಸಾಕುವ ಮಹಿಳೆಯರಿಗೆ ತಾವೇ ತರಬೇತಿ ಕೊಡುತ್ತಾರೆ. ತನುಶ್ರೀ ಜ್ಞಾನ ವಿಕಾಸ ಸಂಘದಿಂದ ಮಾರ್ಚ್ 8ರಂದು ಟಿ.ನುಲೇನೂರಿನಲ್ಲಿ ನಡೆಯುವ ಮಹಿಳಾ ದಿನಾಚರಣೆಯಲ್ಲಿ ವನಜಾಕ್ಷಮ್ಮ ಅವರನ್ನು ಸನ್ಮಾನಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.