ADVERTISEMENT

ಇಳಿಕೆ ಕಾಣದ ಮಹಿಳಾ ದೌರ್ಜನ್ಯ ಪ್ರಕರಣ: ನ್ಯಾಯಾಧೀಶ ರೋಣ ವಾಸುದೇವ್‌

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ರೋಣ ವಾಸುದೇವ್‌ ಕಳವಳ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 16:00 IST
Last Updated 9 ಅಕ್ಟೋಬರ್ 2024, 16:00 IST
ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ವಿಧಾನ್‌ ಸೇ ಸಮಾಧಾನ್‌’ ಕಾನೂನು ಅರಿವು ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ರೋಣ ವಾಸುದೇವ್‌ ಉದ್ಘಾಟಿಸಿದರು
ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ವಿಧಾನ್‌ ಸೇ ಸಮಾಧಾನ್‌’ ಕಾನೂನು ಅರಿವು ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ರೋಣ ವಾಸುದೇವ್‌ ಉದ್ಘಾಟಿಸಿದರು   

ಚಿತ್ರದುರ್ಗ: ಸಂವಿಧಾನದಲ್ಲಿ ಮಹಿಳೆಯರ ಗೌರವಕ್ಕೆ ಚ್ಯುತಿ ಬರದ ಹಾಗೆ ನಡೆದುಕೊಳ್ಳುವಂತೆ ಹೇಳಲಾಗಿದೆ. ಆದರೂ ಸಹ ದೇಶದಲ್ಲಿ ಸ್ತ್ರೀಯರ ಮೇಲಿನ ದೌರ್ಜನ್ಯ ಕಡಿಮೆ ಆಗುತ್ತಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ರೋಣ ವಾಸುದೇವ್‌ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ಕಾನೂನು ಸೇವಾ ಪ್ರಾಧಿಕಾರದಿಂದ ಆಯೋಜಿಸಿದ್ದ ‘ವಿಧಾನ್‌ ಸೇ ಸಮಾಧಾನ್‌’ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಮೂಲಭೂತ ಹಕ್ಕು ಕೇಳುವ ನಾವು ಕರ್ತವ್ಯಗಳನ್ನು ಸಹ ಚಾಚು ತಪ್ಪದೇ ಪಾಲಿಸಬೇಕು’ ಎಂದರು.

‘ಸ್ವಾತಂತ್ರ್ಯ ಬಂದ ತರುವಾಯ ಜಾರಿಗೊಳಿಸಿದ ಹಿಂದೂ ಉತ್ತರಾಧಿಕಾರಿ ಕಾಯ್ದೆ, ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೆ ಪಾಲು ನೀಡಿದೆ. ಈ ಮೂಲಕ ಮಹಿಳೆಯರಿಗೆ ಸಮಾನತೆ ದೊರಕಿಸಿಕೊಡುವ ಕೆಲಸ ಮಾಡಲಾಗಿದೆ. ಇದರ ಹೊರತಾಗಿ ಹಿಂದೂ ಪೋಷಕ ಕಾಯ್ದೆಯಡಿ ಮಹಿಳೆಗೆ ಪೋಷಕತ್ವದ ಹಕ್ಕು ನೀಡಲಾಯಿತು. ಇದರಿಂದ ಮಕ್ಕಳನ್ನು ದತ್ತು ತೆಗದುಕೊಳ್ಳಲು ಅವಕಾಶ ನೀಡಲಾಗಿದೆ’ ಎಂದು ತಿಳಿಸಿದರು.

ADVERTISEMENT
ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಶಾಶ್ವತ ಮಹಿಳಾ ಆಯೋಗ ಸ್ಥಾಪಿಸಲಾಗಿದೆ. ಈ ಎಲ್ಲದರ ಹೊರತಾಗಿಯೂ ಮಹಿಳೆಯರ ರಕ್ಷಣೆ ಹಾಗೂ ಹಕ್ಕುಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.
ರೋಣ ವಾಸುದೇವ್‌, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ

‘ಮಹಿಳೆಯರ ಕಳ್ಳ ಸಾಗಣೆ ತಡೆಯಲು ಮಾನವ ಕಳ್ಳ ಸಾಗಾಣಿಕೆ ನಿಷೇಧ ಕಾಯ್ದೆ, ಗೃಹ ಹಿಂಸೆಯಿಂದ ರಕ್ಷಣೆ, ವರದಕ್ಷಿಣೆ ನಿಷೇಧ, ಕೆಲಸದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಕಾಯ್ದೆ ತರಲಾಗಿದೆ. ಜತೆಗೆ ಸಮಾನ ವೇತನ ಹಾಗೂ ತಾಯ್ತನದ ಸೌಲಭ್ಯ ಕಾಯ್ದೆ ಜಾರಿ ಮಾಡಲಾಗಿದೆ’ ಎಂದು ಹೇಳಿದರು.

‘ದತ್ತಾಂಶದ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಶೇ.4 ರಷ್ಟು ಹೆಚ್ಚಾಗಿದೆ. ಗೃಹ ಹಿಂಸೆ, ಕೆಲಸದ ಸ್ಥಳದಲ್ಲಿ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಏರಿಕೆ ಆಗಿರುವುದು ಕಳವಳ ಮೂಡಿಸಿದೆ. ದೌರ್ಜನ್ಯ ವಿರುದ್ಧ ಪ್ರಕರಣಗಳಲ್ಲಿ ಶೇ.10 ರಷ್ಟು ಸೈಬರ್ ರೂಪದ ಅಪರಾಧಗಳು ಆಗಿವೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್‌ ತಿಳಿಸಿದರು.

‘ವಿಶ್ವಸಂಸ್ಥೆ 2030 ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ, ಮಹಿಳೆಯರ ವಿರುದ್ಧದ ತಾರತಮ್ಯ ತೊಡೆದು ಹಾಕಿ ಲಿಂಗ ಸಮಾನತೆ ತರುವ ಯೋಜನೆ ರೂಪಿಸಿದೆ. ಇದನ್ನು ಸಾಧಿಸಲು ನಮ್ಮ ಮನೋಭಾವದಲ್ಲಿ ಬದಲಾವಣೆ ಮೂಡಬೇಕಿದೆ. ಸಮಾಜದ ಅಂಚಿನಲ್ಲಿರುವ ಮಹಿಳೆಯರನ್ನು ಮುಖ್ಯವಾಹಿನಿಗೆ ತರಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಜೆ.ಸೋಮಶೇಖರ್‌ ಹೇಳಿದರು.

‘ನರೇಗಾದಡಿ ಕೆಲಸ ಮಾಡುವ ಮಹಿಳೆಯ ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ಕೂಸಿನ ಮನೆ ನಿರ್ಮಿಸಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ನಲ್ ಜಲ್ ಮಿತ್ರ ಎನ್ನುವ ಕಾರ್ಯಕ್ರಮ ಜಾರಿ ಮಾಡಿ ಮಹಿಳೆಯರಿಗೂ ಸಹ ಕುಡಿಯುವ ನೀರು ಸರಬರಾಜು ಮಾಡುವ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸಲು ತರಬೇತಿ ನೀಡಲಾಗಿದೆ’ ಎಂದು ತಿಳಿಸಿದರು.

ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಸರಸ್ವತಿ ಕಾನೂನು ಕಾಲೇಜು ಪ್ರಾಂಶುಪಾಲೆ ಸುಧಾದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್‌, ಸಹಾಯಕ ಪ್ರಾಧ್ಯಾಪಕ ಎನ್‌.ಡಿ.ಗೌಡ, ಮನೋವೈದ್ಯ ಡಾ.ಮಂಜುನಾಥ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.