ADVERTISEMENT

ಹೊಸದುರ್ಗ: 'ತಂತ್ರಜ್ಞಾನ ಬಳಕೆಯಿಂದ ವಿಶ್ವ ಹತ್ತಿರ, ಮನಸು ದೂರ'

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 5:53 IST
Last Updated 6 ಫೆಬ್ರುವರಿ 2021, 5:53 IST
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ   

ಹೊಸದುರ್ಗ: ‘ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯಿಂದ ವಿಶ್ವ ತುಂಬಾ ಹತ್ತಿರವಾಗಿದೆ. ಆದರೆ ಮಾನವರ ಮನಸ್ಸುಗಳು ಅಷ್ಟೇ ದೂರವಾಗುತ್ತಿವೆ’ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ವಿಶ್ವಸಂಸ್ಥೆ ಫೆ. 4 ಅನ್ನು ವಿಶ್ವ ಭಾತೃತ್ವ ದಿನವನ್ನಾಗಿ ಆಚರಿಸುವ ನಿರ್ಣಯ ಅನ್ವಯ ಅಬುದಾಬಿಯ ದುಬೈ ಕರ್ನಾಟಕ ನ್ಯೂಸ್‌ನಿಂದ ಗುರುವಾರ ಏರ್ಪಡಿಸಿದ್ದ ಗೂಗಲ್ ಮೀಟ್ ಕಾರ್ಯಕ್ರಮದಲ್ಲಿ ‘ವಿಶ್ವ ಭ್ರಾತೃತ್ವ ಮತ್ತು ಬಸವ ಸಂದೇಶ’ ಕುರಿತು ಮಾತನಾಡಿದರು.

‘ಜಗತ್ತಿನಲ್ಲಿ ಅಶಾಂತಿ, ಹಿಂಸೆ, ಭಯೋತ್ಪಾದನೆಯಂಥ ಚಟುವಟಿಕೆ ಹೆಚ್ಚುತ್ತಲಿವೆ. ವಿಶ್ವಸಂಸ್ಥೆ ವಿಶ್ವಶಾಂತಿಯನ್ನು ಕಾಪಾಡಲು ಹುಟ್ಟಿಕೊಂಡಿದೆ. ಈಗ ಜನರ ಮನದಲ್ಲಿ ಮನೆ ಮಾಡಿರುವ ಅಹಂಕಾರ, ಸ್ವಾರ್ಥ, ಅಧಿಕಾರದ ದಾಹ, ವಿಷಯಲೋಲುಪತೆ ಮತ್ತಿತರ ಕಾರಣಗಳಿಂದ ವಿಶ್ವಶಾಂತಿ ಹಗಲುಗನಸಾಗುತ್ತಿದೆ. ಈ ಕಾರಣ ವಿಶ್ವಸಂಸ್ಥೆ ಈ ವರ್ಷದಿಂದ ಫೆ.4ರಂದು ವಿಶ್ವ ಭ್ರಾತೃತ್ವ ದಿನ ಆಚರಿಸಲು ಘೋಷಿಸಿದೆ. ಇದು ಕೇವಲ ಘೋಷಣೆಯಾಗದೆ ವ್ಯಕ್ತಿಗಳ ಮನ, ಮನೆಯಲ್ಲಿ ಸಹೋದರತ್ವ ಭಾವನೆ ನೆಲೆಗೊಂಡು ಯುದ್ಧ, ಹಿಂಸೆ, ದ್ವೇಷ ಭಾವನೆಯನ್ನು ಕಿತ್ತಿಸೆಯುವಂತಾಗಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಭಾರತ ಸರ್ವಧರ್ಮ ಮತ್ತು ಸರ್ವಜನಾಂಗದ ಶಾಂತಿಯ ತೋಟ. ಎಲ್ಲ ಧರ್ಮಗಳೂ ಪ್ರತಿಪಾದಿಸುವುದು ಅಹಿಂಸೆ, ಸಹೋದರತ್ವ, ಜಾತ್ಯತೀತತೆ, ಸೌಹಾರ್ದತೆ ಮತ್ತು ಒಂದಾಗಿ ಬಾಳುವ ತತ್ವಗಳನ್ನು. ವಿಶ್ವ ಭ್ರಾತೃತ್ವ ನೆಲೆಗೊಳ್ಳಲು ಮುಖ್ಯವಾಗಿ ಬೇಕಾದುದು ದುಡಿಮೆ. ಅದನ್ನೇ ಬಸವತತ್ವದಲ್ಲಿ ಕಾಯಕ ಎನ್ನುವರು. ವ್ಯಕ್ತಿ ಕಾಯಕದಲ್ಲಿ ನಿರತನಾದಾಗ ಗುರುದರ್ಶನ, ಲಿಂಗಪೂಜೆ, ಜಂಗಮಸೇವೆ ಮರೆತರೂ ತಪ್ಪಿಲ್ಲ ಎನ್ನುವ ಮೂಲಕ ಕಾಯಕಕ್ಕೆ ವಿಶೇಷ ಮಹತ್ವ ನೀಡಿದ್ದಾರೆ. ಅಹಿಂಸೆ, ದಯೆ, ಪ್ರೀತಿ ಇವೇ ವಿಶ್ವ ಭ್ರಾತೃತ್ವದ ಮೊದಲ ಮೆಟ್ಟಿಲು. ಧರ್ಮಗಳು ಬೇರೆ ಬೇರೆ ಆಗಿದ್ದರೂ ಅವುಗಳ ಗುರಿ ಒಂದೇ ಆಗಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರಿನ ಬಿಷಪ್ ರೆವರೆಂಡ್ ಡಾ. ಪೀಟರ್ ಪೌಲ ಸಾಲ್ಡಾನಾ, ಬ್ಯಾಪ್ಸ್ ಅಬುಧಾಬಿ ಸ್ವಾಮಿ ನಾರಾಯಣ ಮಂದಿರದ ಮುಖ್ಯಸ್ಥ ಬ್ರಹ್ಮವಿಹಾರಿ ಸ್ವಾಮೀಜಿ ಮತ್ತು ಮಂಗಳೂರಿನ ಅಬ್ದುಲ್ ಸಲಾಂ ಪುತ್ತಿಗೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.