ADVERTISEMENT

ವಿಶ್ವ ತಂಬಾಕು ರಹಿತ ದಿನಾಚರಣೆ: ಗ್ರಾಮೀಣ ಮಹಿಳೆಯರನ್ನು ಕಾಡುತ್ತಿದೆ ಕ್ಯಾನ್ಸರ್‌

​ಪ್ರಜಾವಾಣಿ ವಾರ್ತೆ
Published 31 ಮೇ 2025, 14:55 IST
Last Updated 31 ಮೇ 2025, 14:55 IST
ತಂಬಾಕು ರಹಿತ ದಿನದ ಅಂಗವಾಗಿ ಶನಿವಾರ ನರ್ಸಿಂಗ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಜಾಗೃತಿ ಜಾಥಾ ನಡೆಸಿದರು
ತಂಬಾಕು ರಹಿತ ದಿನದ ಅಂಗವಾಗಿ ಶನಿವಾರ ನರ್ಸಿಂಗ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಜಾಗೃತಿ ಜಾಥಾ ನಡೆಸಿದರು   

ಚಿತ್ರದುರ್ಗ: ‘ತಂಬಾಕು ಸೇವನೆಯಿಂದಾಗಿ ಇತ್ತೀಚೆಗೆ ಗ್ರಾಮೀಣ ಮಹಿಳೆಯರಲ್ಲಿ ಕ್ಯಾನ್ಸರ್‌ ಹೆಚ್ಚುತ್ತಿದೆ. ಇದನ್ನು ತಪ್ಪಿಸಲು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಗ್ರಾಮೀಣ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಹೇಳಿದರು.

ಜಿಲ್ಲಾಡಳಿತ, ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಶಿವಮೊಗ್ಗದ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಿಯಮ ಬಾಹಿರವಾಗಿ ತಂಬಾಕು ಮಾರಾಟ ಮಾಡುವವರ ವಿರುದ್ಧ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಬೇಕು. ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಎಚ್ಚರ ವಹಿಸಬೇಕು. ನಿಯಮ ಮೀರಿ ತಂಬಾಕು ಮಾರುವವರಿಗೆ ಹೆಚ್ಚಿನ ದಂಡ ವಿಧಿಸಬೇಕು. ಕಠಿಣ ಕಾನೂನು ಕ್ರಮ ಜರುಗಿಸಬೇಕು’ ಎಂದು ಸೂಚನೆ ನೀಡಿದರು.

ADVERTISEMENT

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮಾತನಾಡಿ ‘ತಂಬಾಕು ಉತ್ಪನ್ನಗಳ ಸೇವನೆಯಿಂದ ಬಾಯಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಚಿಕ್ಕವಯಸ್ಸಿನ ವಿದ್ಯಾರ್ಥಿಗಳು ಸಹ ಕ್ಯಾನ್ಸರ್‌ಗೆ ತುತ್ತಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ತಂಬಾಕು ಉತ್ಪನ್ನ ಕಂಪನಿಗಳು ಬೆರೆಸುವ ರಾಸಾಯನಿಕಗಳ ಪರಿಣಾಮವಾಗಿ ತಂಬಾಕು ಸೇವನೆ ವ್ಯಸನವಾಗಿ ಪರಿಣಮಿಸುತ್ತಿದೆ’ ಎಂದರು.

ಶಿವಮೊಗ್ಗದ ಮಲ್ನಾಡ್‌ ಕ್ಯಾನ್ಸರ್ ಆಸ್ಪತ್ರೆಯ ಡಾ.ಸಚಿನ್ ಕೊಟ್ಟೂರು ಮಾತನಾಡಿ ‘1987, ಏ.7ನೇ ದಿನವನ್ನು ವಿಶ್ವಸಂಸ್ಥೆ ಧೂಮಪಾನ ನಿಷೇಧ ದಿನವನ್ನಾಗಿ ಘೋಷಿಸಿತು. ನಂತರದಲ್ಲಿ ಮೇ 31ನೇ ದಿನವನ್ನು ತಂಬಾಕು ರಹಿತ ದಿನವಾಗಿ ಆಚರಿಸುತ್ತಾ ಬರಲಾಗುತ್ತಿದೆ. ತಂಬಾಕು ಉದ್ದಿಮೆದಾರರು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಅನುಸರಿಸುತ್ತಿರುವ ತಂತ್ರಗಳನ್ನು ಬಯಲು ಮಾಡುವ ದೃಷ್ಟಿಯಿಂದ ವಿಶ್ವ ಸಂಸ್ಥೆ ‘ಅನ್‌ಮಾಸ್ಕಿಂಗ್ ದ ಅಪೀಲ್’ ಎಂದು ಈ ಬಾರಿಯ ಘೋಷವಾಕ್ಯವನ್ನು ಹೆಸರಿಸಿದೆ’ ಎಂದರು.

‘ಜಗತ್ತಿನಾದ್ಯಂತ 16,000ಕ್ಕೂ ಅಧಿಕ ಸ್ವಾದಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ವಿಶ್ವದ 340 ಕೋಟಿ  ಜನರು ಒಂದಲ್ಲಾ ಒಂದು ರೂಪದಲ್ಲಿ ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡುತ್ತಿದ್ದಾರೆ. 13 ರಿಂದ 15 ವರ್ಷದೊಳಗಿನ 3.70 ಕೋಟಿ ಮಕ್ಕಳು ಜಾಗತಿಕವಾಗಿ ತಂಬಾಕು ವ್ಯಸನಿಗಳಾಗಿ ಮಾರ್ಪಟ್ಟಿದ್ದಾರೆ. ತಂಬಾಕು ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ’ ಎಂದರು.

‘ವಿಶ್ವದಾದ್ಯಂತ ಪ್ರತಿ ವರ್ಷ 8.7 ಕೋಟಿ ಜನರು ತಂಬಾಕು ಸಂಬಂಧಿತ ಕಾಯಿಲೆಗಳಿಂದ ಮೃತಪಡುತ್ತಿದ್ದಾರೆ. 65,000 ಮಕ್ಕಳು ಕೊನೆಯುಸಿರೆಳೆಯುತ್ತಿದ್ದಾರೆ. ಗರ್ಭಿಣಿಯರಲ್ಲಿ ತಂಬಾಕು ಸೇವನೆಯಿಂದ ಅವಧಿಗೆ ಮುನ್ನವೇ ಹೆರಿಗೆ, ಕಡಿಮೆ ತೂಕದ ಮಕ್ಕಳ ಜನನವಾಗುತ್ತಿದೆ. ಜನಿಸಿದ ಶಿಶುಗಳ ಬೆಳವಣಿಗೆ ತಂಬಾಕು ಮಾರಕವಾಗಿದೆ’ ಎಂದರು.

‘ಭಾರತದಲ್ಲಿ ಅತ್ಯಧಿಕವಾಗಿ ತಂಬಾಕು ಉತ್ಪನ್ನಗಳನ್ನು ಬಳಸಲಾಗುತ್ತದೆ. ಇದು ಕ್ಯಾನ್ಸರ್ ರೋಗಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಇ-ಸಿಗರೇಟ್ ಉತ್ಪನ್ನಗಳು ಸಹ ಮಾರುಕಟ್ಟೆ ಬಂದಿವೆ. ಭಾರತದಲ್ಲಿ ಇವುಗಳಿಗೆ ನಿಷೇಧ ಹೇರಲಾಗಿದೆ. ಯುವಕರು ತಂಬಾಕು ವ್ಯಸನಗಳಿಗೆ ಬಲಿಯಾದಂತೆ ಎಚ್ಚರ ವಹಿಸಬೇಕು’ ಎಂದರು.

ತಂಬಾಕು ರಹಿತ ದಿನದ ಅಂಗವಾಗಿ ನಗರದ ಜಿಲ್ಲಾಸ್ಪತ್ರೆ ಬಳಿ ಜಾಗೃತಿ ಜಾಥಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಜಿ.ಪಿ.ರೇಣುಪ್ರಸಾದ್ ಚಾಲನೆ ನೀಡಿದರು. ನರ್ಸಿಂಗ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಜಿಲ್ಲಾಸ್ಪತ್ರೆಯಿಂದ ಜೋಗಿಮಟ್ಟಿ ರಸ್ತೆ ಮಾರ್ಗವಾಗಿ ನಡೆದ ಜಾಥಾ ಜಿಲ್ಲಾ ಪಂಚಾಯಿತಿ ತಲುಪಿತು.

ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರ ಕಂಬಾಳಿ ಮಠ, ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎನ್.ಪ್ರಭುದೇವ, ಮಲ್ನಾಡು ಆಸ್ಪತ್ರೆಯ ಡಾ.ಅನಿಲ್.ಸಿ.ಪಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.