ADVERTISEMENT

ಜನ್ಮದಿನಕ್ಕಾಗಿ 3000 ಗಿಡ ನೆಡಲು ಮುಂದಾದ ಯುವಕ

ಚಿತ್ರನಟ ಉಪೇಂದ್ರ ಅವರ ಹೇಳಿಕೆಯಿಂದ ಪ್ರೇರಣೆ ಪಡೆದ ಮೀಸೆ ಪಾರ್ಥ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 4:58 IST
Last Updated 12 ಜೂನ್ 2021, 4:58 IST
ಹಿರಿಯೂರು ತಾಲ್ಲೂಕಿನ ಅಮ್ಮನಹಟ್ಟಿಯಲ್ಲಿ ಮೀಸೆ ಪಾರ್ಥ ಅವರು ಈಚೆಗೆ ತಮ್ಮ ಜನ್ಮದಿನದ ನೆನಪಿಗಾಗಿ ಜೋಡಿ ರಂಗನಾಥಸ್ವಾಮಿ ಬೆಟ್ಟದ ಇಳಿಜಾರಿನಲ್ಲಿ ಗಿಡ ನೆಟ್ಟರು.
ಹಿರಿಯೂರು ತಾಲ್ಲೂಕಿನ ಅಮ್ಮನಹಟ್ಟಿಯಲ್ಲಿ ಮೀಸೆ ಪಾರ್ಥ ಅವರು ಈಚೆಗೆ ತಮ್ಮ ಜನ್ಮದಿನದ ನೆನಪಿಗಾಗಿ ಜೋಡಿ ರಂಗನಾಥಸ್ವಾಮಿ ಬೆಟ್ಟದ ಇಳಿಜಾರಿನಲ್ಲಿ ಗಿಡ ನೆಟ್ಟರು.   

ಅಮ್ಮನಹಟ್ಟಿ (ಹಿರಿಯೂರು): ಚಿತ್ರನಟ ಉಪೇಂದ್ರ ಅವರಿಂದ ಪ್ರೇರಣೆ ಪಡೆದ ಯುವಕ, ತಮ್ಮ ಜನ್ಮದಿನವನ್ನು ತಾಲ್ಲೂಕಿನ ಅಮ್ಮನಹಟ್ಟಿಯಲ್ಲಿ ಮೂರು ಸಾವಿರ ಗಿಡ ನೆಡುವ ಮೂಲಕ ಆಚರಿಸಿಕೊಳ್ಳಲು ಮುಂದಾಗಿದ್ದಾರೆ.

ಒಂದು ವರ್ಷದ ಹಿಂದೆ ಚಳ್ಳಕೆರೆಗೆ ಪ್ರಯಾಣಿಸುವಾಗ ಬಸ್ಸಿನಲ್ಲಿ ದೊರೆತಿದ್ದ ₹ 25 ಸಾವಿರವನ್ನು ವಾರಸುದಾರರನ್ನು ಹುಡುಕಿ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದ, ಸಮಾಜಮುಖಿ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಅಮ್ಮನಹಟ್ಟಿಯ ಮೀಸೆ ಪಾರ್ಥ ಅವರೇ ಆ ಯುವಕ.

‘ಜೂನ್ 10 ನನ್ನ ಜನ್ಮದಿನ. ಚಿತ್ರನಟ ಉಪೇಂದ್ರ ಅವರು, ‘ಕಟೌಟ್‌ಗಳ ಮೇಲೆ ಹಾಲು ಸುರಿದು, ದೇವರಿಗೆ ನೂರಾರು ಈಡುಗಾಯಿ ಅರ್ಪಿಸಿ ಹುಟ್ಟುಹಬ್ಬ ಆಚರಿಸುವ ಬದಲು ಸಸಿಗಳನ್ನು ನೆಡಿ. ನನ್ನ ಜನ್ಮದಿನಕ್ಕೆ ಬರುವ ಅಭಿಮಾನಿಗಳು ಗಿಡಗಳನ್ನು ತನ್ನಿ’ ಎಂದು ಕರೆ ನೀಡಿದ್ದನ್ನು ಸ್ಮರಿಸಿಕೊಂಡು, ಜನ್ಮದಿನದಂದು ದಿನ ನೂರು ಗಿಡಗಳನ್ನು ನೆಟ್ಟಿದ್ದೇನೆ’ ಎನ್ನುತ್ತಾರೆ ಪಾರ್ಥ.

ADVERTISEMENT

‘ಗ್ರಾಮಕ್ಕೆ ಕೂಗಳತೆ ದೂರದಲ್ಲಿ ಜೋಡಿ ರಂಗನಾಥಸ್ವಾಮಿ ಬೆಟ್ಟವಿದೆ. ಬೆಟ್ಟದ ಇಳಿಜಾರಿನಲ್ಲಿ ಮೂರು ಸಾವಿರ ಗಿಡ ನೆಡಬೇಕು ಎಂದು ತೀರ್ಮಾನಿಸಿದ್ದೇನೆ. ಸ್ನೇಹಿತರು ಸಹಕಾರ ನೀಡುವ ಭರವಸೆ ಕೊಟ್ಟಿದ್ದಾರೆ. ಲಾಕ್‌ಡೌನ್ ಇರುವ ಕಾರಣ ಗುಂಡಿ ತೆಗೆಸಲು ಜೆಸಿಬಿ ಯಂತ್ರಗಳು ಸಿಗುತ್ತಿಲ್ಲ. ಲಾಕ್‌ಡೌನ್ ತೆರವುಗೊಂಡರೆ ಗುಂಡಿ ತೋಡಿಸಿ ಕೊಡುವ ಭರವಸೆಯನ್ನುಗ್ರಾಮ ಪಂಚಾಯಿತಿಯವರು ನೀಡಿದ್ದಾರೆ. ಮುಂಗಾರು ಮಳೆ ನೋಡಿಕೊಂಡು 2–3 ತಿಂಗಳ ಒಳಗೆ ನಾನಂದುಕೊಂಡಿರುವ ಕೆಲಸ ಮಾಡುತ್ತೇನೆ. ಗಿಡ ನೆಡುವ ಜೊತೆಗೆ ಬೇಸಿಗೆ ಸಮಯದಲ್ಲಿ ನೀರುಣಿಸಲು ಕಚ್ಚಾ ರಸ್ತೆಯ ವ್ಯವಸ್ಥೆಯನ್ನೂ ಮಾಡುತ್ತೇವೆ. ಒಂದೆರಡು ವರ್ಷಗಳಲ್ಲಿ ಜೋಡಿ ರಂಗನಾಥಸ್ವಾಮಿ ಬೆಟ್ಟ ಹಸಿರಿನಿಂದ ಕಂಗೊಳಿಸುವಂತಾಗಬೇಕು ಎಂಬುದು ನನ್ನ ಬಯಕೆ’ ಎನ್ನುತ್ತಾರೆ
ಅವರು.

ಪಾರ್ಥ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕೆಲವರು ಪಾರ್ಥನಂತೆ ಮೂರು ಸಾವಿರದ ಬದಲು ಹುಟ್ಟುಹಬ್ಬಕ್ಕೆ ಮೂರು ಗಿಡ ನೆಟ್ಟು ಬೆಳೆಸಿದರೂ ಆಮ್ಲಜನಕಕ್ಕೆ ಸಿಲಿಂಡರ್‌ಗೆ ಮೊರೆಹೋಗಬೇಕಿಲ್ಲ ಎಂಬ ಸಲಹೆಯನ್ನೂ
ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.