ADVERTISEMENT

ಕೊಬ್ಬರಿ ಮಿಠಾಯಿಯನ್ನೂ ಕೊಡದ ಮೋದಿ- ಯುವ ಕಾಂಗ್ರೆಸ್‌ ಅಧ್ಯಕ್ಷ ನಲಪಾಡ್‌

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 5:42 IST
Last Updated 9 ಮಾರ್ಚ್ 2022, 5:42 IST
ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಯುವ ಕಾಂಗ್ರೆಸ್‌ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ‘ಯುವಕ್ರಾಂತಿ’ ಸಮಾವೇಶವನ್ನು ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ಉದ್ಘಾಟಿಸಿದರು.
ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಯುವ ಕಾಂಗ್ರೆಸ್‌ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ‘ಯುವಕ್ರಾಂತಿ’ ಸಮಾವೇಶವನ್ನು ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ಉದ್ಘಾಟಿಸಿದರು.   

ಚಿತ್ರದುರ್ಗ: ಅಧಿಕಾರಕ್ಕೆ ಏರಿದರೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ನೀಡಿದ್ದ ನರೇಂದ್ರ ಮೋದಿ, ಏಳು ವರ್ಷಗಳಲ್ಲಿ 14 ಕೋಟಿ ಉದ್ಯೋಗ ನೀಡಬೇಕಿತ್ತು. ಯುವಸಮೂಹಕ್ಕೆ ಉದ್ಯೋಗವಿರಲಿ ಕೊಬ್ಬರಿ ಮಿಠಾಯಿ ಕೂಡ ನೀಡಲಿಲ್ಲ ಎಂದು ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ವ್ಯಂಗ್ಯವಾಡಿದರು.

ಇಲ್ಲಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಯುವ ಕಾಂಗ್ರೆಸ್‌ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ‘ಯುವಕ್ರಾಂತಿ’ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘2014ರಲ್ಲಿ ಜನರನ್ನು ಮೋಡಿ ಮಾಡಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ. ಪದವೀಧರ ಯುವ ಸಮೂಹ ನಿರುದ್ಯೋಗಿಗಳಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ವಿದ್ಯಾವಂತ ಯುವ ಸಮೂಹಕ್ಕೆ ಪಕೋಡ ಮಾರಾಟ ಮಾಡುವಂತೆ ಪ್ರಧಾನಿ ಸಲಹೆ ನೀಡಿದ್ದಾರೆ’ ಎಂದು ಕಿಡಿಕಾರಿದರು.

ADVERTISEMENT

‘ದೇಶದ ಬಗ್ಗೆ ನೈಜ ಕಾಳಜಿ ಇರುವುದು ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ. ಅಧಿಕಾರಕ್ಕೆ ಬಂದಾಗ ಜನಪರ ಆಡಳಿತ ನೀಡುವುದು ಕಾಂಗ್ರೆಸ್‌ ಪಕ್ಷದ ಧ್ಯೇಯ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್‌ಗೆ ಆಡಳಿತದ ಅನುಭವವಿದೆ. ಇತಿಹಾಸ ತಿರುಚುವ ಹಾಗೂ ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನು ಬದಲಾವಣೆ ಮಾಡುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ದೇಶವನ್ನು ಅಂಬಾನಿ ಹಾಗೂ ಅದಾನಿ ಅವರಿಗೆ ಒತ್ತೆ ಇಡುತ್ತಿದೆ’ ಎಂದರು.

‘ದೇಶದಲ್ಲಿರುವ ಬಹುತೇಕ ಜಲಾಶಯಗಳು ಕಾಂಗ್ರೆಸ್‌ ಅಧಿಕಾರವಧಿಯಲ್ಲಿ ನಿರ್ಮಾಣವಾಗಿವೆ. ಕಾವೇರಿ ನದಿ ನೀರಿಗೆ ಮೇಕೆದಾಟು ಸಮೀಪ ಜಲಾಶಯ ನಿರ್ಮಿಸುವ ಯೋಜನೆ ಸಿದ್ಧವಾಗಿದ್ದು ಕೂಡ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಅವರು ಯೋಜನೆ ಕಾರ್ಯಗತಗೊಳಿಸಲು ಪ್ರಯತ್ನಿಸಿದರು. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸರಿಯಾದ ರೀತಿಯಲ್ಲಿ ಬೆಂಬಲ ಸಿಗಲಿಲ್ಲ’ ಎಂದು ದೂರಿದರು.

‘2030ರ ಹೊತ್ತಿಗೆ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಲಿದೆ. ನೀರಿಗೆ ಬಿಕ್ಕಟ್ಟು ಸೃಷ್ಟಿಯಾದರೆ ಬೆಂಗಳೂರಿನಲ್ಲಿರುವ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಲಿವೆ. ರಾಜ್ಯದ ಜನರ ಮೇಲೆ ಇದರ ಪರಿಣಾಮ ಉಂಟಾಗಲಿದೆ. ಹೀಗಾಗಿ, ಮೇಕೆದಾಟು ಪಾದಯಾತ್ರೆ ನಡೆಸಲಾಗಿದೆ. ಇದಕ್ಕೆ ನಿರೀಕ್ಷೆ ಮೀರಿ ಜನ ಬೆಂಬಲ ವ್ಯಕ್ತವಾಗಿದೆ. ಇದನ್ನು ಗಮನಿಸಿದ ಬಿಜೆಪಿ, ಪಾದಯಾತ್ರೆ ಹಾಳು ಮಾಡುವ ಪ್ರಯತ್ನ ನಡೆಸಿ ವಿಫಲವಾಗಿದೆ. ಬೆಂಗಳೂರಿನಲ್ಲಿ ಸಮಾವೇಶ ನಡೆದ ಮುರುದಿನವೇ ಸರ್ಕಾರ ಯೋಜನೆಗೆ ಅನುದಾನ ಮೀಸಲಿಟ್ಟಿದೆ’ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಬಿ.ಎನ್‌.ಚಂದ್ರಪ್ಪ ಮಾತನಾಡಿ, ‘2014ರ ಬಳಿಕ ದೇಶದಲ್ಲಿ ಹಲವು ಬದಲಾವಣೆಗಳಾಗಿವೆ. ಸಂವಿಧಾನಕ್ಕೆ ಪ್ರಧಾನಿ ನಮಸ್ಕಾರ ಮಾಡಿ ಸಂವಿಧಾನವನ್ನೇ ಬದಲಾಯಿಸುವ ಹುನ್ನಾರ ನಡೆಸುತ್ತಿದ್ದಾರೆ. ಸಫಾಯಿ ಕರ್ಮಚಾರಿಗಳ ಪಾದ ತೊಳೆದು ಮೇಲ್ವರ್ಗದ ಸಮುದಾಯಕ್ಕೆ ಶೇ 10ರಷ್ಟು ಮೀಸಲಾತಿ ನೀಡಿದ್ದಾರೆ. ಸಬ್‌ಕಾ ಸಾತ್‌ ಸಬ್‌ಕಾ ವಿಕಾಸ್‌ ಎನ್ನುತ್ತಾ ಅಲ್ಪಸಂಖ್ಯಾತ ಸಮುದಾಯವನ್ನು ದೂರ ಮಾಡುತ್ತಿದ್ದಾರೆ. ಇದನ್ನು ಯುವ ಸಮೂಹ ಅರ್ಥ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ದೇಶದ ಸಂವಿಧಾನಕ್ಕೆ ಆಪತ್ತು ಎದುರಾಗಿದೆ. ಇದನ್ನು ರಕ್ಷಣೆ ಮಾಡುವ ಕಾರ್ಯವನ್ನು ಯುವಸಮೂಹ ಮಾಡಬೇಕಿದೆ. ರಾಜಕಾರಣ ಉದ್ಯಮದಂತೆ ಗೋಚರವಾಗುತ್ತಿದೆ. ರಾಜಕೀಯ ಖಂಡಿತ ಇದೊಂದು ಉದ್ಯಮವಲ್ಲ. ಸೇವಾ ಕ್ಷೇತ್ರವಾಗಿ ಉಳಿಯಬೇಕು. ಬದ್ಧತೆಯಿಂದ ಕೆಲಸ ಮಾಡಬೇಕು. ಹಿರಿಯರ ಸಲಹೆ ಪಡೆದು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಪಕ್ಷದ ಮುಖಂಡರಿಗೆ ಅಗೌರವ ತೋರುವ ನಡವಳಿಕೆ ಸಲ್ಲದು’ ಎಂದರು.

ಮಾಜಿ ಶಾಸಕ ಉಮಾಪತಿ, ವಿಧಾನಪರಿಷತ್‌ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ನಂದಿನಿಗೌಡ, ಕಾಂಗ್ರೆಸ್‌ ಮುಖಂಡರಾದ ಬಿ.ಸೋಮಶೇಖರ್‌, ಸವಿತಾ ರಘು, ಆನಂದ್‌, ಸಂಪತ್‌ಕುಮಾರ್‌, ಮೈಲಾರಪ್ಪ ಇದ್ದರು.

***

ದೇಶದ ಜನಸಂಖ್ಯೆಯಲ್ಲಿ ಶೇ 45ರಷ್ಟು ಯುವ ಸಮೂಹವಿದೆ. ಉದ್ಯೋಗ ಸೌಲಭ್ಯ ನೀಡದೇ ಯುವ ಜನರನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ. ಧರ್ಮಗಳ ನಡುವೆ ವಿಷಬೀಜ ಬಿತ್ತುತ್ತಿದೆ.

ಕಾರೆಹಳ್ಳಿ ಉಲ್ಲಾಸ್‌, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ

***

‘ರಾಜಕಾರಣಕ್ಕೆ ಹಣ ಬೇಕಿಲ್ಲ’

‘ಕಾಂಗ್ರೆಸ್‌ ಪಕ್ಷದಲ್ಲಿ ಅಧಿಕಾರ ಅನುಭವಿಸಿದ ಅನೇಕರು ಕೋಟಿ ಕೋಟಿ ಸಂಪಾದನೆ ಮಾಡಿದ್ದಾರೆ. ಆದರೆ, ಪಕ್ಷ ಸಂಘಟನೆಗೆ ಯಾರೊಬ್ಬರೂ ಹಣ ಬಿಚ್ಚುತ್ತಿಲ್ಲ. ದುಡಿದ ಹಣವನ್ನು ಪಕ್ಷ ಸಂಘಟನೆಗೆ ಬಳಸುತ್ತಿರುವುದು ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ಮಾತ್ರ’ ಎಂದು ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್‌.ಮಂಜುನಾಥ್‌ ತಿಳಿಸಿದರು.

‘ರಾಜಕೀಯಕ್ಕೆ ಹಣವೇ ಬೇಕಿಲ್ಲ ಎಂಬುದನ್ನು ತೋರಿಸಿಕೊಟ್ಟವರು ಡಿ.ಕೆ.ಶಿವಕುಮಾರ್‌. ತೀರಾ ತಳಹಂತದಿಂದ ಬೆಳೆದು ಬಂದ ಅವರು ಪ್ರಧಾನಿ ಮೋದಿ ಅವರನ್ನು ಎದುರಿಸುವ ಶಕ್ತಿ ಬೆಳೆಸಿಕೊಂಡಿದ್ದಾರೆ. ಪಕ್ಷ ಇನ್ನಷ್ಟು ಶಿಸ್ತುಬದ್ಧವಾಗಿ ಸಂಘಟಿತವಾದರೆ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.