ADVERTISEMENT

`ಅನಾಥಾಶ್ರಮ' ಸೇರಿದ ಮಕ್ಕಳು...!

ಬಂಟ್ವಾಳ: ತಂದೆ-ತಾಯಿ ಜಗಳ

ಮೋಹನ್ ಕೆ.ಶ್ರೀಯಾನ್
Published 6 ಜುಲೈ 2013, 6:33 IST
Last Updated 6 ಜುಲೈ 2013, 6:33 IST

ಬಂಟ್ವಾಳ: ತಾಲ್ಲೂಕಿನ ಅಮ್ಟೋಡಿ ಗ್ರಾಮದ ನಲ್ಕೆಮಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಸ್ತಿನಿಂದ ಓದಿಕೊಂಡಿದ್ದ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳು ತನ್ನ ತಂದೆ-ತಾಯಿ ಜಗಳದಿಂದ ಕಂಗೆಟ್ಟು ಪುತ್ತೂರಿನ ಅನಾಥಾಶ್ರಮ ಸೇರಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಈ ವಿದ್ಯಾರ್ಥಿಗಳನ್ನು ಸುದರ್ಶನ್ ಮತ್ತು ಆತನ ಸಹೋದರಿ ಸುವಾಸಿನಿ ಎಂದು ಗುರುತಿಸಲಾಗಿದೆ.

ಅಮ್ಟೋಡಿ ನಿವಾಸಿ ಆಶಾಲತಾ ಮತ್ತು ಮಂಡಾಡಿ ನಿವಾಸಿ ಸುರೇಂದ್ರ ದಂಪತಿ ಈ ಮಕ್ಕಳ ಹೆತ್ತವರು. ಆರಂಭದಲ್ಲಿ ಬಹಳ ಅನ್ಯೋನ್ಯತೆಯಿಂದಿದ್ದ ದಂಪತಿ ಬಳಿಕ  ಜಗಳವಾಡುತ್ತಿದ್ದರು ಎನ್ನಲಾಗಿದೆ. ಇದಕ್ಕಾಗಿ ಮಂಡಾಡಿ ಕಿರಿಯ ಪ್ರಾಥಮಿಕ ಶಾಲೆಗೆ ದಾಖಲಾಗಿದ್ದ ಇಬ್ಬರು ಮಕ್ಕಳನ್ನು ತಾಯಿ ಆಶಾಲತಾ ತವರು ಮನೆ ಅಮ್ಟೋಡಿಗೆ ಕರೆದುಕೊಂಡು ಬಂದು ನಲ್ಕೆಮಾರು ಶಾಲೆಗೆ ದಾಖಲಿಸಿದ್ದರು. ಪುತ್ರ ಸುದರ್ಶನ್ 6ನೇ ತರಗತಿ ಮತ್ತು ಪುತ್ರಿ ಸುವಾಸಿನಿ 4ನೇ ತರಗತಿಯಲ್ಲಿ ಓದುತ್ತಿದ್ದರು.

ಈ ಶಾಲೆಯಲ್ಲಿ ಖಾಸಗಿ ಶಾಲೆಯನ್ನು ಮೀರಿಸುವಂತೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಆಕರ್ಷಕ ಸಮವಸ್ತ್ರ, ಟೈ, ಮತ್ತು ಬೂಟು ಒದಗಿಸಲಾಗುತ್ತಿದ್ದು, ಅಕ್ಷರ ದಾಸೋಹದ ಜೊತೆಗೆ ಮಕ್ಕಳಿಗೆ ದಾನಿಗಳಿಂದ ಉಚಿತ ಪುಸ್ತಕವನ್ನೂ ಒದಗಿಸಲಾಗುತ್ತಿತ್ತು ಎನ್ನುತ್ತಾರೆ ಇಲ್ಲಿನ ಮುಖ್ಯಶಿಕ್ಷಕಿ ಚಂದ್ರಾವತಿ.

ಆಶಾಲತಾ ಸಹೋದರ ಗುಣಕರನೊಂದಿಗೆ ಸೇರಿಕೊಂಡು ತನ್ನ ಇಬ್ಬರೂ ಮಕ್ಕಳನ್ನು ನಿರ್ಗತಿಕರಂತೆ ಪುತ್ತೂರಿನ ರಾಮಕೃಷ್ಣ ಸೇವಾಶ್ರಮಕ್ಕೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆರೋಪಿಸಿ ತಂದೆ ಸುರೇಂದ್ರ ಮತ್ತು ಅಜ್ಜಿ ಪಾರ್ವತಿ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಆದರೆ ತಂದೆ ಸುರೇಂದ್ರ ಪ್ರತಿದಿನ ಮದ್ಯ ಸೇವಿಸಿ ಬಂದು ಮಕ್ಕಳು ಮತ್ತು ತನಗೆ ಹೊಡೆಯುತ್ತಿರುವುದಾಗಿ ಆಶಾಲತಾ ಪೊಲೀಸರಲ್ಲಿ ಅಳಲು ತೋಡಿಕೊಂಡಿರುವುದಾಗಿ ತಿಳಿದುಬಂದಿದೆ.

ಅಮ್ಟೋಡಿ ಗ್ರಾಮ ಪಂಚಾಯಿತಿ ಒಪ್ಪಿಗೆ ಪಡೆಯದೆ ಮಕ್ಕಳಿಬ್ಬರನ್ನು ಅನಾಥಾಶ್ರಮಕ್ಕೆ ಸೇರಿಸಿಕೊಂಡಿರುವುದರ ಔಚಿತ್ಯವಾದರೂ ಏನು ಎಂಬುದಾಗಿ ಗ್ರಾ.ಪಂ.ಅಧ್ಯಕ್ಷೆ ಬಬಿತಾ ಕೋಟ್ಯಾನ್ ಮತ್ತು ಮುಖ್ಯ ಶಿಕ್ಷಕಿ ಚಂದ್ರಾವತಿ ಅವರು ಪುತ್ತೂರಿಗೆ ತೆರಳಿ ಆಶ್ರಮದಲ್ಲಿ ವಿಚಾರಿಸಿದ್ದಾರೆ. ಇದೇ ವೇಳೆ ಮಕ್ಕಳು ನಲ್ಕೆಮಾರು ಶಾಲೆಗೆ ಬರುವುದಾಗಿ ಪಟ್ಟು ಹಿಡಿದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಉಸ್ಮಾನ್ ಅವರಲ್ಲಿ ವಿನಂತಿಸಿಕೊಳ್ಳಲಾಗಿದೆ ಎಂದು ನಗರ ಠಾಣಾಧಿಕಾರಿ ಶೇಖರ್ ತಿಳಿಸಿದ್ದಾರೆ. ಇನ್ನೊಂದೆಡೆ ಜಿಲ್ಲಾ ಮಕ್ಕಳ ರಕ್ಷಣಾ ಆಯೋಗವು ಮಂಗಳವಾರ ನಲ್ಕೆಮಾರು ಶಾಲೆಗೆ ಭೇಟಿ ನೀಡಿ ತನಿಖೆ ಆರಂಭಿಸಿದ್ದು, ಒಟ್ಟಿನಲ್ಲಿ `ಹೆತ್ತವರ ಜಗಳದಲ್ಲಿ ಕೂಸು ಬಡವಾಯಿತು' ಎಂಬ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.                                                                
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.