ಮಂಗಳೂರು: ಅಪಾಯಕಾರಿ ರಾಸಾಯನಿಕ ವಸ್ತುಗಳನ್ನು ಸಾಗಿಸುವಾಗ ಅತೀವ ಎಚ್ಚರಿಕೆ ಅಗತ್ಯ ಎಂದು ಮಂಗಳೂರು ಕೆಮಿಕಲ್ಸ್-ಫರ್ಟಿಲೈಸರ್ಸ್ ಸಂಸ್ಥೆ ಸುರಕ್ಷೆ ವಿಭಾಗದ ಹಿರಿಯ ವ್ಯವಸ್ಥಾಪಕ ಎಸ್.ನರಸಿಂಹ ಮೂರ್ತಿ ಹೇಳಿದರು.
ದಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು, `ಅಪಾಯಕಾರಿ ರಾಸಾಯನಿಕ ಸಾಗಣೆಯಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷಾ ವಿಧಾನಗಳು~ ಕುರಿತು ಮಾತನಾಡಿದರು.
ನಿತ್ಯಜೀವನದ ಅಗತ್ಯಗಳು ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಅನೇಕ ರಾಸಾಯನಿಕ ಸಾಮಗ್ರಿಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಹಾಗಾಗಿ ಈ ರಾಸಾಯನಿಕಗಳ ಸಾಗಾಣಿಕೆ ಅನಿವಾರ್ಯವೂ ಆಗಿದೆ. ಕೆಲವು ಸಂದರ್ಭ ಗಳಲ್ಲಿ ಅವಘಡ ಸಂಭವಿಸಿ ಅಪಾಯಕಾರಿ ರಾಸಾಯನಿಕ ವಸ್ತುಗಳು ವಾತಾವರಣದ ಸಂಪರ್ಕಕ್ಕೆ ಬಂದಾಗ ಅನೇಕ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುವುದು. ಈ ಕ್ರಮಗಳ ಬಗ್ಗೆ ಸಾಗಣೆದಾರರು, ಚಾಲಕರು ಹಾಗೂ ಅವಘಡ ನಿಯಂತ್ರಕರಿಗೆ ಮಾಹಿತಿ ಇರಲೇಬೇಕು ಎಂದರು.
ಅಪಾಯಕಾರಿ ರಾಸಾಯನಿಕಗಳ ಪೈಕಿ ಅನೇಕ ವಿಭಜನೆಗಳಿವೆ. ಸ್ಫೋಟಕ, ವಿಷಕಾರಿ, ರೋಗಕಾರಿ, ವಿಕಿರಣ ಹಾಗೂ ಇತರ ವಿಭಾಗಗಳಿವೆ. ಇವುಗಳಲ್ಲೂ ಘನ, ದ್ರವ ಹಾಗೂ ಅನಿಲ ರಾಸಾಯನಿಕಗಳಿವೆ. ಈ ರಾಸಾಯನಿಕಗಳನ್ನು ಸಾಗಿಸುವಾಗ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲೇ ಬೇಕು.
ಕೆಲವು ರಾಸಾಯನಿಕಗಳಿಗೆ ಅವುಗಳದೇ ಆದ ಅಪಾಯ ಸೂಚಕ ಚಿನ್ಹೆಗಳನ್ನು ಸಾಗಿಸುವ ವಾಹನಗಳ ಮೇಲೆ ಮುದ್ರಿಸಬೇಕು. ಬೆಂಕಿ ನಿಯಂತ್ರಕ ರಾಸಾಯನಿಕಗಳನ್ನು ಜತೆಗಿರಿಸಿಕೊಳ್ಳಬೇಕು. ಅಲ್ಲದೇ, ವಾಹನಗಳ ಮೇಲೆ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಪಟ್ಟಿಯನ್ನು ಮುದ್ರಿಸಿರಬೇಕು ಎಂದರು.
ಅಗ್ನಿಶಾಮಕ ದಳ ಅಥವಾ ಪೊಲೀಸ್ ಸಿಬ್ಬಂದಿಗೆ ರಾಸಾಯನಿಕ ಸಾಗಣೆ ವಾಹನಗಳ ಮೇಲೆ ಮುದ್ರಿತಗೊಂಡಿರುವ ಚಿನ್ಹೆಗಳನ್ನು ಓದಲು ತರಬೇತಿ ಇರುತ್ತದೆ. ಆದರೆ, ವಾಹನ ಚಾಲಕರಿಗೂ ಈ ಮಾಹಿತಿ ಇರಬೇಕು. ಈ ಬಗ್ಗೆ ಸೂಕ್ತ ತರಬೇತಿಯನ್ನು ಅವರು ಪಡೆದಿರಬೇಕು ಎಂದರು.
ಸಾರ್ವಜನಿಕರಿಗೆ ಅವಘಡ ಸಂಭವಿಸಿದ ಸಂದರ್ಭದಲ್ಲಿ ಅಪಾಯಕಾರಿ ರಾಸಾಯನಿ ಕಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ತರಬೇತಿ ಹೊಂದಿದ ಸಿಬ್ಬಂದಿ ಸಾರ್ವಜನಿಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.ದಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಗೌರವ ಕಾರ್ಯದರ್ಶಿ ಶ್ರೀಹರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.