ADVERTISEMENT

ಅಸಮಾನತೆ, ಭ್ರಷ್ಟಾಚಾರ ತಾಂಡವ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 7:05 IST
Last Updated 23 ಸೆಪ್ಟೆಂಬರ್ 2011, 7:05 IST

ಮುಡಿಪು:  ಬಸವಣ್ಣ, ಅಲ್ಲಮ ಪ್ರಭು ಅವರಂತಹ ಮಹಾನ್ ವ್ಯಕ್ತಿಗಳು 12ನೇ ಶತಮಾನದಲ್ಲಿಯೇ ಸಮಾಜದಲ್ಲಿದ್ದ ಅನಿಷ್ಟ ಗಳಾದ ಜಾತಿಪದ್ಧತಿ, ಲಿಂಗಭೇದ ತೊಡೆದು ಹಾಕಿ ಎಲ್ಲರಲ್ಲೂ ಸಮಾನತೆಯ ಭಾವ ಮೂಡಿಸಲು ಯತ್ನಿಸಿದ್ದರು.
 
ಆದರೆ ಇಂದಿನ ಕಾಲದಲ್ಲಿ ಇದಕ್ಕೆ ತದ್ವಿರುದ್ಧವಾಗಿ ಎಲ್ಲೆಡೆಯೂ ಅಸಮಾನತೆ, ಜಾತಿ ಸಂಘರ್ಷ, ಭ್ರಷ್ಟಾಚಾರಗಳೇ ತಾಂಡವವಾಡುತ್ತಿದೆ ಎಂದು ರಾಜ್ಯ ಮಾನವ ಹಕ್ಕು ಆಯೋಗ ಅಧ್ಯಕ್ಷ ನ್ಯಾ. ಎಸ್.ಆರ್.ನಾಯಕ್ ವಿಷಾದಿಸಿದರು.

ಮಂಗಳೂರು ವಿಶ್ವವಿದ್ಯಾಲಯ ಹಾಗೂ ರಾಜ್ಯ ಮಾನವ ಹಕ್ಕು ಆಯೋಗದ ಸಹಯೋಗದಲ್ಲಿ ಮಂಗಳೂರು ವಿ.ವಿ. ಹಳೆ ಸೆನೆಟ್ ಸಭಾಂಗಣದಲ್ಲಿ ಗುರುವಾರ ನಡೆದ `ಭಾರತದಲ್ಲಿ ಮಾನವ ಹಕ್ಕುಗಳ ಇಂದಿನ ಸ್ಥಿತಿಗತಿ~ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ರಾಷ್ಟ್ರದ ಜನರಲ್ಲಿ ಮಾನವೀಯ ಮೌಲ್ಯ ಕಡಿಮೆಯಾಗಿ ಮೇಲ್ವರ್ಗ-ಕೆಳವರ್ಗ, ಶ್ರೀಮಂತ-ಬಡವ ಎಂಬ ಅಸಮಾನತೆ ಹಾಗೂ ಭ್ರಷ್ಟಾಚಾರ ಕಾಣುವಂತಾಗಿದೆ. ಈಗ ಜಾತಿಗೊಂದರಂತೆ ಗುರುಗಳು ಹುಟ್ಟಿಕೊಂಡು ಸಮಾಜ ಮತ್ತಷ್ಟು ಛಿದ್ರಗೊಂಡಿದೆ.

ಇದರಿಂದಾಗಿ ಯುವ ಸಮುದಾಯ ಈಗಲೇ ಎಚ್ಚೆತ್ತುಕೊಂಡು ಸಂವಿಧಾನಿಕವಾಗಿ ನಮಗೆ ದೊರೆತಿರುವ  ಮಾನವ ಹಕ್ಕುಗಳ ಪರಿಪಾಲನೆ ಮಾಡಿ ಸಮಾಜದಲ್ಲಿ ಬೇರೂರಿರುವ ತೊಡಕು ಕಿತ್ತೊಗೆಯಬೇಕಾಗಿದೆ ಎಂದರು.

ರಾಜ್ಯದಲ್ಲೇ ಮುಂದುವರಿದ ಜಿಲ್ಲೆ ಎಂದು ಹೆಗ್ಗಳಿಕೆ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂದು ಹಲವು ವಿಷಯದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ಇಲ್ಲಿನ ಕೆಲವು ಮಕ್ಕಳು ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿದ್ದಾರೆ. ಹಲವರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ಮಾತನಾಡಿ ಭಾರತದಲ್ಲಿ ಇನ್ನೂ ಶೇ 50ರಷ್ಟು ಜನ ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ವಾಸಿಸುತ್ತಿದ್ದಾರೆ.

ಭ್ರಷ್ಟಾಚಾರಿಗಳಿಂದಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು  ಇದನ್ನು ತಡೆಗಟ್ಟಲು ವಿದ್ಯಾರ್ಥಿ ಸಮುದಾಯ ಹಾಗೂ ಸರ್ಕಾರೇತರ ಸಂಘಟನೆಗಳು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಕುಲಸಚಿವ ಪ್ರೊ. ಚಿನ್ನಪ್ಪಗೌಡ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಪಿ.ಎಲ್. ಧರ್ಮ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅನಿತಾ ರವಿಶಂಕರ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT