ADVERTISEMENT

ಆಂಬ್ರೋಸ್ ಮಾಡ್ತಾ ಪಾರ್ಥಿವ ಶರೀರ ಇಂದು ನಗರಕ್ಕೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 10:26 IST
Last Updated 17 ಡಿಸೆಂಬರ್ 2012, 10:26 IST

ಮಂಗಳೂರು: ಕಳೆದ ಶನಿವಾರ ಐವರಿ ಕೋಸ್ಟ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಆರ್ಚ್‌ಬಿಷಪ್ ರೆ.ಡಾ.ಆಂಬ್ರೋಸ್ ಮಾಡ್ತಾ ಅವರ ಪಾರ್ಥಿವ ಶರೀರ ವಿಶೇಷ ವಿಮಾನದಲ್ಲಿ ಶುಕ್ರವಾರ ಬೆಳಿಗ್ಗೆ 10ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದ್ದು, ಶನಿವಾರ ಬೆಳಿಗ್ಗೆ 10ಕ್ಕೆ ಬೆಳ್ತಂಗಡಿಯ ಹೋಲಿ ರಿಡೀಮರ್ ಚರ್ಚ್‌ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಐವರಿ ಕೋಸ್ಟ್‌ನ ವಿದೇಶಾಂಗ ಸಚಿವ ಚಾರ್ಲ್ಸ್ ಕೋಫಿ ಬಿಬಿ ಅವರ ನೇತೃತ್ವದ 11 ಮಂದಿಯ ತಂಡ ಆರ್ಚ್‌ಬಿಷಪ್ ಮಾಡ್ತಾ ಅವರ ಪಾರ್ಥಿವ ಶರೀರದ ಜತೆಗೆ ಶುಕ್ರವಾರ ನಗರಕ್ಕೆ ಆಗಮಿಸಲಿದೆ. ಪಾರ್ಥಿವ ಶರೀರವನ್ನು ರೊಸಾರಿಯೊ ಚರ್ಚ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಸಂಜೆ 4ಕ್ಕೆ ವಿಶೇಷ ಪ್ರಾರ್ಥನೆ ನಡೆಯಲಿದೆ. ಬಳಿಕ ಅದನ್ನು ಬೆಳ್ತಂಗಡಿಗೆ ಕೊಂಡೊಯ್ಯಲಾಗುವುದು ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೆ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರ್ಚ್ ಬಿಷಪ್ ಮಾಡ್ತಾ ನಿಧನಕ್ಕೆ ಪೋಪ್ 16ನೇ ಬೆನೆಡಿಕ್ಟ್ ಮತ್ತು ವ್ಯಾಟಿಕನ್‌ನ ವಿದೇಶಾಂಗ ಕಾರ್ಯದರ್ಶಿ ಟಾರ್ಸಿಸಿಯೊ ಬರ್ಟೋನ್ ಅವರು ಶೋಕ ಸಂದೇಶ ಕಳುಹಿಸಿದ್ದಾರೆ. ಅದನ್ನು ಮಾಡ್ತಾ ಅವರ ಕುಟುಂಬದವರಿಗೆ ರವಾನಿಸಲಾಗಿದೆ ಎಂದು ಬಿಷಪ್ ತಿಳಿಸಿದರು.

ಆಂಬ್ರೋಸ್ ಮಾಡ್ತಾ ಅವರು ಶಾಂತಿದೂತ ಎಂದೇ ಖ್ಯಾತರಾದವರು. ಕಳೆದ ವರ್ಷ ಐವರಿ ಕೋಸ್ಟ್‌ನಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದಾಗ ತೆರೆಮರೆಯಲ್ಲಿ ಸಂಧಾನ ನಡೆಸಿ ಬಿಕ್ಕಟ್ಟು ಬಗೆಹರಿಸಿದವರು ಮಾಡ್ತಾ. ಮಂಗಳೂರು ಭಾಗದಿಂದ ತೆರಳಿ ಹಲವಾರು ದೇಶಗಳಲ್ಲಿ ಕ್ರೈಸ್ತ ಧರ್ಮ ಪ್ರಸಾರ ನಡೆಸುವ ಮೂಲಕ ಆರ್ಚ್‌ಬಿಷಪ್ ಅವರು ಈ ನೆಲಕ್ಕೆ ವಿಶೇಷ ಕೀರ್ತಿ ತಂದಿದ್ದಾರೆ ಎಂದು ಅವರು ಹೇಳಿದರು. ಮೊನ್ಸಿಂಜರ್ ಡೆನಿಸ್ ಮೊರಾಸ್ ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.