ADVERTISEMENT

ಎಂಡೋಸಲ್ಫಾನ್ ಬಳಕೆಗೆ 6 ತಿಂಗಳು ನಿರ್ಬಂಧ ನಿರ್ಧಾರ: ಸಂತ್ರಸ್ತರ ಪ್ರತಿಕ್ರಿಯೆ.

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 10:50 IST
Last Updated 18 ಫೆಬ್ರುವರಿ 2011, 10:50 IST

ಮಂಗಳೂರು: ‘ಬದುಕು ಮತ್ತು ಭವಿಷ್ಯವನ್ನು ಕಸಿದುಕೊಂಡು ನಮ್ಮನ್ನು ನರಕದ ಕೂಪಕ್ಕೆ ತಳ್ಳಿದ ‘ಎಂಡೋಸಲ್ಫಾನ್’ ಎಂಬ ವಿಷದ ಮಳೆ ಇನ್ನೆಂದೂ ಬೀಳದಿರಲಿ. ಸದ್ಯ ಆರೋಗ್ಯದಿಂದ ಇರುವವರ ಮೇಲೆ ದುಷ್ಪರಿಣಾಮ ಬೀರದಿರಲಿ. ನಮಗಾದ ಸ್ಥಿತಿ ಇನ್ನೊಬ್ಬರಿಗೆ ಬಾರದಿರಲಿ’....- ಆಕಾಶದತ್ತ ಮುಖಮಾಡಿ ಕಣ್ಣೀರಿಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕುಗ್ರಾಮಗಳಲ್ಲಿನ ಎಂಡೋಸಲ್ಫಾನ್ ಸಂತ್ರಸ್ತ ಕುಟುಂಬಗಳ ಅಳಲಿಗೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ.

ರಾಜ್ಯದಲ್ಲಿ ಎಂಡೋಸಲ್ಫಾನ್ ಬಳಕೆ ಮೇಲೆ 6 ತಿಂಗಳ ತಾತ್ಕಾಲಿಕ ನಿರ್ಬಂಧ ಹೇರುವ ನಿರ್ಧಾರವನ್ನು ಸರ್ಕಾರ ಗುರುವಾರ ಕೈಗೊಂಡಿದ್ದು, ತಮ್ಮದಲ್ಲದ ತಪ್ಪಿಗೆ ದೈಹಿಕ- ಮಾನಸಿಕ ವೈಕಲ್ಯ -ಹಿಂಸೆ ಅನುಭವಿಸುತ್ತಾ ನಾಲ್ಕು ಗೋಡೆಗಳ ಮಧ್ಯೆ ಬಿಕ್ಕಳಿಸುತ್ತಿರುವ ಸಾವಿರಾರು ಕುಟುಂಬಗಳ ನೋವಿಗೆ ತಕ್ಕಮಟ್ಟಿಗಿನ ಸ್ಪಂದನೆ ಸಿಕ್ಕಂತಾಗಿದೆ.

ಗೇರು ಅಭಿವೃದ್ಧಿ ನಿಗಮ ತನ್ನ ಅಧೀನದ ಗೇರುತೋಟಗಳಿಗೆ ಸಿಂಪಡಿಸಿದ (ಏರಿಯಲ್ ಸಿಂಪಡಣೆ) ಎಂಡೋಸಲ್ಫಾನ್ ಕೀಟನಾಶಕ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬೆಳಾಲು, ಬಂದಾರು, ಬಾರ್ಯ, ಇಳಂತಿಲ, ಕರಾಯ, ಕೊಕ್ಕಡ, ಪಟ್ರಮೆ, ನಿಡ್ಲೆ, ಪುತ್ತೂರು ತಾಲ್ಲೂಕಿನ ಗೋಳಿತೊಟ್ಟು, ಹಳೆನೆರಂಕಿ, ರಾಮಕುಂಜ, ಆಲಂಕಾರು, ಕೊಂತೂರು, ಹೀರೇಬಂಡಾಡಿ ಮತ್ತಿತರ ಗ್ರಾಮಗಳಲ್ಲಿ ವಿಷದ ಮಳೆಯಾಗಿ ಪರಿಣಮಿಸಿ ದಶಕಗಳೇ ಕಳೆದಿವೆ.

ಈ ಪ್ರದೇಶಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿರುವ ಗೇರು ತೋಟವನ್ನು ಬಾಧಿಸುವ ‘ಟಿ-ಮೊಸ್ಕಿಟೊ’ ಕೀಟ ನಿಯಂತ್ರಣಕ್ಕಾಗಿ ನಿಗಮ ಎಂಡೋಸಲ್ಫಾನ್ ಕೀಟನಾಶಕವನ್ನು 1980ರಿಂದ 2000ವರೆಗೂ ಪ್ರತಿ ಡಿಸೆಂಬರ್‌ನಲ್ಲಿ ತಲಾ ಎರಡು ಬಾರಿಯಂತೆ ಸಿಂಪಡಿಸಿತ್ತು. ಅದರ ಮಾರಕ ಪರಿಣಾಮವನ್ನು(ಬುದ್ಧಿಮಾಂಧ್ಯತೆ, ಕ್ಯಾನ್ಸರ್, ಬಂಜೆತನ, ಹುಟ್ಟುವಾಗಲೇ ಅಂಗವಿಕಲತೆ) ಇಲ್ಲಿನ ಕುಟುಂಬಗಳು ಈಗಲೂ ಉಣ್ಣುತ್ತಿವೆ. 

‘ಎಂಡೋಸಲ್ಫಾನ್ ಸಮಸ್ಯೆ ಬಗ್ಗೆ ಶೋಭಕ್ಕ (ರಾಜ್ಯ ಇಂಧನ ಸಚಿವೆ) ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಬಳಿಕ ಕೊಕ್ಕಡಕ್ಕೆ (2010ರ ಫೆ. 28) ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೊಕ್ಕಡ, ಪಟ್ರಮೆ, ನಿಡ್ಲೆ ಗ್ರಾಮದ 211 ಕುಟುಂಬಗಳಿಗೆ ತಲಾ ರೂ. 50 ಸಾವಿರದಂತೆ ಪರಿಹಾರಧನ ವಿತರಿಸಿದರು. ಅಂಗವಿಕಲತೆಯ ಪ್ರಮಾಣಕ್ಕೆ ಅನುಗುಣವಾಗಿ 232 ಮಂದಿಗೆ ಮಾಸಾಶನ ವಿತರಿಸಲು ಆದೇಶಿಸಿದರು’ ಎನ್ನುತ್ತಾರೆ ಎಂಡೋಸಲ್ಫಾನ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ, ಕೊಕ್ಕಡ ನಿವಾಸಿ ಶ್ರೀಧರ ಗೌಡ ಕೆಂಗುಡೇಲು.

ವಿಪರ್ಯಾಸವೆಂದರೆ ಶ್ರೀಧರ್ ಗೌಡ ಅವರೂ ಎಂಡೋಸಲ್ಫಾನ್ ಪರಿಣಾಮದಿಂದಲೇ ಕಣ್ಣಿನ ದೃಷ್ಟಿ ಕಳೆದುಕೊಂಡು ಪರಿತಪಿಸುತ್ತಿದ್ದಾರೆ.‘ಕೇರಳದ ಕಾಸರಗೋಡಿನ ಗೇರು ಅಭಿವೃದ್ಧಿ ನಿಗಮ ಪ್ರದೇಶದ ನಿವಾಸಿಗಳು ಎಂಡೋಸಲ್ಫಾನ್ ವಿರುದ್ಧ ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲಿಯೇ ಈ ಭಾಗದಲ್ಲೂ ಪ್ರತಿಭಟನೆಆರಂಭವಾಗಿತ್ತು. ಒಂಬತ್ತು ವರ್ಷ ಸತತವಾಗಿ ಜನಪ್ರತಿನಿಧಿಗಳ ಬೆನ್ನುಬಿದ್ದ ಪರಿಣಾಮ ವರ್ಷದ ಹಿಂದೆ ಸರ್ಕಾರ ಕಣ್ಣು ತೆರೆಯಿತು. ಸಮೀಕ್ಷೆ ಮೂಲಕ ಸಂತ್ರಸ್ತ ಕುಟುಂಬಗಳನ್ನು ಗುರುತಿಸಿ ಪರಿಹಾರಧನ ನೀಡುವ ಮೂಲಕ ನೆರವಿನ ಹಸ್ತ ಚಾಚಿತು. ಆದರೆ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರ ಕಲ್ಪಿಸುವ ಭರವಸೆ ಮಾತ್ರ ವರ್ಷ ಕಳೆದರೂ ಇನ್ನೂ ಸಾಕಾರಗೊಂಡಿಲ್ಲ’ ಎಂದೂ ಅವರು ವಿಷಾದಿಸಿದರು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಬಾಧಿತರ ಬಗ್ಗೆ ವೈಜ್ಞಾನಿಕ ಸಮೀಕ್ಷೆ ಸಮಗ್ರವಾಗಿ ನಡೆಯಬೇಕು. ಸಂತ್ರಸ್ತರಿಗೆ ಸೂಕ್ತ ಪರಿಹಾರ, ಚಿಕಿತ್ಸಾ ವ್ಯವಸ್ಥೆ, ಪುನರ್ವಸತಿ ಕಲ್ಪಿಸಬೇಕು. ಎಂಡೋಸಲ್ಫಾನ್ ಬಳಕೆ ರಾಷ್ಟ್ರಾದ್ಯಂತ ನಿಷೇಧಿಸಬೇಕು. ಇದೀಗ ರಾಜ್ಯದಲ್ಲಿ ತಾತ್ಕಾಲಿಕ ನಿರ್ಬಂಧ ಹೇರಿರುವ ಸರ್ಕಾರ, ಶಾಶ್ವತ ನಿಷೇಧಕ್ಕೆ ಕೇಂದ್ರಕ್ಕೆ ಶಿಪಾರಸು ಮಾಡಲು ನಿರ್ಧರಿಸಿರುವುದು ಸಂತ್ರಸ್ತರ ಹೋರಾಟಕ್ಕೆ ಸಿಕ್ಕ ನೈತಿಕ ಜಯ. ರಾಷ್ಟ್ರಾದ್ಯಂತ ಎಂಡೋಸಲ್ಫಾನ್ ನಿಷೇಧಕ್ಕೆ ಕೇಂದ್ರ ಹಿಂದೇಟು ಹಾಕಿದರೆ ಸಂತ್ರಸ್ತ ಕುಟುಂಬಗಳು ಒಟ್ಟಾಗಿ ಮಾರ್ಚ್ ಎರಡನೇ ವಾರದಲ್ಲಿ ನೆಲ್ಯಾಡಿ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಿವೆ’ ಎಂದು ಎಚ್ಚರಿಸಿದರು.

‘ಕೊಕ್ಕಡ, ಪಟ್ರಮೆ, ನಿಡ್ಲೆ ಪ್ರದೇಶದ ಸಂತ್ರಸ್ತರಿಗೆ ಕೊಕ್ಕಡದಲ್ಲಿ ಪುನರ್ವಸತಿ ಕೇಂದ್ರ ಕಲ್ಪಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ರಾಜ್ಯ ಸರ್ಕಾರ ಈಗಾಗಲೇ ರೂ. 25 ಲಕ್ಷ ಬಿಡುಗಡೆ ಮಾಡಿದೆ. ಕೊಕ್ಕಡ ಆರೋಗ್ಯ ಕೇಂದ್ರ ಬಳಿ 10 ಸೆಂಟ್ಸ್ ಜಾಗವನ್ನೂ ಗುರುತಿಸಲಾಗಿದೆ. ಆಗಬೇಕಾದ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವರದಿಯೂ ಹೋಗಿದೆ. ತಕ್ಷಣಕ್ಕೆ ತಾತ್ಕಾಲಿಕ ಪುನರ್ವಸತಿ ಕೇಂದ್ರವನ್ನು ಕೊಕ್ಕಡ ಗ್ರಾಮ ಪಂಚಾಯಿತಿಯ ಸುವರ್ಣ ಸೌಧದಲ್ಲಿ ಆರಂಭಿಸಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಿರ್ವಹಿಸಲು ಪ್ರಕ್ರಿಯೆ ನಡೆಯುತ್ತಿದೆ ಎಂದು ಬೆಳ್ತಂಗಡಿ ತಹಸೀಲ್ದಾರ್ ಪ್ರಮೀಳಾ ಎಂ.ಕೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕೊಕ್ಕಡ(ಉಪ್ಪಿನಂಗಡಿ):  ರಾಜ್ಯ ಸರ್ಕಾರ ಎಂಡೋಸಲ್ಫಾನ್ ಬಳಕೆ ಮೇಲೆ 6 ತಿಂಗಳ ಕಾಲ ನಿಷೇಧ ಹೇರಿರುವುದು ನೈತಿಕ ಜಯ ದೊರೆತಂತಾಗಿದೆ. ಎಂಡೋಸಲ್ಫಾನ್‌ನಿಂದಾಗಿ ಜನರ ಮೇಲೆ ದುಷ್ಪರಿಣಾಮವಾಗಿದೆ ಎಂಬುದನ್ನು ಸರ್ಕಾರ ಒಪ್ಪಿಕೊಂಡಂತಾಗಿದೆ. ಇದು ತಾತ್ಕಾಲಿಕ ಜಯ. ದೇಶದಾದ್ಯಂತ ನಿಷೇಧ ಆಗಬೇಕು ಎಂದು ಕೊಕ್ಕಡದ ಎಂಡೋಸಲ್ಫಾನ್ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ‘ಪ್ರಜಾವಾಣಿ’ಗೆ ಗುರುವಾರ ಪ್ರತಿಕ್ರಿಯಿಸಿದರು.

ಕರ್ನಾಟಕ ಅಥವಾ ಕೇರಳದಲ್ಲಿ ನಿಷೇಧ ಹೇರಿದ ಮಾತ್ರಕ್ಕೆ ಆ ಕೀಟನಾಶಕ ಇಲ್ಲಿಗೆ ಬರಲಾರದು ಎಂದು ಹೇಳಲಾಗದು. ಕೇರಳದಲ್ಲಿ ನಿಷೇಧ ಹೇರಿದ್ದಾಗ ಅಲ್ಲಿನ ಮಂದಿ ಕರ್ನಾಟಕದಿಂದ ತೆಗೆದುಕೊಂಡು ಹೋಗಿ ಬಳಕೆ ಮಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಕರ್ನಾಟಕದ ಮಂದಿ ತಮಿಳುನಾಡಿನಿಂದ ತಂದು ಉಪಯೋಗಿಸುವ ಸಾಧ್ಯತೆಯಿದೆ. ಆದ್ದರಿಂದ ದೇಶದಾದ್ಯಂತ ನಿಷೇಧ ಆಗಬೇಕು ಎಂದು ಅವರು ಆಗ್ರಹಿಸಿದರು. ಮಾರ್ಚ್ ಒಳಗಾಗಿ ನಿಷೇಧ ಹೇರಬೇಕು. ಇಲ್ಲದಿದ್ದಲ್ಲಿ ಮಾರ್ಚ್ 10ರಂದು ಬೆಳ್ತಂಗಡಿ ತಾಲ್ಲೂಕು ಮತ್ತು ಪುತ್ತೂರು ತಾಲ್ಲೂಕಿನ ಸಂತ್ರಸ್ತರು ಮತ್ತು ಸಂಘ-ಸಂಸ್ಥೆಗಳ ಸಹಕಾರದೊಂದಿದೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾ ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರ ನಿಷೇಧ ಹೇರಿರುವುದು ಸ್ವಾಗತಾರ್ಹ. ಇದರ ಯಶಸ್ಸಿಗೆ ಸಹಕರಿಸಿದ ಸಚಿವೆ ಶೋಭಾ ಕರಂದ್ಲಾಜೆ ಮತ್ತು ರಾಜ್ಯ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆನಂದ ಅವರು ಈ ವಿಚಾರದಲ್ಲಿ ಅಭಿನಂದನಾರ್ಹರು. ಸಂತ್ರಸ್ತರಿಗೆ ಶೀಘ್ರ ಪರಿಹಾರ ದೊರಕುವಂತಾಗಬೇಕು ಎಂದು ಆಗ್ರಹಿಸಿದ್ದಾರೆ.
ಸಿದ್ದಿಕ್ ನೀರಾಜೆ

 
‘ಯಾರಿಗೂ ಬಾರದಿರಲಿ’

‘ಎಂಡೋಸಲ್ಫಾನ್ ನಿಷೇಧ ಹೇರಿದ ವಿಷಯವನ್ನು ತಿಳಿದು ಸಂತೋಷ ಆಯಿತು. ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಎಂಡೋಸಲ್ಫಾನ್‌ನಿಂದಾಗಿ ನನ್ನ 19 ವರ್ಷದ ಮಗ ಸಂತೋಷ ಈಗಲೂ ಮಗುವಿನಂತೆ ಹಾಸಿಗೆಯಲ್ಲಿಯೇ ಇದ್ದಾನೆ. ಮುಂದಿನ ದಿನಗಳಲ್ಲಾದರೂ ಇಂಥ ದುಸ್ಥಿತಿ ಯಾವ ತಾಯಿಗೂ ಬಾರದಿರಲಿ. ಮುಂದೆ ಕೇಂದ್ರ ಸರ್ಕಾರವೂ ಇಂತದ್ದೇ ನಿರ್ಧಾರ ತೆಗೆದುಕೊಳ್ಳಬೇಕು. ಆಗ ಮಾತ್ರ ನಮ್ಮಂತಹವರ ಕಣ್ಣೀರು ಒರೆಸಿದಂತಾಗುವುದು’.
ಗ್ರೇಸಿ ಡಿಸೋಜ, ಕೊಕ್ಕಡ
ಸಂತ್ರಸ್ತ ಸಂತೋಷ್ ಮಿನೇಜಸ್ ಅವರ ತಾಯಿ
‘ನಾನು ಪಾಪಿಯಾಗಿದ್ದೇನೆ’...

ADVERTISEMENT

‘ಎಂಡೋಸಲ್ಫಾನ್ ದುಷ್ಪರಿಣಾಮದಿಂದಾಗಿ ನಾನು ಪಾಪಿಯಾಗಿದ್ದೇನೆ. ನನ್ನ ಮೂರು ಮಕ್ಕಳು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ರೀತಿಯ ಕಷ್ಟ ಇನ್ನು ಯಾರಿಗೂ ಬಾರದಿರಲಿ. ಈ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಬೇರೆಯವರಿಗಾದರೂ ಪ್ರಯೋಜನವಾಗಲಿ’.
ರಾಜೀವಿ, ಆಲಂಕಾರು
ಅಂಗವಿಕಲತೆಗೊಳಗಾಗಿರುವ ವಿದ್ಯಾ, ದಿನೇಶ, ದಿನಕರ ಅವರ ತಾಯಿ
ತಡವಾದರೂ ಒಳ್ಳೆಯ ತೀರ್ಮಾನ’

ಸರ್ಕಾರ ಬಹಳ ತಡವಾಗಿಯಾದರೂ ಒಳ್ಳೆಯ ತೀರ್ಮಾನ ತೆಗೆದುಕೊಂಡಿದೆ. ಮುಂದೆ ಜನರು ಈ ರೀತಿಯ ಸಂಕಷ್ಟಗಳಿಗೆ ಗುರಿಯಾಗುವುದು ತಪ್ಪುತ್ತದೆ’
ಉಮಾವತಿ ಉಪ್ಪಾರಪಳಿಕೆ
ಅಂಗವಿಕಲ ಬಾಲಕ ಮುತ್ತಪ್ಪ ಅವರ ತಾಯಿ
‘ಒಳ್ಳೆಯ ತೀರ್ಮಾನ’

‘ನಿಷೇಧ ಹೇರಿರುವುದು ಒಳ್ಳೆಯ ತೀರ್ಮಾನ. ಪುತ್ತೂರು ತಾಲ್ಲೂಕಿನಲ್ಲಿ ಸಾವಿರಾರು ಮಂದಿ ಸಂತ್ರಸ್ತರಿದ್ದಾರೆ. ಆದರೆ ಬೆಳ್ತಂಗಡಿ ತಾಲ್ಲೂಕಿನ ಸಂತ್ರಸ್ತರಿಗೆ ಮಾತ್ರ ಪರಿಹಾರ ದೊರೆತಿದೆ. ಈ ಭಾಗದ ಮಂದಿಗೆ ಅನ್ಯಾಯ ಆಗಿದೆ. ಸರ್ಕಾರ ಇದನ್ನು ಸರಿಪಡಿಸಬೇಕು’ ಪೀರ್ ಮಹಮ್ಮದ್ ಸಾಹೇಬ್ಆಲಂಕಾರು ಎಂಡೋಸಲ್ಫಾನ್ ಹೋರಾಟ ಸಮಿತಿ ಅಧ್ಯಕ್ಷ  


 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.