ADVERTISEMENT

ಒಂದೇ ಕುಟುಂಬದ ನಾಲ್ವರ ಕೊಂದವ...

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದ ಪ್ರವೀಣ, ಒಂದಂಕಿ ಲಾಟರಿ ಚಟಕ್ಕೆ ಬಲಿಬಿದ್ದು ನಗರದ ಹೊರವಲಯದ ವಾಮಂಜೂರಿನ ಒಂದೇ ಕುಟುಂಬದ ನಾಲ್ವರನ್ನು (1994 ಫೆ .22ರಂದು) ಕೊಲೆ ಮಾಡಿದ್ದ.

ವಾಮಂಜೂರಿನ `ಶಿವಕೃಪಾ' ಮನೆಯ ಅಪ್ಪಿ ಗಾಣಿಗಾ, ಆಕೆಯ ಮಗ ಗೋವಿಂದ, ಪುತ್ರಿ ಶಕುಂತಳಾ, ಮೊಮ್ಮಗಳು ದೀಪಿಕಾ ಕೊಲೆಗೀಡಾದವರು.ಮಂಗಳೂರಿನ ಚಿಲಿಂಬಿಯಲ್ಲಿ ಟೈಲರಿಂಗ್ ವೃತ್ತಿ ನಡೆಸುತ್ತಿದ್ದ ಪ್ರವೀಣ ವಾಮಂಜೂರಿನ ಅತ್ತೆ (ಅಪ್ಪನ ತಂಗಿ) ಅಪ್ಪಿ ಗಾಣಿಗ ಅವರ  ಮನೆಗೆ ಆಗಾಗ ಹೋಗಿಬರುತ್ತಿದ್ದ. ಅಪ್ಪಿ ಅವರ ಅಳಿಯ ಜಯಂತ್ (ಶಕುಂತಳಾ ಅವರ ಗಂಡ) ವಿದೇಶದಲ್ಲಿದ್ದರು. ಅವರು ಊರಿಗೆ ಬಂದು ಹಿಂತಿರುಗಿದ್ದರು. ಜಯಂತ್ ಊರಿಗೆ ಬರುವಾಗ ಹಣ ಹಾಗೂ ಚಿನ್ನಾಭರಣ ತಂದಿರಬಹುದು ಎಂಬ ಶಂಕೆಯಿಂದ ಪ್ರವೀಣ ಮನೆಯಲ್ಲಿ ಮಲಗಿದ್ದ ನಾಲ್ವರನ್ನೂ ಪಿಕಾಸಿಯ ಹಿಡಿಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ.

ಕೊಲೆ ನಡೆದು ನಾಲ್ಕೈದು ದಿನದವರೆಗೂ ಇದೊಂದು ದರೋಡೆಕೋರರ ಗುಂಪು ನಡೆಸಿದ ಕೃತ್ಯ ಎಂದೇ ಭಾವಿಸಲಾಗಿತ್ತು. ಅಪ್ಪಿ ಅವರ ಸಹೋದರ ಮಾತನಾಡುವಾಗ `ನನ್ನ ಮಗ ಪ್ರವೀಣ ಆಗಾಗ ಈ ಮನೆಗೆ ಬರುತ್ತಿದ್ದ. ಕೊಲೆ ನಡೆದ ದಿನ ಆತನೂ ಇಲ್ಲಿರುತ್ತಿದ್ದರೆ ಖಂಡಿತಾ ಕೊಲೆಯಾಗುತ್ತಿದ್ದ' ಎಂದು ಹೇಳಿದ್ದರು. ಈ ಮಾತು ಪ್ರವೀಣನ ಮೇಲೆ ಸಂಶಯ ಹುಟ್ಟಲು ಕಾರಣವಾಗಿತ್ತು. ಸ್ಥಳದಲ್ಲಿ ದೊರಕಿದ ವಿಸ್ಕಿ ಬಾಟಲಿ ಆರೋಪಿಯ ಸುಳಿವು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT