ADVERTISEMENT

`ಕಲರ್ ಕಾರ್ಟನ್ಸ್- ಮುದ್ರಣೋದ್ಯಮದ ಮೈಲಿಗಲ್ಲು'

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 8:35 IST
Last Updated 4 ಏಪ್ರಿಲ್ 2013, 8:35 IST

ಮಂಗಳೂರು: `ಗ್ರಾಮಾಂತರ ಪ್ರದೇಶದಲ್ಲಿ ಸುಸಜ್ಜಿತ ಮುದ್ರಣಾಲಯವನ್ನು ಸ್ಥಾಪಿಸುವುದರೊಂದಿಗೆ ಕರಾವಳಿಯಲ್ಲಿ ಪ್ಯಾಕೇಜಿಂಗ್ ಮತ್ತು ಕಲರ್ ಕಾರ್ಟನ್ಸ್ ಬಳಕೆಯನ್ನು ದೊಡ್ಡಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಕೆ.ಪಿ ಶೆಟ್ಟಿ ಅವರಿಗೆ ಸಲ್ಲುತ್ತದೆ. ಇದು ಮುದ್ರಣೋದ್ಯಮ ಕ್ಷೇತ್ರದ ಮೈಲಿಗಲ್ಲು' ಎಂದು ಸಿಂಡಿಕೇಟ್ ಬ್ಯಾಂಕ್‌ನ ನಿರ್ದೇಶಕ ದಿನಕರ ಪೂಂಜ ಹೇಳಿದರು.

ಬಂಟ್ವಾಳದ ಬೆಂಜನಪದವಿನಲ್ಲಿ ಇತ್ತೀಚೆಗೆ ಜರುಗಿದ ಕರಾವಳಿ ಕಲರ್ ಕಾರ್ಟನ್ಸ್ ಸಂಸ್ಥೆಯ ರಜತಮಹೋತ್ಸವದಲ್ಲಿ ಅವರು ಮಾತನಾಡಿದರು.

ಬಂಟ್ವಾಳ ಬಿಲ್ಲವ ಸಮಾಜದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಸಮಾರಂಭ ಉದ್ಘಾಟಿಸಿದರು. ಕ್ಯಾಂಪ್ಕೊ ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ ಅವರು ಮಾತನಾಡಿದರು.

ರಾಜೇಶ್ ಹಳೆಯಂಗಡಿ ರಚಿಸಿದ `ರಜತ ರಶ್ಮಿ' ಸಾಕ್ಷ್ಯಚಿತ್ರವನ್ನು ಹಿರಿಯ ಸಾಹಿತಿ ಏರ್ಯ ಲಕ್ಷ್ಮಿನಾರಾಯಣ ಆಳ್ವ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಪುತ್ತೂರಿನ ರಾಜೇಶ್ ಪವರ್ ಪ್ರೆಸ್‌ನ ರಘುನಾಥ ರಾವ್ ಮತ್ತು ಶ್ಯಾಮಲಾ ರಾವ್ ದಂಪತಿಯನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಹಿರಿಯ ಪ್ರಬಂಧಕ ಸುಂದರ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು.

ಕರಾವಳಿ ಕಲರ್ ಕಾರ್ಟನ್ಸ್ ಸಂಸ್ಥೆಯ ನೌಕರ ವೃಂದದವರು ಮಾಲಕ ಕೆ.ಪಿ ಶೆಟ್ಟಿ ಮತ್ತು ರವಿಕಾಂತಿ ಪಿ.ಶೆಟ್ಟಿ ಅವರನ್ನು ಸನ್ಮಾನಿಸಿದರು.

ಕೆನರಾ ಬ್ಯಾಂಕ್ ಉಪಪ್ರಬಂಧಕ ಐ.ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಲೆಕ್ಕ ಪರಿಶೋಧಕ ನಿತಿನ್ ಜೆ.ಶೆಟ್ಟಿ, ರಾಜ್ಯ ಹಣಕಾಸು ನಿಗಮದ ಉಪ ಪ್ರಬಂಧಕ ಗಣಪತಿ ರಾಥೋಡ್, ಸಂಸ್ಥೆ ನಿರ್ದೇಶಕ ಪವಿತ್‌ರಾಜ್ ಶೆಟ್ಟಿ ಉಪಸ್ಥಿತರಿದ್ದರು.

ರಂಗೋಲಿ ಚಂದ್ರಹಾಸ ಶೆಟ್ಟಿ ವಂದಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು.ಮನರಂಜನಾ ಕಾರ್ಯಕ್ರಮದ ಅಂಗವಾಗಿ `ತಮಾಷೆ ಫ್ಯಾಕ್ಟರಿ' ಹಾಸ್ಯರಂಜನೆ ಮತ್ತು ಸಂಸ್ಥೆಯ ಸಿಬ್ಬಂದಿಯಿಂದ ಸಾಂಸ್ಕೃತಿಕ ವೈವಿಧ್ಯ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.