ADVERTISEMENT

ಕಾರ್ಕಳ: ರಾಜ್ಯಪಾಲರ ಕ್ರಮ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 9:00 IST
Last Updated 7 ಅಕ್ಟೋಬರ್ 2012, 9:00 IST

ಕಾರ್ಕಳ:  ನಿವೇಶನ ರಹಿತರಿಗೆ ಹಕ್ಕುಪತ್ರ ನೀಡುವ ಸರ್ಕಾರದ 94ಸಿ ತಿದ್ದುಪಡಿ ಮಸೂದೆಯನ್ನು ಹಿಂತಿರುಗಿಸಿದ ರಾಜ್ಯಪಾಲರ ಕ್ರಮವನ್ನು ವಿರೋಧಿಸಿ ಇಲ್ಲಿನ ತಾಲ್ಲೂಕು ಕಚೇರಿ ಎದುರು ಬಿಜೆಪಿ ವತಿಯಿಂದ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.

ಮಾಜಿ ಶಾಸಕ ವಿ.ಸುನಿಲ್ ಕುಮಾರ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ರಾಜ್ಯ ಬಿಜೆಪಿ ಸರ್ಕಾರ ಬಡವರ ಪರವಾಗಿದ್ದು, ಬಡ ಜನರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿತ್ತು. ಈ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕದೆ ವಾಪಸ್ ಕಳುಹಿಸಿರುವುದು ರಾಜ್ಯಪಾಲರ ಜನವಿರೋಧಿ ನಿಲುವನ್ನು ಜಗಜ್ಜಾಹೀರು ಮಾಡಿದೆ ಎಂದರು.

ರಾಜ್ಯ ಸರ್ಕಾರವು 94ಸಿ ತಿದ್ದುಪಡಿ ವಿಧೇಯಕ ಮಸೂದೆ ಜಾರಿಗೆ ತಂದಿದ್ದು, ರಾಜ್ಯಪಾಲರು ಸದರಿ ಮಸೂದೆಗೆ ಅಂಕಿತ ಹಾಕದೆ ವಾಪಸ್ ಕಳುಹಿಸಿರುವುದರಿಂದ ಜನರನ್ನು ಹಕ್ಕು ಪತ್ರದಿಂದ ವಂಚಿತರನ್ನಾಗಿ ಮಾಡಿದೆ. ಇದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 25 ಸಾವಿರಕ್ಕೂ ಅಧಿಕ ಮಂದಿ ಹಾಗೂ ಕಾರ್ಕಳದ 4ಸಾವಿರಕ್ಕೂ ಅಧಿಕ ಮಂದಿ ಸೌಲಭ್ಯ ವಂಚಿತರಾಗಿದ್ದಾರೆ ಎಂದರು.

ಇನ್ನಾದರೂ ರಾಜ್ಯಪಾಲರು ಯಾವುದೇ ಕಾರಣ ಮುಂದೊಡ್ಡದೇ 94ಸಿ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡಬೇಕು ಎಂದರು. ಪ್ರತಿಭಟನೆಯ ನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. 

ಪ್ರತಿಭಟನೆಯಲ್ಲಿ ಬಿಜೆಪಿ ಕ್ಷೇತ್ರ ಘಟಕದ ಅಧ್ಯಕ್ಷ ಮಣಿರಾಜ ಶೆಟ್ಟಿ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಜಯರಾಮ ಸಾಲ್ಯಾನ್, ಉಪಾಧ್ಯಕ್ಷ ರವೀಂದ್ರ ಕುಮಾರ್ ಕುಕ್ಕುಂದೂರು, ಬಿಜೆಪಿ ನಾಯಕ ಎಂ.ಕೆ.ವಿಜಯ ಕುಮಾರ್, ಪುರಸಭಾ ಸದಸ್ಯ ಸುರೇಶ ಮಡಿವಾಳ, ತಾಲ್ಲೂಕು ಪಂಚಾಯಿತಿ ಸದಸ್ಯ ವಿಕ್ರಮ್ ಹೆಗ್ಡೆ, ಹಿರಿಯ ನಾಯಕ ಬೋಳ ಪ್ರಭಾಕರ ಕಾಮತ್, ಪುರಸಭಾ ಮಾಜಿ ಅಧ್ಯಕ್ಷ ಪ್ರದೀಪ ಕೋಟ್ಯಾನ್, ಸುಶೀಲಾ ಕೋಟ್ಯಾನ್, ಮಾಲತಿಕಿಶೋರ್, ಜಿಲ್ಲಾ ಪಂಚಾಯಿತಿ ಸದಸ್ಯ ಉದಯ ಎಸ್.ಕೋಟ್ಯಾನ್, ಸವಿತಾ ಶಿವಾನಂದ ಕೋಟ್ಯಾನ್ ಹಾಗೂ ಸಾವಿರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.