ಬೆಳ್ತಂಗಡಿ ಮಿನಿ ವಿಧಾನ ಸೌಧದ ಬಳಿ ಅಕ್ಷರ ದಾಸೋಹ ನೌಕರರ ಪ್ರತಿಭಟನೆ ನಡೆಯಿತು
ಬೆಳ್ತಂಗಡಿ: ‘ಕಾರ್ಮಿಕ ವರ್ಗದ ಮೇಲೆ ಮಾಲೀಕ ವರ್ಗ ನಡೆಸುವ ಶೋಷಣೆಯನ್ನು ಕಾನೂನು ಬದ್ಧಗೊಳಿಸಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದುಡಿಯುವ ಜನರ ಬದುಕು ಬೇಡವಾಗಿದೆ’ ಎಂದು ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎಂ.ಭಟ್ ಹೇಳಿದರು.
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ, ಈ ನಡೆಯನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರದ ಅಂಗವಾಗಿ ಬೆಳ್ತಂಗಡಿ ತಾಲ್ಲೂಕು ಅಕ್ಷರದಾಸೋಹ ನೌಕರರು ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಅಕ್ಷರದಾಸೋಹ ನೌಕರರನ್ನು ಬೆಳಿಗ್ಗೆ 9ರಿಂದ ಮಧ್ಯಾಹ್ನ 3 ಗಂಟೆವರೆಗೆ ದುಡಿಸುವ ಸರ್ಕಾರ ಅವರಿಗೆ ಕೇವಲ ₹ 4,500 ನೀಡುತ್ತಿದೆ. ಅಕ್ಷರ ದಾಸೋಹ ನೌಕರರ ವೇತನ ಕನಿಷ್ಠ 26 ಸಾವಿರಕ್ಕೆ ಏರಿಸಬೇಕು. ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಅಡುಗೆಯವರು ಇರಬೇಕು. ಮಕ್ಕಳ ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯಬಾರದು ಎಂಬ ಬೇಡಿಕೆಯನ್ನು ಮುಂದಿಟ್ಟು ಅಕ್ಷರದಾಸೋಹ ನೌಕರರು ಈ ಹೋರಾಟ ನಡೆಸುತ್ತಿದ್ದಾರೆ’ ಎಂದರು.
‘ಜನರ ಬದುಕಿನ ಸಂಕಷ್ಟಗಳನ್ನು ನಿವಾರಿಸಲಾಗದವರು, ರೈತರಿಗೆ ಬೆಂಬಲ ಬೆಲೆ ನೀಡಲಾಗದವರು, ಭಾರತೀಯರಿಗೆ ಉದ್ಯೋಗ ನೀಡಲಾಗದವರು, ನೆಮ್ಮದಿಯ ಬದುಕು ನೀಡಲಾಗದವರು, ಬೆಲೆ ಏರಿಕೆ ನಿಯಂತ್ರಿಸಿ ಭಾರತೀಯರ ರಕ್ಷಿಸಲಾಗದವರು, ದೇಶದ ಸಾರ್ವಜನಿಕ ರಂಗವನ್ನು ಖಾಸಗಿಯವರಿಗೆ ಮಾರಾಟ ಮಾಡುವವರು ದೇಶ ಪ್ರೇಮಿಗಳಾಗಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಇಂಥವರ ಕೈಯಲ್ಲಿ ದೇಶ ಸಿಲುಕಿ ಒದ್ದಾಡುತ್ತಿದೆ ಎಂದು ಎಚ್ಚರಿಸಲು ಈ ಮುಷ್ಕರ’ ಎಂದರು.
‘ಬೀಡಿ ಕಾರ್ಮಿಕರ ವೇತನವನ್ನು ಹಿಮ್ಮುಖವಾಗಿ ನಿರ್ಧರಿಸುವ, ಕಟ್ಟಡ ಕಾರ್ಮಿಕರ ಸವಲತ್ತುಗಳ ನೀಡಲಾಗದ ಸರ್ಕಾರ ಸಮಾಜವಾದಿ ಎಂದು ಹೇಳಿಕೊಳ್ಳುವುದೇ ಅಸಹ್ಯ. 2009ರಿಂದ ಮರಳು ಮಾಫಿಯಾಕ್ಕೆ ಅವಕಾಶ ನೀಡಿದ ಈ ಜಿಲ್ಲೆಯ ಆಡಳಿತ ವರ್ಗ ಇಂದು ಅಕ್ರಮ ಮರಳೇ ಜನರಿಗೆ ಬೇಕಾದ್ದು ಎಂದು ಜನರೇ ಹೇಳುವಂತೆ ಮಾಡಿರುವುದು ಖಂಡನೀಯ. ಗ್ರಾಮ ಪಂಚಾಯಿತಿ ಮೂಲಕ ಟೆಂಡರ್ ಕರೆದು ಮರಳು ಸಮಸ್ಯೆ ನಿವಾರಿಸಬೇಕಾದ್ದು ಸರ್ಕಾರದ ಕರ್ತವ್ಯವಾಗಬೇಕು’ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ ಗೌಡ ಮಾತನಾಡಿದರು.
ಪ್ರಮುಖರಾದ ಲೋಕೇಶ್ ಕುದ್ಯಾಡಿ, ಧನಂಜಯ ಗೌಡ, ಕಿರಣಪ್ರಭ, ಜನಾರ್ದನ ಆಚಾರ್ಯ, ವಿನುಶರಮಣ, ಜಯರಾಮ ಮಯ್ಯ, ರಾಮಚಂದ್ರ, ಅಪ್ಪಿ, ಸಲಿಮೋನ್, ಅಶ್ವಿತ, ಕುಮಾರಿ, ಸದಾಶಿವ ಶೆಟ್ಟಿ ಭಾಗವಹಿಸಿದ್ದರು.
ತಾಲ್ಲೂಕು ಬೀಡಿ ಕಾರ್ಮಿಕ ಸಂಘದ ಕಾರ್ಯದರ್ಶಿ ಜಯಶ್ರೀ ಸ್ವಾಗತಿಸಿದರು. ಅಕ್ಷರ ದಾಸೋಹ ನೌಕರ ಸಂಘದ ತಾಲ್ಲೂಕು ಅಧ್ಯಕ್ಷೆ ಸುನೀತ ಮನವಿ ವಾಚಿಸಿದರು. ಸಂಘದ ತಾಲ್ಲೂಕು ಕಾರ್ಯದರ್ಶಿ ವಿನೋದ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.