ADVERTISEMENT

ಕಿನ್ನಿಗೋಳಿ ಗ್ರಾ.ಪಂ.ಗೆ ಗ್ರಾಮಸ್ಥರ ಮುತ್ತಿಗೆ

ಬ್ಯಾನರ್ ತೆಗೆದು ದಲಿತ ನಿಂದನೆಯ ಆರೋಪ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 9:00 IST
Last Updated 20 ಡಿಸೆಂಬರ್ 2013, 9:00 IST

ಕಿನ್ನಿಗೋಳಿ (ಮೂಲ್ಕಿ): ಇಲ್ಲಿನ ಪುನರೂರು ಬ್ರಹ್ಮಮುಗೇರ ದೈವಸ್ಥಾನದ ನೇಮೋತ್ಸವದ ಬ್ಯಾನರ್‌ ಅನ್ನು ಯಾವುದೇ ನೋಟಿಸ್‌ ನೀಡದೇ ತೆರವುಗೊಳಿಸಿ ದಲಿತ ವಿರೋಧಿ ನೀತಿಯನ್ನು ಅನುಸರಿಸಿದ್ದಾಗಿ ಆಕ್ಷೇಪಿಸಿ ಕಿನ್ನಿಗೋಳಿ ಗ್ರಾಮ ಪಂಚಾಯಿತಿಗೆ ಗುರುವಾರ ಗ್ರಾಮಸ್ಥರು ಮುತ್ತಿಗೆ ಹಾಕಿದರು.

ಪುನರೂರು ಹಾಗೂ ಗುತ್ತಕಾಡಿನಲ್ಲಿ ಹಾಕಿದ ಬ್ಯಾನರ್‌ ಅನ್ನು ಮಾಹಿತಿ ನೀಡದೆ ಪಂಚಾಯಿತಿ ಆಡಳಿತ ಮಂಡಳಿ ತೆಗೆದು ಹಾಕಲಾಗಿದೆ ಎಂದು ಗ್ರಾಮಸ್ಥರಾದ ಜಯಪ್ರಕಾಶ್, ದೇವಪ್ಪ, ಗೋಪಾಲಕೃಷ್ಣರ ನೇತೃತ್ವದಲ್ಲಿ ಗ್ರಾಮಸ್ಥರು ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮಾತಿನ ಚಕಮಕಿ ಗಮನಿಸಿ ಮೂಲ್ಕಿ ಠಾಣೆಯ ಸಬ್‍ ಇನ್‌ಸ್ಪೆಕ್ಟರ್‌ ಸೋಮಯ್ಯ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಕೂಡಲೇ ಪಂಚಾಯಿತಿ ಸದಸ್ಯರ ತುರ್ತು ಸಾಮಾನ್ಯ ಸಭೆಯನ್ನು ನಡೆಸಿ ಬ್ಯಾನರ್ ಹಾಕುವ ವಿಷಯದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಬೇಕೆಂದು ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲಾ ಪ್ರಕಾಶ್ ಹೆಗ್ಡೆ ಸದಸ್ಯರಲ್ಲಿ ವಿನಂತಿಸಿದಾಗ ಸದಸ್ಯರ ನಡುವೆ ಮಾತಿನ ಜಟಾಪಟಿ ನಡೆಯಿತು.

ಪಂಚಾಯಿತಿ ಸದಸ್ಯರಾದ ಸಂತಾನ್ ಡಿಸೋಜ ಹಾಗೂ ದೇವಪ್ರಸಾದ ಪುನರೂರು ಮಧ್ಯೆ ಪ್ರವೇಶಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಉಚಿತವಾಗಿ ಬ್ಯಾನರ್ ಹಾಕಲು ಸಲಹೆ ನೀಡಿದ್ದು ಅದರಂತೆ ನಿರ್ಣಯ ಕೈಗೊಳ್ಳಲಾಯಿತು. ಸರ್ಕಾರದ ಆದೇಶದಂತೆ ದರ ನಿಗದಿಪಡಿಸಲಾಗಿದೆ.

ಉಚಿತವಾಗಿ ಹಾಕುವ ಬಗ್ಗೆ ನಿರ್ಣಯ ಮಾಡಿ ಜಿಲ್ಲಾ ಪಂಚಾಯಿತಿಗೆ ಕಳುಹಿಸಲಾಗುವುದು. ಜಿಲ್ಲಾಡಳಿತದಿಂದ ಸ್ಪಷ್ಟ ಆದೇಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಡಿಸೋಜ ಹಾಗೂ ಕಾರ್ಯದರ್ಶಿ ಒಲಿವರ್ ಪಿಂಟೊ ತಿಳಿಸಿದರು. ಉಪಾಧ್ಯಕ್ಷ ಜಾನ್ಸನ್ ಡಿಸೋಜ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.