ADVERTISEMENT

ಕೃಷಿಯ ಬದಲಿಗೆ ಪಾಶ್ಚಿಮಾತ್ಯ ಸಂಸ್ಕೃತಿ :ಕಳವಳ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 9:40 IST
Last Updated 3 ಅಕ್ಟೋಬರ್ 2011, 9:40 IST

ಕಾಸರಗೋಡು: ದೇಶದಲ್ಲಿ ಇಂದು ಕೃಷಿ ಸಂಸ್ಕೃತಿಗೆ ವಿಮುಖರಾಗಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮುಖ ಮಾಡುವ ವಿದ್ಯಮಾನ ಬೆಳೆಯುತ್ತಿದೆ, ಇದು ಕಳವಳಕಾರಿ ಬೆಳವಣಿಗೆ ಎಂದು ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಕುಂಬಳೆಗೆ ಸಮೀಪದ ಬಂಬ್ರಾಣ ಬಯಲುಗದ್ದೆಯಲ್ಲಿ ಭಾನುವಾರ ಬಂಬ್ರಾಣ ಗ್ರಾಮೋತ್ಸವ ಸಮಿತಿ ಏರ್ಪಡಿಸಿದ ಬಂಬ್ರಾಣ ಗ್ರಾಮೋತ್ಸವ-2011 ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.ಗಾಂಧಿ ಜಯಂತಿಯಂದು ಗ್ರಾಮೀಣ ಸೊಗಡಿನ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ.

ಆದರೆ ಉಚಿತವಾಗಿ ಸಿಗಬೇಕಾದ ಶಿಕ್ಷಣ, ಅನ್ನ, ನೀರು ನಮ್ಮ ಸಮಾಜದಲ್ಲಿ ಮಾರಾಟದ ಸರಕಾಗಿದೆ. ಹಾಲಿಗಿಂತ ನೀರಿನ ಬೆಲೆ ಹೆಚ್ಚಾಗಿದೆ. ಪರಿಸರ ಪ್ಲಾಸ್ಟಿಕ್‌ಮಯವಾಗಿದೆ ಎಂದು ಹೇಳಿದರು.

ಕುಂಬಳೆ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಬಂಬ್ರಾಣ ವಿಶ್ವನಾಥ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ಬಂಬ್ರಾಣ ಕೊಟ್ಯದಮನೆಯ ನಾರಾಯಣ ಪೂಜಾರಿ ಅಕ್ಕಿ ಮುಡಿ ಕಟ್ಟುವ ಮೂಲಕ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿದರು.

ಕುಂಬಳೆ ಗ್ರಾ.ಪಂ. ಸದಸ್ಯರಾದ ಇಬ್ರಾಹಿಂ ಮುಗೇರ್, ರಮೇಶ್ ಭಟ್, ಬ್ಲಾಕ್ ಪಂಚಾಯತಿ ಸದಸ್ಯ ಎ.ಕೆ.ಆರಿಫ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಸುರೇಂದ್ರನ್, ಮಂಗಳೂರು ಜನಜಾಗೃತಿ ವೇದಿಕೆಯ ಸದಸ್ಯ ಕೃಷ್ಣ ಕುಂಜತ್ತೂರು, ಕಾಸರಗೋಡು ಬಸ್ಸು ಮಾಲಕರ ಸಂಘದ ಅಧ್ಯಕ್ಷ ಕೆ.ಗಿರೀಶ್, ಬಿಎಂಎಸ್ ಉಪಾಧ್ಯಕ್ಷ ಎ.ಕೇಶವ ಇದ್ದರು.

ಬಳಿಕ ಹಗ್ಗಜಗ್ಗಾಟ, ಓಟ, ಲಿಂಬೆ ಚಮಚ ಓಟ, ಮೂರು ಕಾಲಿನ ಓಟ, ಗೋಣಿ ಚೀಲ ಓಟ, ವಾಲಿಬಾಲ್, ಕಂಬಳದ ಕೋಣಗಳ ಪ್ರದರ್ಶನ, ಮಡಿಕೆಯಲ್ಲಿ ನೀರು ಹೊರುವುದು, ಮಡಲು ಹೆಣೆಯುವ ಸ್ಪರ್ಧೆಗಳು ನಡೆದವು.

ತಿಮರೆ ಚಟ್ನಿ, ಉಪ್ಪಿನಲ್ಲಿ ಹಾಕಿದ ಹಲಸಿನ ಸೋಳೆ, ಬಾಳೆ ಹೂ (ಪೂಂಬೆ) ಪಲ್ಯ, ಸಾಂಬಾರು ಮತ್ತು ಕಡಲೆ ಪಾಯಸದ ಗ್ರಾಮೀಣ ಊಟದ ರುಚಿ-ಸೊಗಡನ್ನು ಗ್ರಾಮೋತ್ಸವಕ್ಕೆ ಬಂದ ಸಾವಿರಾರು ಪ್ರೇಕ್ಷಕರು ಉಚಿತವಾಗಿ ಸವಿದರು. ಬಾಯಾರಿಕೆ ನೀಗಿಸಲು ಮಜ್ಜಿಗೆ ಮತ್ತು ಬೆಲ್ಲ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ವಾಲಿಬಾಲ್ ಪಂದ್ಯದಲ್ಲಿ ಭಾಗವಹಿಸಲು 64 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಸ್ಪರ್ಧೆಯ ದಿನದಂದು ಬೆಳಿಗ್ಗೆ 10 ಗಂಟೆಯೊಳಗೆ ತಂಡ ನೋಂದಣಿ ಮಾಡಬೇಕಿತ್ತು. ಆದರೆ 9 ಗಂಟೆಯ ಮೊದಲೇ 64 ತಂಡಗಳು ನೋಂದಣಿ ಮಾಡಿದ್ದವು.  ತಡವಾಗಿ ಬಂದ ತಂಡಗಳು ಸ್ಪರ್ಧೆಯಿಂದ ಹೊರಗುಳಿಯಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.